Thursday 23 October 2014

Monday 20 October 2014

ಶಬ್ದ ಸಂಪತ್ತಿನತ್ತ ಕೆಲವು ಹೆಜ್ಜೆಗಳು, SPOKEN ENGLISH

ಶಬ್ದ ಸಂಪತ್ತಿನತ್ತ ಕೆಲವು ಹೆಜ್ಜೆಗಳು

ಇಂಗ್ಲಿಷ್ vocabularyಯನ್ನು ಬೆಳೆಸಿಕೊಳ್ಳಲು ಅನೇಕ ಮಾರ್ಗಗಳಿವೆ. ನಮ್ಮ ಮನಸ್ಸು ಪದಗಳನ್ನು ಗುಂಪುಗಳನ್ನಾಗಿ ಸಂಯೋಜಿಸಿಕೊಂಡಿರುತ್ತದೆ. ಇವುಗಳನ್ನು clusters (ಗುಂಪುಗಳು) ಎನ್ನಬಹುದು. ನಾವು ಪದ ಸಂಪತ್ತನ್ನು ಹೆಚ್ಚಿಸಿಕೊಳ್ಳಲು ವಿವಿಧ clusterಗಳನ್ನು ಕ್ರಮಬದ್ಧವಾಗಿ ಕಲಿಯುತ್ತಾ ಹೋಗಬೇಕು.
ಕೆಲವು ಮುಖ್ಯ clusterಗಳ ಉದಾಹರಣೆಯೆಂದರೆ, ಆರೋಗ್ಯಕ್ಕೆ ಸಂಬಂಧಿಸಿದ ಪದಗಳು (medical terms), ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದ ಪದಗಳು (financial terms), ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ಪದಗಳು (educational terms) ಮುಂತಾದವು.
ಇಂದು ನಾವು medical terms ಅನ್ನು ಕಲಿಯೋಣ:
ಮೆದಳು ಮತ್ತು ನರಮಂಡಲದ ವೈದ್ಯರು- Neurologist (ನ್ಯೂರಾಲಜಿಸ್ಟ್)
ಕ್ಯಾನ್ಸರ್‌ ತಜ್ಞರು - Oncologist (ಆನ್‌ಕಾಲಜಿಸ್ಟ್)
ಮೂಳೆ ತಜ್ಞರು - Orthopedist (ಆರ್ತೋಪೆಡಿಸ್ಟ್)
ಮಕ್ಕಳ ತಜ್ಞರು - Pediatrician (ಪೀಡಿಯಾಟ್ರಿಶನ್)
ಕಣ್ಣಿನ ತಜ್ಞರು - Opthalmologist (ಆಫ್ತ್ಯಾಲ್ಮಾಲಜಿಸ್ಟ್)
ಕಿವಿ, ಗಂಟಲು, ಮೂಗಿನ ತಜ್ಞರು - ENT specialist( ಇ. ಎನ್. ಟಿ ಸ್ಪೆಶಲಿಸ್ಟ್)
ಹೃದಯ ತಜ್ಞರು - Cardiologist (ಕಾರ್ಡಿಯಾಲಜಿಸ್ಟ್)
ಹಲ್ಲಿನ ತಜ್ಞರು - Dentist (ಡೆಂಟಿಸ್ಟ್)
ಪ್ರಸೂತಿ ತಜ್ಞರು - Gynaecologist (ಗೈನಕಾಲಜಿಸ್ಟ್)
ಶ್ವಾಸಕೋಶದ ತಜ್ಞರು - Pulmonologist (ಪಲ್ಮನಾಲಜಿಸ್ಟ್)
ರಕ್ತಸಂಬಂಧಿ ರೋಗ ತಜ್ಞರು - Haemotologist (ಹೀಮಟಾಲಜಿಸ್ಟ್)
ಚರ್ಮರೋಗ ತಜ್ಞರು - Dermatologist (ಡರ್ಮಟಾಲಜಿಸ್ಟ್)
ಸಕ್ಕರೆ ಖಾಯಿಲೆ ತಜ್ಞರು - Diabetologist (ಡಯಾಬೆಟಾಲಜಿಸ್ಟ್)
ಮೂತ್ರಪಿಂಡರೋಗ ತಜ್ಞರು - Nephrologist (ನೆಫ್ರಾಲಜಿಸ್ಟ್)
ಮನೋರೋಗ ತಜ್ಞರು - Psychiatrist (ಸೈಕಾಯಾಟ್ರಿಸ್ಟ್)
ಮನಃಶಾಸ್ತ್ರಜ್ಞರು - Psychologist (ಸೈಕಾಲಜಿಸ್ಟ್)
ಅರಿವಳಿಕೆ (Anaesthesia) ತಜ್ಞರು - Anaesthetist (ಅನೆಸ್ತಟಿಸ್ಟ್)
ಇದಕ್ಕೆ ಸಂಬಂಧಿಸಿದಂತೆ ಮತ್ತೊಂದು cluster ಎಂದರೆ ವೈದ್ಯಕೀಯ ಉಪಕರಣಗಳು. ಈ ಪದಗಳನ್ನು ಗಮನಿಸಿ:
ರಕ್ತದೊತ್ತಡವನ್ನು ಅಳೆಯುವ ಉಪಕರಣ - Sphygmomanometer (ಸ್ಪಿಗ್ಮೊಮಾನೊಮೀಟರ್)
ಶಸ್ತ್ರಚಿಕಿತ್ಸೆಗೆ ಯುಪಯೊಗಿಸುವ ಚಾಕು scalpel (ಸ್ಕಾಲ್ಪಲ್)
ಹೃದಯ ಬಡಿತ ಪರೀಕ್ಷಿಸುವ ಉಪಕರಣ - stethoscope (ಸ್ಟೆತಸ್ಕೊಪ್)
ರಕ್ತದಲ್ಲಿನ ಸಕ್ಕರೆ ಅಂಶವನ್ನು ಅಳೆಯುವ ಉಪಕರಣ - glucometer(ಗ್ಲೊಕೋಮೀಟರ್), ಆಸ್ತಮಾ ಪೀಡಿತರಿಗೆ ನೆರವಾಗುವ ಉಪಕರಣ - Nebulizer (ನೆಬ್ಯುಲೈಸರ್), ಹೃದಯದ ಕಾರ್ಯಕ್ಷಮತೆಯನ್ನು ಅಳೆಯುವ ಸಾಧನ - ECG (Electro Cardio Graph) ಇ.ಸಿ.ಜಿ (ಎಲೆಕ್ಟ್ರೋಕಾರ್ಡಿಯೋ ಗ್ರಾಫ್) ಪದಗಳು ಹೇಗೆ ಕೊನೆಗೊಳ್ಳುತ್ತವೆ ಎಂಬುದನ್ನು ಗಮನಿಸಿ ಕೂಡ ನಾವು ನಮ್ಮ vocabulary ಯನ್ನು ಹೆಚ್ಚಿಸಿಕೊಳ್ಳುತ್ತಾ ಹೋಗಬಹುದು.
ಉದಾಹರಣೆಗೆ, ಅಧ್ಯಯನಕ್ಕೆ ಒಳಪಡುವ ವಿಷಯಗಳು logy ಯಿಂದ ಕೊನೆಗೊಳ್ಳುತ್ತವೆ. ಕೆಲವು ಉದಾಹರಣೆಗಳನ್ನು ಇಲ್ಲಿ ಗಮನಿಸಿ:
ಮನಸ್ಸಿಗೆ ಸಂಬಂಧಿಸಿದ ಅಧ್ಯಯನ Psychology (ಸೈಕಾಲಜಿ)
ಕೂದಲಿಗೆ ಸಂಬಂಧಿಸಿದ ಅಧ್ಯಯನ – Trichology  (ಟ್ರೈಕಾಲಜಿ)
ಲಿವರ್‌ಗೆ ಸಂಬಂಧಿಸಿದ ಅಧ್ಯಯನ -Hepatology (ಹೆಪಟಾಲಜಿ)
ಹಾಗೆಯೇ ಖಾಯಿಲೆಗಳ ಹೆಸರುಗಳು ಹೀಗಿರುತ್ತವೆ: Psychosis (ಮನೋವಿಕಾರ), Neurosis (ಉದ್ವಿಗ್ನತೆ), Hepatitis (ಲಿವರ್‌ನ ಕಾಯಿಲೆ), Dermatitis (ಚರ್ಮದ ಖಾಯಿಲೆ), Spondilitis (ಕುತ್ತಿಗೆ ಮತ್ತು ಬೆನ್ನು ಮೂಳೆಗೆ ಸಂಬಂಧಿಸಿದ ತೊಂದರೆಗಳು)...
Vocabulary ಯನ್ನು ಹೆಚ್ಚಿಸಿಕೊಳ್ಳುವ ಅತಿ ಸುಲಭ ಮಾರ್ಗವೆಂದರೆ, ನಮ್ಮ ಸಾಮಾನ್ಯ ಜ್ಞಾನವನ್ನು ವಿಸ್ತರಿಸಿಕೊಳ್ಳುವುದು. ದಿನಬಳಕೆಯ ಎಷ್ಟೋ ವಸ್ತುಗಳನ್ನು ನಾವು ಸದಾ ಬಳಸುತ್ತಿದ್ದರೂ, ಅವುಗಳ ಹೆಸರುಗಳನ್ನು ಸ್ಪಷ್ಟವಾಗಿ ತಿಳಿದುಕೊಳ್ಳುವ ಪ್ರಯತ್ನ ಮಾಡಿರುವುದಿಲ್ಲ. ನಮ್ಮ ಕಣ್ಣು, ಕಿವಿ, ಮೂಗು ಮತ್ತು ಇತರ ಇಂದ್ರಿಯಗಳು ಅವುಗಳದೇ ಆದ Vocabularyಯನ್ನು ಸದಾ ಸೃಷ್ಟಿಸುತ್ತಿರುತ್ತವೆ.
ಉದಾ: School ಎಂಬ ಪದವನ್ನು ಕಣ್ಣಿನ ಮುಖಾಂತರ ಪರಿಭಾವಿಸಿದಾಗ, ಹೊಳೆಯುವ ಪದಗಳನ್ನು ನೋಡಿ-blackboard, chair, table, teacher... ಇದೇ School ಎಂಬ ಪದವನ್ನು ಕಿವಿಯಿಂದ ಪರಿಭಾವಿಸಿದಾಗ bell, lecture, playing children ಮುಂತಾದವುಗಳು ಹೊಳೆಯುತ್ತವೆ. ಹೀಗೆ ಒಂದೊಂದು ಇಂದ್ರಿಯಕ್ಕೂ ತನ್ನದೇ ಆದ ಶಬ್ದಕೋಶವಿರುತ್ತದೆ ಎಂಬುದನ್ನು ಗಮನದಲ್ಲಿಟ್ಟರೆ ಶಬ್ದಗಳು ತಾನೇ ತಾನಾಗಿ ನಮ್ಮ ಮನಸ್ಸಿನೊಳಗೆ ಸೇರುತ್ತಿರುತ್ತವೆ. ಇದನ್ನು ನಾವು Multi sensory approach ಎಂದು ಕರೆಯುತ್ತೇವೆ. ಮೇಲೆ ಹೇಳಿದ cluster method ಹಾಗೂ multisensory method ಗಳನ್ನು ಒಟ್ಟಾಗಿ ಅಭ್ಯಸಿಸಿದಾಗ ನಮ್ಮ ಶಬ್ದ ಸಂಪತ್ತು ಅಪಾರವಾಗಿ, ಅನಾಯಾಸವಾಗಿ ಬೆಳೆಯುತ್ತಾ ಹೋಗುತ್ತದೆ. ಮಾಹಿತಿಗೆ: 98452 13417
30

Friday 17 October 2014

ಎಬೋಲಾ ವೈರಸ್‌


ವಿಶ್ವಸಂಸ್ಥೆ (ಐಎಎನ್‌ಎಸ್‌):
 ಆಫ್ರಿಕಾ ದೇಶಗಳಲ್ಲಿ ಮಾರಣಾಂತಿಕ ಎಬೋಲಾ ವೈರಸ್‌ನಿಂದ ಇದುವರೆಗೆ 4,493 ಮಂದಿ ಮೃತಪಟ್ಟಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ದೃಢಪಡಿಸಿದೆ.
‘ಡಬ್ಲ್ಯುಎಚ್‌ಒ’ ಇತ್ತೀಚೆಗೆ ಬಿಡುಗಡೆ ಮಾಡಿರುವ ಅಂಕಿ ಅಂಶದಂತೆ ಇದುವರೆಗೆ 7 ದೇಶಗಳಲ್ಲಿ 8,997 ಎಬೋಲಾ ಪ್ರಕರಣಗಳು ವರದಿ­ಯಾಗಿವೆ. ಇದರಲ್ಲಿ 4,493 ಮಂದಿ ಮೃತಪಟ್ಟಿದ್ದಾರೆ ಎಂದು ಡಬ್ಲ್ಯುಎಚ್‌ಒ’ನ ವಕ್ತಾರ ಸ್ಫೀಫನ್‌ ಡುಜಾರಿಕ್‌ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಎಬೋಲಾ ನಿಯಂತ್ರಣದಲ್ಲಿ ತೊಡಗಿರುವ ಆರೋಗ್ಯ ಕಾರ್ಯಕರ್ತರಿಗೂ ಸೋಂಕು ತಗುಲಿದೆ. 427 ಮಂದಿಗೆ ವೈರಸ್‌ ಇರುವುದು ಪತ್ತೆಯಾಗಿದ್ದು ಇವರಲ್ಲಿ  236 ಮಂದಿ ಮೃತಪಟ್ಟಿದ್ದಾರೆ ಎಂದು ಅವರು ತಿಳಿಸಿದರು.
ಆಫ್ರಿಕಾದ ಜಿನಿಯಾ, ಲೈಬೀರಿಯಾ, ಸಿರಿಯಾ ಲಿಯೊನ್‌ನಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಈ ದೇಶಗಳಲ್ಲಿ ಮುಂದಿನ 12 ತಿಂಗಳಲ್ಲಿ ಸುಮಾರು 8 ಲಕ್ಷ ಮಹಿಳೆ­ಯರು ಮಕ್ಕಳಿಗೆ  ಜನ್ಮ ನೀಡಲಿದ್ದು, ಎಲ್ಲೆಡೆ ಸೋಂಕು ಹರಡಿರುವುದರಿಂದ  ಗರ್ಭಿಣಿಯರು  ತೀವ್ರ ಎಚ್ಚರಿಕೆ ವಹಿಸು­ವಂತೆಯೂ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಪಾಲಕರ ಸಭೆಗೆ ಇರಲಿ ಸಿದ್ಧತೆ:

ಪಾಲಕರ– ಟೀಚರ್‌ ಸಭೆಗಳು ಈಗ ಹಿಂದಿಗಿಂತಲೂ ಹೆಚ್ಚು. ಕೆಲವು ಶಾಲೆಗಳು ತಿಂಗಳಿಗೊಮ್ಮೆ ಇಂಥ ಮೀಟಿಂಗ್‌ ನಡೆಸಿದರೆ, ಇನ್ನು ಕೆಲವು ಶಾಲೆಗಳಲ್ಲಿ ಪ್ರತಿ ಪರೀಕ್ಷೆಯ ನಂತರ ಅವರ ಶೈಕ್ಷಣಿಕ ಪ್ರಗತಿ ತಿಳಿಸಲು ಇಂಥ ಸಭೆ ಏರ್ಪಡಿಸುವುದಿದೆ. ಬಂದ ಪಾಲಕರನ್ನೆಲ್ಲ ಒಂದು ಕಡೆ ಕೂರಿಸಿ ಟೀಚರ್‌ ಪಾಲಕರನ್ನು ಉದ್ದೇಶಿಸಿ ಮಾತನಾಡುವುದು ಸಾಮಾನ್ಯವಾಗಿ ನಡೆಯುತ್ತದೆ.
ಪ್ರಶ್ನೆಗಳು, ಅನುಮಾನಗಳು ಇದ್ದಲ್ಲಿ ಪಾಲಕರೂ ಟೀಚರ್‌, ಪ್ರಿನ್ಸಿಪಾಲರನ್ನು ಕೇಳಿ ಪರಿಹರಿಸಿಕೊಳ್ಳಬಹುದು. ಸಲಹೆ ನೀಡಬಹುದು ಎನ್ನುತ್ತಾರೆ, ಕೆಲವು ಕಡೆ, ಬರೆದುಕೊಡಲು ಬಾಕ್ಸ್‌ ಇರಿಸಿರುತ್ತಾರೆ. ಕೆಲವು ಶಾಲೆಗಳಲ್ಲಿ ಒಂದೊಂದು ಬ್ಯಾಚ್‌ನವರಿಗೆ ಒಂದೊಂದು ಸಮಯ ನಿಗದಿಪಡಿಸಿದರೆ, ಇನ್ನು ಕೆಲವು ಕಡೆ ಎಲ್ಲ ತರಗತಿಗೂ ಒಂದೇ ದಿನ ಮೀಟಿಂಗ್‌ ಇರುತ್ತದೆ. ಒಂದೇ ಶಾಲೆಯಲ್ಲಿ ಇಬ್ಬರು ಮಕ್ಕಳು ಓದುವ ಸಂದರ್ಭಕ್ಕೆ ಹೀಗೆ ಒಂದೇ ಸಮಯಕ್ಕೆ ಇರಿಸುವ ಮೀಟಿಂಗ್‌ ಅನುಕೂಲಕರವೇ. ಅರ್ಧ ದಿನ ಕಚೇರಿಗೆ ರಜೆ ಹಾಕಿ ಇಬ್ಬರು ಮಕ್ಕಳ ಬಗ್ಗೆಯೂ ವಿಚಾರಿಸಿಕೊಂಡು ಬರಬಹುದು.
ಮೀಟಿಂಗ್‌ ತುಂಬ ಔಪಚಾರಿಕವಾಗಿದ್ದರೆ, ಕೇಳುವ ಪ್ರಶ್ನೆಗಳಿಗೆ ಸಾಮಾನ್ಯವಾದ, ವ್ಯಾಪಕ ಅರ್ಥದ ಉತ್ತರ ಬರುವುದೇ ಹೆಚ್ಚು. ನಿರ್ದಿಷ್ಟ ಉತ್ತರ ಬೇಕೆಂದಿದ್ದರೆ ಬಹಳ ಸ್ಪಷ್ಟವಾಗಿ ಪ್ರಶ್ನೆ ಕೇಳಬೇಕಾಗುತ್ತದೆ. ಹೆಂಗೆ ಓದ್ತಿದಾಳೆ ನಮ್ಮ ಮಗಳು ಎಂದು ಕೇಳಿದರೆ, ನಿಮ್ಮ ಮಗಳ ಮುಖ ಅವರ ಕಣ್ಣಮುಂದೆ ಬಂದಿರುತ್ತದೊ ಇಲ್ಲವೊ, ತಕ್ಷಣ ಅವರಿಂದ ಬರುವ ಉತ್ತರ ಪರವಾಗಿಲ್ಲ, ಚೆನ್ನಾಗಿದಾಳೆ, ನೀವೂ ಮನೆಯಲ್ಲಿ ಸ್ವಲ್ಪ ಹೇಳಿಕೊಡಿ ಅಂತ.
ಧಾರವಾಡದ ಕೆಲಗೇರಿಯಲ್ಲಿರುವ ಜೆಸ್‌ಎಸ್‌ಎಸ್‌ ಪಬ್ಲಿಕ್‌ ಶಾಲೆಯ ಪ್ರಿನ್ಸಿಪಾಲರಾದ ಜಿ.ಬಿ. ಹೆಗಡಿ, ಪಾಲಕರ ಸಭೆಗಳ ಬಗ್ಗೆ ಮಾತನಾಡುತ್ತ, ಪಾಲಕರು ಇಂತಹ ಸಭೆಗಳಿಗೆ ಬಂದಾಗ ಕೇವಲ ಕ್ಲಾಸ್‌ ಟೀಚರ್‌ ಮಾತ್ರವಲ್ಲ, ಎಲ್ಲ ವಿಷಯದ ಶಿಕ್ಷಕರನ್ನೂ ಭೇಟಿಯಾಗಬೇಕು ಎನ್ನುತ್ತಾರೆ. ‘ಸಭೆಗೆ ಬರಲು ವಿಶೇಷ ತಯಾರಿಯೇನೂ ಬೇಕಿಲ್ಲ, ಮಕ್ಕಳ ಬಗ್ಗೆ ಪಾಲಕರ ತರಹ ನಮಗೂ ಕಾಳಜಿ ಇರುತ್ತದೆ. ಆದರೆ ಒಟ್ಟಾರೆ ಇತ್ತೀಚಿನ ದಿನಗಳಲ್ಲಿ ಮಕ್ಕಳ ಮೇಲೆ ಹೆಚ್ಚಿನ ನಿರೀಕ್ಷೆಯ ಭಾರ ಇದೆ’ ಎಂದು ಅವರು ಅಭಿಪ್ರಾಯಪಡುತ್ತಾರೆ.
ಅಭ್ಯಾಸವೊಂದೇ ಅಲ್ಲ, ಇತರ ಪಠ್ಯೇತರ ಚಟುವಟಿಕೆ, ಲಲಿತಕಲೆ ಎಲ್ಲದರಲ್ಲೂ ತಮ್ಮ ಮಗು ಅತ್ಯುನ್ನತ ಸಾಧನೆ ಮಾಡಲಿ ಎಂದೇ ಪಾಲಕರು ಬಯಸುತ್ತಿದ್ದಾರೆ ಎನ್ನುತ್ತಾರೆ ಅವರು. ಏನೇ ಆದರೂ ಶಾಲೆಯಲ್ಲಿ ಮಗು ಕೇವಲ ಏಳು ಗಂಟೆ ಇರುತ್ತದೆ. ಉಳಿದಂತೆ ಮನೆಯೇ ಅದರ ಕಲಿಕೆಯ ಪ್ರಮುಖ ತಾಣ ಎನ್ನುತ್ತಾರೆ ಅವರು. ಆದ್ದರಿಂದ ಪಾಲಕರೂ ಮಗುವಿನ ಒಟ್ಟಾರೆ ವ್ಯಕ್ತಿತ್ವದ ಬೆಳವಣಿಗೆಗೆ ಸಹಕರಿಸಬೇಕು ಎನ್ನುವ ಕಿವಿಮಾತು ಅವರದು.
ಹುಬ್ಬಳ್ಳಿ– ಧಾರವಾಡದ ಕಿಡ್‌ಜೀ ಸಂಚಾಲಕರಾದ ಸವಿತಾ ದುಬೆ ಕೂಡ ಇದನ್ನೇ ಹೇಳುತ್ತಾರೆ. ‘ಪಾಲಕರೂ ಮಕ್ಕಳ ಬೆಳವಣಿಗೆಯ, ಕಲಿಕೆಯ ಘಟ್ಟಗಳನ್ನು ಗಮನಿಸುತ್ತಿರಬೇಕು. ಮಕ್ಕಳು ಶಾಲೆಗಿಂತ ಮನೆಯಲ್ಲೇ ಹೆಚ್ಚು ಸಮಯ ಕಳೆಯುವುದು. ಶಾಲೆಯಲ್ಲಿ ಸ್ಪಂದಿಸುವ ತರಹ, ಮಗು ಮನೆಯಲ್ಲೂ ಕಲಿಕೆಯ ಹಂತಗಳನ್ನು ದಾಟುತ್ತಿರುವ ಬಗೆಯನ್ನು ಗಮನವಿಟ್ಟು ಅರಿಯಬೇಕು. ಶಾಲೆಯಲ್ಲಿ ರೈಮ್‌ ಗುನುಗುವ ಮಗು ಮನೆಯಲ್ಲಿ ಹೇಳದೇ ಇದ್ದರೆ, ಅಥವಾ ಇತರ ವರ್ತನೆಯಲ್ಲಿ ಸಹಜತೆ ಇಲ್ಲದಿದ್ದರೆ ಶಾಲೆಯ ಗಮನಕ್ಕೆ ತರಬೇಕು’ ಎನ್ನುತ್ತಾರೆ ಅವರು.
ಈ ನಿಟ್ಟಿನಲ್ಲಿ ಹೆಚ್ಚು ಕಾರ್ಯಚಟುವಟಿಕೆ ಕೈಗೊಂಡು ಇದನ್ನು ಸರಿಪಡಿಸಲು ಅವರು ಶ್ರಮಿಸಲು ಇದು ಸಾಧ್ಯವಾಗುತ್ತದೆಯಂತೆ. ವೈಯಕ್ತಿಕ ಪ್ರಗತಿಯನ್ನು ಹಂತ ಹಂತವಾಗಿ ವಿವರವಾಗಿ ಮಗುವಿನ ನಿಕಟ ಸಂಪರ್ಕದಲ್ಲಿರುವ ಟೀಚರ್‌ ಬರೆದಿಟ್ಟಿರುತ್ತಾರೆ. ಪಾಲಕ– ಟೀಚರ್‌ ಸಭೆ ನಡೆದಾಗ ಅದನ್ನು ನೋಡುವ ಪಾಲಕರು ಈ ದಾಖಲೆಗೆ ಸ್ಪಂದಿಸಬೇಕು. ಅದರಂತೆಯೇ ಮಗುವಿನ ಪ್ರಗತಿ ಮನೆಯಲ್ಲಿ ಕಂಡುಬರುತ್ತಿಲ್ಲ ಎಂದಾದರೆ ಅದನ್ನೂ ಬರೆಯಲು ಅವಕಾಶವಿದೆ.
ನಂತರ ಅದನ್ನು ಸರಿಪಡಿಸುವ ಬಗ್ಗೆ ಅವರು ತಾವೇ ಶಿಕ್ಷಕರ ಜತೆ ಸಭೆ ನಡೆಸಿ ನಿರ್ಧರಿಸುತ್ತಾರೆ. ಆಗ ಒಟ್ಟಾರೆ ಮಗುವಿನ ಕಲಿಕೆ ಪರಿಪೂರ್ಣವಾಗಿರುವಂತೆ ನೋಡಿಕೊಳ್ಳಲು ಸಾಧ್ಯ ಎನ್ನುವ ಅಭಿಪ್ರಾಯ ಅವರದು. ಆದರೆ ತರಗತಿಯಲ್ಲಿ ಮಕ್ಕಳು ಹೆಚ್ಚಿದಂತೆ, ಕಲಿಕೆಯ ವಿಷಯಗಳು ಹೆಚ್ಚಿ, ಪ್ರತಿ ವಿಷಯಕ್ಕೂ ಬೇರೆ ಬೇರೆ ಟೀಚರ್‌ ಇದ್ದು, ತರಗತಿ ತುಂಬಿ ತುಳುಕಿದರೂ ಇದೇ ವಿಧಾನ ಸಲೀಸಾಗಿ ಅನುಸರಿಸಬಹುದು ಎನ್ನುತ್ತಾರೆ ಸವಿತಾ. ಯಾವ ಶಾಲೆಯೂ ಈ ವಿಧಾನವನ್ನು ಅನುಸರಿಸಬಹುದು ಎನ್ನುವ ಖಚಿತ ನಿಲುವು ಅವರದು.
ಹೌದು. ಇನ್ನೂ ಪ್ಲೇಗ್ರೂಪ್‌ನಲ್ಲಿರುವ ಮಗು, ಅಲ್ಲಿ ಇರುವ ಸ್ವಲ್ಪವೇ ಮಕ್ಕಳ ಜತೆ ಕೂಡ ಹೇಗೆ ಬೆರೆಯುತ್ತದೆ? ಆಟಿಕೆಗಳನ್ನು ಹಂಚಿಕೊಂಡು ಅವರೊಡನೆ ಕೂಡಿ ಆಡುತ್ತದೆಯೆ? ತಾನೊಂದೇ ಇರಲು ಬಯಸುತ್ತದೆಯೆ, ಗುಂಪಿನಲ್ಲಿ ಆಡಲು ಇಷ್ಟಪಡುತ್ತದೆಯೆ ಎಂಬುದೆಲ್ಲವನ್ನೂ ಅವರು ದಾಖಲಿಸುತ್ತಾರೆ. ಮನೆಯ ವಿಷಯವನ್ನು ಶಾಲೆಯಲ್ಲಿ ಹೇಳಿಕೊಳ್ಳುತ್ತದೆಯೆ? ಎಂಬುದನ್ನೂ ಅರಿತಿರುತ್ತಾರೆ.
ಯಾವುದಕ್ಕೂ ಒತ್ತಾಯ ಮಾಡದಿದ್ದರೂ ಮಗುವಿನ ಸಹಜ ಸ್ವಭಾವವನ್ನು ಗಮನಿಸಿ ಅದಕ್ಕೆ ತಕ್ಕಂತೆ ಅವರು ಕಲಿಕಾ ವಿಧಾನವನ್ನೂ ಅನುಸರಿಸುವುದು ವಿಧಾನ. ನಾವು ಶಾಲೆಯಲ್ಲಿ ನಮ್ಮ ಮಗು ಹೇಗಿದೆ ಎಂದು ಕೇಳುವಂತೆಯೇ ಅವರಿಗೂ ಕುತೂಹಲವಿದೆ. ಮಗು ಮನೆಯಲ್ಲಿ ಯಾವ ಆಟವನ್ನು ಬಹಳ ಇಷ್ಟಪಟ್ಟು ಆಡುವುದು? ಶಾಲೆಗೆ ಖುಷಿಯಿಂದ ಹೋಗುತ್ತದೆಯೆ ಎಂಬ ಮಾಹಿತಿಯನ್ನೂ ಪಾಲಕರಿಂದ ಕಲೆಹಾಕುತ್ತಾರೆ. ಸಲಹೆ, ಸೂಚನೆಗಳಿಗೆ ಮುಕ್ತಮನದ ಸ್ವಾಗತ ಅವರಿಂದ.
ಆದರೆ ಹೆಚ್ಚೇನಾದರೂ ಹೇಳಹೋದರೆ ನಮ್ಮ ಶಾಲೆಯಲ್ಲಿ ನಾವು ಇಷ್ಟೇ ಮಾಡಿಸಲು ಸಾಧ್ಯ. ಬೇಕಿದ್ದರೆ ನಿಮ್ಮ ಮಕ್ಕಳನ್ನು ಕರೆದುಕೊಂಡು ಹೋಗಬಹುದು ಎನ್ನುವ ದಾರ್ಷ್ಟ್ಯದ ಉತ್ತರವೂ ಸಿಗುತ್ತದೆ ಎಂದು ಧಾರವಾಡದ ಕಾನ್ವೆಂಟ್‌ ಶಾಲೆಯ ಪಾಲಕರೊಬ್ಬರು ಬೇಸರದಿಂದ ನುಡಿಯುತ್ತಾರೆ. ಮಾರ್ಕ್ಸ್‌ ಕಡಿಮೆ ಬಂದಿವೆ ಎಂದು ದೂರಿದರೆ, ಮಾಡ್ತಾರೆ ಬಿಡಿ ಎನ್ನುವ ಉತ್ತರ ಸಹಜ. ನಮ್ಮ ಮಕ್ಕಳ ಬಗ್ಗೆ ಅವರು ಚೆನ್ನಾದ ಅಭಿಪ್ರಾಯವನ್ನೇ ಕೊಡಬೇಕೆಂದಿಲ್ಲ.
ಅವರು ಸ್ವಲ್ಪ ನಿಷ್ಠುರವಾಗಿಯಾದರೂ ಸರಿ, ಸರಿಯಾದ ಚಿತ್ರಣವನ್ನೇ ನೀಡುವುದು ಸಮಂಜಸ ಎನ್ನುತ್ತಾರೆ ಐದನೇ ತರಗತಿಯ ವಿದ್ಯಾರ್ಥಿಯ ತಾಯಿ ವೇದಾ. ಕನಿಷ್ಠ ಮನೆಯಲ್ಲಾದರೂ ನಾವು ಆ ಅಂಶಗಳತ್ತ ವಿಶೇಷ ಗಮನ ನೀಡಬಹುದು. ಆಗ ನಿಜವಾದ ಪ್ರಗತಿ ಸಾಧ್ಯ ಎನ್ನುತ್ತಾರೆ ಅವರು.
ಪೇರೆಂಟ್‌– ಟೀಚರ್‌ ಮೀಟಿಂಗ್‌ಅನ್ನು ಹೆಚ್ಚು ಸುಲಭವಾಗಿಸಲು ಕೆಲವು ಟಿಪ್ಸ್‌ಗಳಿವೆ.
* ವಿಶೇಷ ಜ್ಞಾನ, ಬಲ, ದೌರ್ಬಲ್ಯ, ಇಷ್ಟಾನಿಷ್ಟಗಳ ಬಗ್ಗೆ ಹೇಳುವುದು ಒಳ್ಳೆಯದು. ಇದೂ ಅವರ ಕಲಿಕೆಯಲ್ಲಿ ನೆರವಾಗಬಲ್ಲದು. ನಮ್ಮ ಮಕ್ಕಳ ಬಗ್ಗೆ ನಮಗಲ್ಲದೆ ಇನ್ನಾರಿಗೆ ಹೆಚ್ಚು ತಿಳಿದಿರಲು ಸಾಧ್ಯ?
* ಮನೆಯ ವಾತಾವರಣದ ಕುರಿತು ತುಸುವಾದರೂ ತಿಳಿದಿದ್ದರೆ ಮಗುವಿನೊಂದಿಗೆ ಅವರ ಸಂವಹನ ಅದಕ್ಕೆ ತಕ್ಕಂತೆ ಇರುತ್ತದೆ. ಅಂದರೆ ಮನೆಯಲ್ಲಿ ವಿಚ್ಛೇದನ, ಒಳಜಗಳ, ಮನೆಯಲ್ಲೊಂದು ಪುಟ್ಟ ಪಾಪು ಹೀಗೆ ವಾತಾವರಣದಲ್ಲಿನ ಬದಲಾವಣೆ ಮಕ್ಕಳ ಮೇಲೆ ಪರಿಣಾಮ ಬೀರಬಲ್ಲದು. ಅವರ ಕಲಿಕೆಯ ಮೇಲೂ, ಕಲಿಕೆಯ ಸಮಯದ ಗ್ರಹಿಕೆಯ ಮೇಲೂ.
* ಮುಖ್ಯವಾಗಿ ಇತರ ಮಕ್ಕಳೊಡನೆ ಮಗುವಿನ ಸಂಬಂಧ, ವರ್ತನೆಯ ಕುರಿತು ನಾವು ಕೇಳಿಕೊಳ್ಳಬೇಕು.
*ಭಾವನಾತ್ಮಕವಾಗಿ ಹೇಗೆ ಸ್ಪಂದಿಸುತ್ತದೆ ಮಗು ಎಂಬುದೂ ಮುಖ್ಯ. ಶಾಲೆಯಲ್ಲಿ ನಮ್ಮ ಮಗು ಖುಷಿಯಾಗಿದೆಯೆ ಎಂದು ಕೇಳಿ ತಿಳಿಯಬೇಕು.
*ನಮಗಿಂತ ಭಿನ್ನವಾಗಿ ಅವರ ಟೀಚರ್‌ ಅವರನ್ನು ನೋಡಿರುತ್ತಾರೆ. ಹಾಗಾಗಿ ಯಾವ ಯಾವ ವೈಯಕ್ತಿಕ ವಿಷಯಗಳತ್ತ ಅಥವಾ ದೌರ್ಬಲ್ಯಗಳತ್ತ ನಾವು ಹೆಚ್ಚಿನ ಗಮನಹರಿಸಬೇಕಾಗುತ್ತದೆ ಎಂಬುದನ್ನು ಅವರ ಮೂಲಕ ತಿಳಿದರೆ ಸರಿ. ಅದಕ್ಕೆ ಉತ್ತರವಾಗಿ ಅವರು ಏನು ಹೇಳಿದರೂ ಕೇಳಿಸಿಕೊಳ್ಳುವ ಮುಕ್ತ ಗುಣ ನಮ್ಮಲ್ಲಿರಬೇಕಾಗುತ್ತದೆ.
*ನಮ್ಮ ಅರಿವಿಗೇ ಬಾರದಂತೆ ಅವರ ವಿಶೇಷ ಆಸಕ್ತಿ ಯಾವುದಾದರೂ ಇದ್ದಿರಬಹುದು. ಉದಾಹರಣೆಗೆ ಆಟೋಟ, ಕಲೆ ಇತ್ಯಾದಿ. ಶಾಲೆಯ ಆಚೆಯೂ ಅವರಿಗೆ ಸ್ವಲ್ಪ ಬೆಂಬಲ, ಉತ್ತಮ ತರಬೇತಿ ದೊರೆಯುವಂತಾದರೆ ಅವರು ಅದ್ಭುತವಾಘಿ ಬೆಳೆಯುವಂತಾದರೆ? ಅದನ್ನೂ ತಿಳಿಯಬಹುದು ಟೀಚರ್‌ರಿಂದ.
* ಶಾಲೆಗೇ ಸೀಮಿತವಾಗಿ ಕೆಲವು ಪ್ರಶ್ನೆಗಳನ್ನು ಕೇಳಬಹುದು. ಇತರ ಮಕ್ಕಳೊಡನೆ ಹೋಲಿಸಿ ನೋಡದೆ, ನಮ್ಮ ಮಗುವೇ ಮೊದಲಿಗಿಂತ ಈಗ ಸುಧಾರಿಸಿದೆಯೆ? ಗ್ರೇಡ್‌ ಮಟ್ಟದಲ್ಲಿ ಬದಲಾಗಿದೆಯ ಎಂದು ತಿಳಿಯಬಹುದು. ಪ್ರತಿ ಮಗುವಿನ ಕಲಿಕೆಯ ವೇಗ ಮತ್ತು ವಿಧಾನ ಬೇರೆಯೇ.
*ಹಾಗಾಗಿ ನಮ್ಮ ಮಗು ತನ್ನ ಪೂರ್ತಿ ಸಾಮರ್ಥ್ಯ ಬಳಸಿ ಕಲಿಕೆಯಲ್ಲಿ ತೊಡಗುತ್ತಿದೆಯೆ ಎಂದು ಮಾತ್ರ ತಿಳಿದರೆ ಸಾಕು. ಮಗು ಹಿಂದೆ ಉಳಿಯುತ್ತಿದೆ, ಸಾಕಷ್ಟು ಗಮನ ಕೊಡುತ್ತಿಲ್ಲ ಎಂದು ಟೀಚರ್‌ಗೆ ಎನಿಸಿದ್ದರೆ ಅದನ್ನು ಅರಿಯಬಹುದು.
*ಸ್ಪೆಲ್ಲಿಂಗ್‌, ಕಾಗುಣಿತ, ಗಣಿತ, ವ್ಯಾಕರಣ, ಕೈಬರಹ ಹೀಗೆ ಯಾವುದಕ್ಕೆ ಹೆಚ್ಚು ಗಮನ ನೀಡಬೇಕು, ಮನೆಯಲ್ಲಿ ಹೆಚ್ಚಿನ ತಯಾರಿ ಯಾವ ವಿಷಯದಲ್ಲಿ ಇರಬೇಕು ಎಂದೂ ಕೇಳಬಹುದು. ಬಹಳ ತಡವಾದಮೇಲೆ ಸುಧಾರಿಸಲಾಗದೆ ಒದ್ದಾಡುವು ಬದಲು ಮೊದಮೊದಲಿನ ಮೀಟಿಂಗ್‌ಗಳಲ್ಲೇ ಇವನ್ನೆಲ್ಲ ಗಮನಿಸಿ ತಿದ್ದಿಕೊಳ್ಳುವುದು ಮೇಲು.
* ಕಲಿಕಾ ವಿಧಾನವಾಗಲೀ ಸಹಪಾಠಿಗಳ ವರ್ತನೆಯಾಗಲೀ ನಮ್ಮ ಮಕ್ಕಳು ಹೇಳಿದ ಒಂದು ಮುಖ ಮಾತ್ರ ನಮಗೆ ತಿಳಿಸಿರುತ್ತದೆ. ಟೀಚರ್‌ ಕಡೆಯಿಂದ ಖಚಿತಪಡಿಸಿಕೊಂಡೇ ಇದರ ಕುರಿತು ಅರಿಯಬೇಕು. ನಂತರ ನಿಜವಾದ ಪರಿಹಾರ ಹುಡುಕಲು ಸಾಧ್ಯ.
*ಟೀಚರ್‌ ಅನುಸರಿಸುತ್ತಿರುವ ಕಲಿಕಾ ವಿಧಾನದ ಬಗ್ಗೆ ತಿಳಿದುಕೊಳ್ಳುವುದು ಉತ್ತಮ. ಇದರಿಂದ ನಮ್ಮ ಮಗುವಿಗೆ ಈ ವಿಧಾನದಿಂದ ಸುಲಭವಾಗಿ ಅರ್ಥವಾಗುತ್ತಿದೆಯೆ ಎಂದು ತಕ್ಷಣ ತಿಳಿಯಬಹುದು. ಇಲ್ಲವಾದರೆ ನಮ್ರವಾಗಿ ನಮ್ಮ ಮಗು ಹೇಗೆ ಹೇಳಿದರೆ ಚೆನ್ನಾಗಿ ಅರ್ಥಮಾಡಿಕೊಳ್ಳುತ್ತದೆ ಎಂದು ಹೇಳಬಹುದು.
* ಬೆಂಗಳೂರಿನ ಕ್ವೀನ್ಸ್‌ ರಸ್ತೆಯ ಸೇಂಟ್‌ ಮೇರೀಸ್‌ ಶಾಲೆಯ ಶಿಕ್ಷಕಿ ರಾಜಮ್ಮಾ ಶಾಲೆಯಿಂದ ಯಾವುದಾದರೂ ಕೆಟ್ಟವರ್ತನೆಯನ್ನು ಅನುಕರಿಸಿ ಬರುತ್ತಿದ್ದರೆ ನಮಗೆ ತಿಳಿಸಿ. ನಾವು ಸರಿಪಡಿಸುತ್ತೇವೆ  ಎಂದವರು. ಶಾಲೆ ಇರಲಿ, ಮನೆ ಇರಲಿ, ನಮ್ಮ ಮಗುವಿನ ನಿರ್ದಿಷ್ಟ ವರ್ತನೆ ಬಗ್ಗೆ ಹೇಳಿ, ಅವರ ಸಹಾಯದಿಂದ ಅದನ್ನು ತಿದ್ದುವ ಯತ್ನವನ್ನೂ ಮಾಡಬಹುದು.
ಉದಾಹರಣೆಗೆ ತರಕಾರಿ ಇಷ್ಟಪಡದಿರುವ ವರ್ತನೆಯನ್ನು ನಾವು ಬದಲಿಸಲಾಗದೇ ಇದ್ದರೂ ಅವರಿಂದ ಅದು ಸಾಧ್ಯವಾಗಬಹುದು. ಅದೇ ಶಾಲೆಯ ಪುನೀತಾ ಮಿಸ್‌ ಕೂಡ ಊಟದ ಅಭ್ಯಾಸವನ್ನು ಆರೋಗ್ಯಕರವಾಗಿರಿಸಲು ಹೆಣಗುತ್ತಿದ್ದವರು. ಇದೂ ಕಲಿಕೆಗೆ ಬಹಳ ಅಗತ್ಯ. ಅವರು ಇಂಥ ಮತ್ತು ಇತರ ಇನ್ನೂ ಎಷ್ಟೋ ರೀತಿಯ ಮಕ್ಕಳನ್ನು ನಿಭಾಯಿಸಿರುವುದರಿಂದ ಅವರ ಸಲಹೆ ನಿಜಕ್ಕೂ ಅದ್ಭುತ ಪರಿಣಾಮ ಬೀರಬಹುದು.
*ಮಗು ಮನೆಯಲ್ಲಿ ಕಡಿಮೆ ನೀರು ಕುಡಿಯುವ ಅಭ್ಯಾಸ ಇರಿಸಿಕೊಂಡಿರಬಹುದು. ಆದರೆ ಶಾಲೆಯಲ್ಲಿ ಮಕ್ಕಳೊಡನೆ ಆಡುತ್ತಲೇ ಆಗಾಗ ನೀರು ಕುಡಿಯುವ ರೂಢಿ ಮಾಡಿಸಲು ಸಾಧ್ಯವಿದೆ. ಇಂತಹ ವಿಚಾರಗಳಲ್ಲಿ ಕೂಡ ಶಾಲೆಯವರ ನೆರವು ಪಡೆಯಬಹುದು.
*ಶಾಲೆಯ ಸಿಬ್ಬಂದಿಗೂ ನಮ್ಮ ನೆರವಿನಿಂದ ತರಗತಿಯಲ್ಲಿ ಸಹಾಯವಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ನಮ್ಮಿಂದ ಯಾವ ಸಹಾಯ ನೀಡಬಹುದು ಎಂದೂ ಕೇಳಿದರೆ ಉತ್ತಮ.  ಒಂದು ವೇಳೆ ಇಂತಹ ಮೀಟಿಂಗ್‌ಗಳಿಗೆ ಹೋಗಲಾಗದೆ ಇದ್ದಲ್ಲಿ ಅವರನ್ನು ಹೇಗೆ ಮತ್ತು ಯಾವಾಗ ಸಂಪರ್ಕಿಸಬಹುದು ಎಂದೂ ಕೇಳಿಕೊಂಡಿರುವುದು ಸೂಕ್ತ. ಡೈರಿಯಲ್ಲಿ ಬರೆದು ಕಳಿಸಬೇಕೆ, ಶಾಳೆಯ ನಂಬರಿಗೆ ಅಥವಾ ಟೀಚರ್‌ ವೈಯಕ್ತಿಕ ಫೋನ್‌ ನಂಬರ್‌ಗೆ ಕರೆ ಮಾಡಬಹುದೆ ಎಂದು ಕೇಳಿ.
*ಪ್ರಶ್ನೆಗಳ ಪಟ್ಟಿ ಸಿದ್ದಪಡಿಸಿಟ್ಟುಕೊಂಡು ಹೋದರೆ ನಮ್ಮ ಮತ್ತು ಟೀಚರ್‌ ಸಮಯ ಮಾತ್ರವಲ್ಲ, ಇತರ ಪಾಲಕರ ಸಮಯವನ್ನೂ ವ್ಯರ್ಥಗೊಳಿಸದಂತೆ ಮೀಟಿಂಗ್‌ ಮುಗಿಸಬಹುದು.

2014ನೇ ಸಾಲಿನ ‘ಮ್ಯಾನ್‌ ಬುಕರ್‌’ ಪ್ರಶಸ್ತಿ, ಯುಎಸ್‌ಬಿ ಆನ್-ದ-ಗೋ

ಲಂಡನ್‌ (ಪಿಟಿಐ): ಆಸ್ಟ್ರೇಲಿಯಾದ ಕಾದಂಬರಿಕಾರ ರಿಚರ್ಡ್‌ ಫ್ಲಾನಗನ್‌ (53) ಅವರು 2014ನೇ ಸಾಲಿನ ‘ಮ್ಯಾನ್‌ ಬುಕರ್‌’ ಪ್ರಶಸ್ತಿಗೆ ಭಾಜನ­ರಾಗಿದ್ದಾರೆ. 
ರಿಚರ್ಡ್‌ ಅವರ ‘ದ ನ್ಯಾರೊ ರೋಡ್‌ ಟು ಡೀಪ್‌ ನಾರ್ತ್‌’ ಕಾದಂಬರಿಗೆ ಈ ಪ್ರಶಸ್ತಿ ದೊರಕಿದೆ. ಇದು ಎರಡನೇ ವಿಶ್ವ­ಯುದ್ಧದ ಸಂದರ್ಭದಲ್ಲಿ ಬರ್ಮಾದಲ್ಲಿ ಯುದ್ಧ ಕೈದಿಗಳು ನಿರ್ಮಿಸಿದ ರೈಲು ಮಾರ್ಗದ ಕಥೆಯನ್ನು ಆಧರಿಸಿದ ಕೃತಿ.
ರಿಚರ್ಡ್‌ ಅವರ ತಂದೆ ಈ ರೈಲು ಮಾರ್ಗದ ಕಾಮಗಾರಿಯಲ್ಲಿ ಭಾಗಿ­ಯಾಗಿದ್ದು, ಅವರಿಂದ ಕೇಳಿ ತಿಳಿದ ಕಥೆಯನ್ನು ಆಧಾರವಾಗಿರಿಸಿಕೊಂಡು  ರಿಚರ್ಡ್‌ ಈ ಕೃತಿ ಬರೆದಿದ್ದಾರೆ. ಇದು ಅವರ ಆರನೇ ಕಾದಂಬರಿ. ‘ಈ ಪ್ರಶಸ್ತಿ ನನಗೆ ದೊರಕುತ್ತದೆ ಎಂದು ಎಣಿಸಿರಲಿಲ್ಲ’ ಎಂದು ತಾಸ್ಮೇ­ನಿಯಾ ಸಂಜಾತ ರಿಚರ್ಡ್‌ ಹೇಳಿದ್ದಾರೆ.
ಈ ಸಾರಿಯ ಬುಕರ್‌ ಪ್ರಶಸ್ತಿಯ ಸ್ಪರ್ಧೆಯಲ್ಲಿ ಭಾರತ ಮೂಲದ ಬ್ರಿಟನ್‌ ಲೇಖಕ ನೀಲ್‌ ಮುಖರ್ಜಿ ಅವರ ಹೆಸರೂ ಇತ್ತು. ಮುಖರ್ಜಿ ಅವರ ‘ದ ಲೈವ್ಸ್‌ ಆಫ್‌ ಅದರ್ಸ್‌’ ಕಾದಂಬರಿ ಆಯ್ಕೆ ಆಗುವ ನಿರೀಕ್ಷೆ ಇತ್ತು. ಮುಖರ್ಜಿ ಅವರ ಎರಡನೇ ಕಾದಂಬರಿಯಾದ ‘ದ ಲೈವ್ಸ್ ಆಫ್‌ ಅದರ್ಸ್’, 1960ರ ಕೋಲ್ಕತ್ತದಲ್ಲಿ (ಆಗಿನ ಕಲ್ಕತ್ತ) ಘೋಷ್‌ ಕುಟುಂಬದಲ್ಲಿನ ರಹಸ್ಯಗಳು, ವೈಷಮ್ಯ ಮತ್ತು ರಾಜಕೀಯ ಚಟುವಟಿಕೆಯನ್ನು ಆಧರಿಸಿದ ಕೃತಿ.
ವಾಷಿಂಗ್ಟನ್‌ (ಪಿಟಿಐ): ಅಮೆರಿಕ ನಾಗರಿಕ ಸ್ವಾತಂತ್ರ್ಯ ಒಕ್ಕೂಟದಲ್ಲಿ (ಎಎಲ್‌ಸಿಯು) ಪ್ರಮುಖ ವಕೀಲೆಯಾಗಿ­ರುವ ಭಾರತ ಮೂಲದ ವನಿತಾ ಗುಪ್ತಾ ಅವರನ್ನು ಅಮೆರಿಕ ನ್ಯಾಯಾಂಗ ಇಲಾಖೆಯ ನಾಗರಿಕ ಹಕ್ಕುಗಳ ವಿಭಾಗದ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ. ಈ ಹುದ್ದೆಗೇರಿದ ದಕ್ಷಿಣ ಏಷ್ಯಾದ ಮೊದಲ ಪ್ರಜೆ ಎಂಬ ಹೆಗ್ಗಳಿಕೆಗೆ ವನಿತಾ ಪಾತ್ರರಾಗಿದ್ದಾರೆ.
ಮುಂದಿನ ಕೆಲವು ತಿಂಗಳಲ್ಲಿ ಅಧ್ಯಕ್ಷ ಬರಾಕ್‌ ಒಬಾಮ ಅವರು ವನಿತಾ ಅವರನ್ನು ನಾಗರಿಕ ಹಕ್ಕುಗಳ ಕಾಯಂ ಸಹಾಯಕ ಅಟಾರ್ನಿ ಜನರಲ್‌ ಸೇವೆಗೆ ನಾಮನಿರ್ದೇಶನ ಮಾಡಬಹುದೆಂದು ಸಹ ನಿರೀಕ್ಷಿಸಲಾಗಿದೆ.
‘ಎಲ್ಲರಿಗೂ ಸಮಾನ ನ್ಯಾಯ ಒದಗಿಸುವ ನಿಟ್ಟಿನಲ್ಲಿ ವನಿತಾ ಅವರು ತಮ್ಮ ಇಡೀ ವೃತ್ತಿಜೀವನವನ್ನು ವಿನಿ­ಯೋಗಿ­ಸಿದ್ದಾರೆ’ ಎಂದು ವನಿತಾ ಅವರ ನೇಮಕ­ವನ್ನು ಪ್ರಕಟಿಸಿದ ಅಟಾರ್ನಿ ಜನರಲ್ ಎರಿಕ್‌ ಹೋಲ್ಡರ್ ಅವರು ಪ್ರಶಂಸಿಸಿದ್ದಾರೆ. ವನಿತಾ ಗುಪ್ತಾ ಅವರು ಅ.20ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ವಾಷಿಂಗ್ಟನ್‌ (ಪಿಟಿಐ): ಯುರೇನಸ್‌ ಗ್ರಹದಂತಹ ಹೊಸ ಗ್ರಹವೊಂದು ಸೌರ ವ್ಯೂಹದ 25 ಸಾವಿರ ಜ್ಯೋತಿ­ರ್ವರ್ಷಗಳ ದೂರದಾಚೆ ಪತ್ತೆ­ಯಾಗಿದೆ. ಇದೇ ಮೊದಲ ಬಾರಿಗೆ ಜೋಡಿ ಗ್ರಹಗಳಲ್ಲಿ (ಯುರೇನಸ್‌ ಮತ್ತು ನೆಪ್ಚೂನ್‌) ಒಂದು ಗ್ರಹವನ್ನು ಹೋಲು­ವಂತಹ ಹೊಸ ಕಾಯ ಪತ್ತೆಯಾಗಿದೆ ಎಂದು ಖಗೋಳ ವಿಜ್ಞಾನಿಗಳು ತಿಳಿಸಿದ್ದಾರೆ.
ಯುರೇನಸ್‌ ಮತ್ತು ನೆಪ್ಚೂನ್‌ಗಳು ಬಹುಪಾಲು ಜಲಜನಕ ಮತ್ತು ಹೀಲಿಯಂಗಳಿಂದ ಕೂಡಿದ ‘ಮಂಜುಗಡ್ಡೆಯ ದೈತ್ಯ’ ಕಾಯಗಳು. ಇವೆರಡರಲ್ಲೂ ಸಾಕಷ್ಟು ಪ್ರಮಾಣ­ದಲ್ಲಿ ಮಿಥೇನ್‌ ಘನೀಕರಿಸಿರುವುದ­ರಿಂದ ಇವು ನೀಲಿಯಾಗಿ ಕಾಣುತ್ತವೆ.
ಹೊಸ ಕಾಯ ಸೌರ ವ್ಯೂಹದಲ್ಲಿ ಅತ್ಯಂತ ದೂರದಲ್ಲಿ ಪತ್ತೆಯಾಗಿರು­ವುದರಿಂದ ಆ ಗ್ರಹದಲ್ಲಿ ಏನಿದೆ ಎಂಬುದನ್ನು ನಿಖರವಾಗಿ ಹೇಳಲು ಈಗ ಆಗದು. ಆದರೆ, ಇದು ಮಂಜು­ಗಡ್ಡೆಯಿಂದ ತುಂಬಿದ ದೊಡ್ಡ ಕಾಯ ಮತ್ತು  ಯುರೇನಸ್ ಗ್ರಹವನ್ನು ಹೋಲುವಂತಹ ಕಕ್ಷೆಹೊಂದಿದೆ ಎಂದು ಓಹಿಯೊ ವಿಶ್ವವಿದ್ಯಾಲಯದ ಖಗೋಳ ವಿಜ್ಞಾನಿಗಳು ಹೇಳಿದ್ದಾರೆ.
ಕೋಲ್ಕತ್ತದ ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದ 150ನೇ ವರ್ಷಾಚರಣೆಗೆ ಸಂಬಂಧಿಸಿದ ಕಾರ್ಯಕ್ರಮಗಳಿಗೆ ಗುರುವಾರ ಚಾಲನೆ ನೀಡಲಾಯಿತು. ಭಾರತ ಕ್ರಿಕೆಟ್‌ ತಂಡದ ಮಾಜಿ ಆಟಗಾರರಾದ (ಎಡದಿಂದ) ಸೌರವ್‌ ಗಂಗೂಲಿ, ಚಂದು ಬೋರ್ಡೆ ಮತ್ತು ಸಲೀಮ್‌ ದುರಾನಿ ಅವರು ದೀಪ ಬೆಳಗಿಸುವ ಮೂಲಕ ವರ್ಷಾಚರಣೆಗೆ ಚಾಲನೆ ನೀಡಿದರು.

ಯುಎಸ್‌ಬಿ ಆನ್-ದ-ಗೋ



ನೀವು ಹೊಚ್ಚ ಹೊಸ ಆಂಡ್ರಾಯಿಡ್ ಫೋನ್ ಕೊಂಡುಕೊಂಡಿದ್ದೀರಿ. ಅತ್ಯಾಧುನಿಕ ಪ್ರೊಸೆಸರ್, ಉತ್ತಮ ಪರದೆ, ಉತ್ತಮ ರೆಸೊಲೂಶನ್, ಕ್ಯಾಮೆರಾ ಎಲ್ಲಾ ಇವೆ. ಪ್ರಪಂಚದಲ್ಲಿ ಯಾವಾಗಲೂ ಎಲ್ಲವೂ ದೊರೆಯುವುದು ಕಠಿಣ ತಾನೆ? ಹಾಗೆಯೇ ಇಲ್ಲೂ ಒಂದು ಕೊರತೆ ಇರಬಹುದು. ಅದುವೇ ಹೆಚ್ಚಿಗೆ ಮೆಮೊರಿಗೆ ಮೈಕ್ರೊಎಸ್‌ಡಿ ಕಾರ್ಡ್ ಹಾಕುವ ಸೌಲಭ್ಯ ಇಲ್ಲದಿರುವುದು.
ಈ ಸೌಲಭ್ಯ ಇದ್ದರೆ ಬೇಕಾದಂತೆ ಮೈಕ್ರೋಎಸ್‌ಡಿ  ಕಾರ್ಡ್‌ಗಳನ್ನು ಹಾಕಿಕೊಂಡು ಹೆಚ್ಚಿಗೆ ಫೋಟೊ ತೆಗೆಯುವುದು, ಸಿನಿಮಾ ಹಾಕಿಕೊಂಡು ವೀಕ್ಷಿಸುವುದು, ಸಂಗೀತ ಹಾಕಿಕೊಂಡು ಆಲಿಸುವುದು, ಇತ್ಯಾದಿ ಕೆಲಸಗಳನ್ನು ಮಾಡಬಹುದು. ಹೌದು, ಮೈಕ್ರೋಎಸ್‌ಡಿ ಕಾರ್ಡ್ ಸೌಲಭ್ಯ ಇಲ್ಲ ಎಂದು ಹೇಳಿದ ಮೇಲೆ ಅವೆಲ್ಲ ಮಾಡಬಹುದು ಎಂದು ಹೇಳಿ ಯಾಕೆ ಹೊಟ್ಟೆ ಉರಿಸುತ್ತೀರಿ ಎಂದು ಕೇಳುತ್ತಿದ್ದೀರಾ? ಪೂರ್ತಿ ನಿರಾಶರಾಗಬೇಕಾಗಿಲ್ಲ.
ನಿಮ್ಮ ಆಂಡ್ರಾಯಿಡ್ ಫೋನ್ ಅಥವಾ ಟ್ಯಾಬ್ಲೆಟ್‌ನಲ್ಲಿ ಯುಎಸ್‌ಬಿ ಆನ್-ದ-ಗೋ (USB On-The-Go) ಸೌಲಭ್ಯ ಇದ್ದರೆ ಇವೆಲ್ಲವನ್ನು ಇನ್ನೊಂದು ರೀತಿಯಲ್ಲಿ ಮಾಡಬಹುದು. ಏನಿದು ಯುಎಸ್‌ಬಿ ಆನ್-ದ-ಗೋ? ಈ ಯುಎಸ್‌ಬಿ ಆನ್-ದ-ಗೋ (USB On-The-Go) ವನ್ನು ಹೆಚ್ಚಿನ ಸಂದರ್ಭಗಳಲ್ಲಿ ಚುಟುಕಾಗಿ OTG ಎಂದು ಬಳಸುತ್ತಾರೆ. ಎಲ್ಲ ಫೋನ್ ಮತ್ತು ಟ್ಯಾಬ್ಲೆಟ್‌ಗಳಲ್ಲಿರುವ ಚಿಕ್ಕ ಯುಎಸ್‌ಬಿ ಕಿಂಡಿಗೆ ಸಾಮಾನ್ಯವಾಗಿ ಎಲ್ಲರೂ ಚಾರ್ಜರ್‌ಗಳನ್ನು ಜೋಡಿಸುತ್ತಾರೆ.
ಯುಎಸ್‌ಬಿ ಫ್ಲಾಶ್ ಡ್ರೈವ್‌ಗಳನ್ನು ಎಲ್ಲ ನೋಡಿಯೇ ಇರುತ್ತೀರಾ. ಅವುಗಳನ್ನು ಗಣಕ ಅಥವಾ ಲ್ಯಾಪ್‌ಟಾಪ್‌ನಲ್ಲಿರುವ ಯುಎಸ್‌ಬಿ ಕಿಂಡಿಗೆ ಜೋಡಿಸಿ ಫೈಲ್ ವರ್ಗಾವಣೆ ಮಾಡಬಹುದು. ಅವುಗಳ ಯುಎಸ್‌ಬಿ ಜೋಡಣೆ (ಕನೆಕ್ಟರ್) ಸ್ವಲ್ಪ ದೊಡ್ಡದಾಗಿರುತ್ತದೆ. ಅವುಗಳನ್ನು ಫೋನ್‌ಗಳಲ್ಲಿರುವ ಚಿಕ್ಕ ಯುಎಸ್‌ಬಿ ಕಿಂಡಿಗೆ ಜೋಡಿಸಲು ಸಾಧ್ಯವಿಲ್ಲ. ಈ ರೀತಿ ಚಿಕ್ಕ ಯುಎಸ್‌ಬಿ ಕಿಂಡಿಗೆ ಸಾಮಾನ್ಯ ಯುಎಸ್‌ಬಿ ಪೆನ್ ಡ್ರೈವ್ ಅಥವಾ ಇತರೇ ಯುಎಸ್‌ಬಿ ಸಾಧನಗಳನ್ನು ಜೋಡಿಸಲು ಅನುವು ಮಾಡಿಕೊಡುವ ಒಂದು ಕೇಬಲ್ ಮಾರುಕಟ್ಟೆಯಲ್ಲಿ ದೊರೆಯುತ್ತದೆ.
ಅದಕ್ಕೆ ಸರಳವಾಗಿ ಓಟಿಜಿ (OTG) ಕೇಬಲ್ ಎಂದು ಕರೆಯುತ್ತಾರೆ. ಅದರ ಒಂದು ಬದಿಯಲ್ಲಿ ಫೋನ್ ಅಥವಾ ಟ್ಯಾಬ್ಲೆಟ್‌ಗಳಲ್ಲಿ ಕಂಡುಬರುವ ಚಿಕ್ಕ ಯುಎಸ್‌ಬಿ ಕಿಂಡಿಗೆ ಜೋಡಿಸಬಹುದಾದ ಕನೆಕ್ಟರ್ ಇರುತ್ತದೆ. ಇನ್ನೊಂದು ಬದಿಯಲ್ಲಿ ಸಾಮಾನ್ಯ ಯುಎಸ್‌ಬಿ ಡ್ರೈವ್ ಅಥವಾ ಸಾಧನ ಜೋಡಿಸಬಹುದಾದ ಕಿಂಡಿ ಇರುತ್ತದೆ. ಇಂತಹ ಕೇಬಲ್‌ಗಳು ಮಾರುಕಟ್ಟೆಯಲ್ಲಿ ಸುಮಾರು ₹50ಕ್ಕೆ ದೊರೆಯುತ್ತದೆ. ಈ ಕೇಬಲ್ ಬಳಸಿ ಏನೆಲ್ಲಾ ಮಾಡಬಹುದು ಎಂಬುದನ್ನು ತಿಳಿಯೋಣ.
ಈ ಕೇಬಲ್‌ಗೆ ಯಾವುದೇ ಯುಎಸ್‌ಬಿ ಡ್ರೈವ್ ಜೋಡಿಸಬಹುದು ಎಂದು ಹೇಳಿದೆ ತಾನೆ? ಹೌದು. ಇದನ್ನು ಬಳಸಿ ನೀವು ಹೆಚ್ಚಿಗೆ ಮೆಮೊರಿಗೆ ಸಾಮಾನ್ಯ ಯುಎಸ್‌ಬಿ ಫ್ಲಾಶ್ ಡ್ರೈವ್ (ಪೆನ್ ಡ್ರೈವ್ ಅಥವಾ ಥಂಬ್ ಡ್ರೈವ್) ಜೋಡಿಸಬಹುದು. ನಿಮ್ಮ ಗಣಕ ಅಥವಾ ಲ್ಯಾಪ್‌ಟಾಪ್‌ನಿಂದ ಯುಎಸ್‌ಬಿ ಡ್ರೈವ್‌ಗೆ ಸಿನಿಮಾ, ಫೋಟೊ, ವಿಡಿಯೊ, ಸಂಗೀತ ಇತ್ಯಾದಿಗಳನ್ನು ಪ್ರತಿ ಮಾಡಿಕೊಂಡು ನಂತರ ಅದನ್ನು ಈ ಕೇಬಲ್ ಮೂಲಕ ನಿಮ್ಮ ಫೋನ್ ಅಥವಾ ಟ್ಯಾಬ್ಲೆಟ್‌ಗೆ ಜೋಡಿಸಿ ಅವುಗಳನ್ನು ಬಳಸಬಹುದು. ನಿಮ್ಮ ಫೋನಿನಲ್ಲಿ ಅಧಿಕ ಮೆಮೊರಿ ಇಲ್ಲ ಎಂಬ ಸಮಸ್ಯೆ ಇದರಿಂದ ಪರಿಹಾರವಾಗುತ್ತದೆ.
ಇಷ್ಟು ಸರಳ ಉಪಾಯ ಇದೆ ಎಂದು ನಮಗೆ ಯಾಕೆ ತಿಳಿದಿರಲಿಲ್ಲ? ನೀವು ಯಾಕೆ ಮೊದಲೇ ತಿಳಿಸಲಿಲ್ಲ? ಎಂದು ಕೇಳುತ್ತಿದ್ದೀರಾ? ನಿಲ್ಲಿ. ಅಷ್ಟು ಬೇಗನೆ ಯಾವುದೇ ತಿರ್ಮಾನಕ್ಕೆ ಬರುವುದು ಬೇಡ. ಸರಳ ಉಪಾಯ ಇದೆ ಎಂದು ಸಂತೋಷ ಪಡುವುದೂ ಬೇಡ. ಈಗ ನಿಮ್ಮ ಸಂತೋಷಕ್ಕೆ ಚಿಕ್ಕ ಕಡಿವಾಣ ಹಾಕೋಣ. ಅದೇನಪ್ಪಾ ಎಂದರೆ ಎಲ್ಲ ಆಂಡ್ರಾಯಿಡ್ ಫೋನ್ ಮತ್ತು ಟ್ಯಾಬ್ಲೆಟ್‌ಗಳಲ್ಲಿ ಈ ಓಟಿಜಿಗೆ ಬೆಂಬಲ ಇರುವುದಿಲ್ಲ ಎಂಬುದು.
ಅಂದರೆ ನೀವು ಓಟಿಜಿ ಕೇಬಲ್ ಕೊಂಡುಕೊಂಡು ಫೋನಿಗೆ ಜೋಡಿಸಿದ ತಕ್ಷಣ ಅದು ಕೆಲಸ ಮಾಡಬೇಕಾಗಿಲ್ಲ. ನಿಮ್ಮ ಫೋನಿನಲ್ಲಿ (ಅಥವಾ ಟ್ಯಾಬ್ಲೆಟ್‌ನಲ್ಲಿ) ಓಟಿಜಿ ಬೆಂಬಲ ಇದ್ದರೆ ಮಾತ್ರ ಇವೆಲ್ಲ ಸಾಧ್ಯ. ಈ ಬೆಂಬಲ ಇದೆಯೇ ಎಂಬುದನ್ನು ಪತ್ತೆ ಮಾಡಲು ಸಹಾಯ ಮಾಡುವ ಹಲವು ಆಪ್‌ಗಳು ಗೂಗ್ಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿವೆ. ಅವುಗಳಲ್ಲಿ ಯಾವುದನ್ನಾದರೂ ಬಳಸಿ ನಿಮ್ಮ ಫೋನಿನಲ್ಲಿ ಈ ಸೌಲಭ್ಯ ಇದೆಯೇ ಎಂದು ಪತ್ತೆ ಹಚ್ಚಬಹುದು. ಅಥವಾ ಕೇವಲ ₹50 ಖರ್ಚು ಮಾಡಿ ಒಂದು ಓಟಿಜಿ ಕೇಬಲ್ ಕೊಂಡುಕೊಂಡು ಪರೀಕ್ಷಿಸಿ ನೊಡಬಹುದು.
ಓಟಿಜಿ ಕೇಬಲ್ ಏನು ಮಾಡುತ್ತದೆಯೆಂದರೆ ಯಾವುದೇ ಸಾಮಾನ್ಯ ದೊಡ್ಡ ಗಾತ್ರದ ಯುಎಸ್‌ಬಿ ಕನೆಕ್ಟರ್ ಇರುವ ಸಾಧನವನ್ನು ಫೋನಿಗೆ ಅಥವಾ ಟ್ಯಾಬ್ಲೆಟ್‌ಗೆ ಜೋಡಿಸಲು ಅನುವು ಮಾಡಿಕೊಡುತ್ತದೆ. ಅಂದರೆ ಮಾರುಕಟ್ಟೆಯಲ್ಲಿ ಕಂಡುಬರುವ ನೂರಾರು ನಮೂನೆಯ ಯುಎಸ್‌ಬಿ ಸಾಧನಗಳನ್ನು ಜೋಡಿಸಬಹುದೇ? ಎಲ್ಲವನ್ನೂ ಅಲ್ಲ. ಆದರೆ ಕೆಲವನ್ನು ಜೋಡಿಸಿ ಬಳಸಬಹುದು. ಹೆಚ್ಚಿನ ಮೆಮೊರಿಗೆ ಪೆನ್ ಡ್ರೈವ್ ಜೋಡಿಸಬಹುದು ಎಂದು ಈಗಾಗಲೇ ತಿಳಿಸಿಯಾಗಿದೆ. ಇತರೆ ಸಾಧನಗಳನ್ನು ಗಮನಿಸೋಣ.  
ಇತ್ತೀಚೆಗೆ ಮಾರುಕಟ್ಟೆಯಲ್ಲಿ ಒಂದು ಹೊಸ ನಮೂನೆಯ ಫ್ಲಾಶ್ ಡ್ರೈವ್ (ಥಂಬ್ ಡ್ರೈವ್, ಪೆನ್ ಡ್ರೈವ್)ಗಳು ದೊರೆಯುತ್ತಿವೆ. ಅವುಗಳ ಒಂದು ಬದಿಯಲ್ಲಿ ದೊಡ್ಡ ಯುಎಸ್‌ಬಿ ಕನೆಕ್ಟರ್ ಮತ್ತು ಇನ್ನೊಂದು ಬದಿಯಲ್ಲಿ ಚಿಕ್ಕ ಯುಎಸ್‌ಬಿ ಕನೆಕ್ಟರ್ ಇವೆ. ಇವುಗಳಿಗೆ ಓಟಿಜಿ ಫ್ಲಾಶ್ ಡ್ರೈವ್ ಎಂಬ ಹೆಸರಿದೆ. ಇವುಗಳನ್ನು ಬಳಸಿ ಗಣಕದಿಂದ ಫೈಲ್‌ಗಳನ್ನು ಪ್ರತಿ ಮಾಡಿಕೊಂಡು ಅವುಗಳನ್ನು ಫೋನಿನಲ್ಲಿ ಬಳಸಬಹುದು.
ತುಂಬ ಉಪಯೋಗಕ್ಕೆ ಬರುವ ಒಂದು ಸಾಧನವೆಂದರೆ ಯುಎಸ್‌ಬಿ ಕೀಬೋರ್ಡ್. ನಿಮ್ಮಲ್ಲಿ ಯುಎಸ್‌ಬಿ ಕೀಬೋರ್ಡ್ ಇದ್ದರೆ ಅದನ್ನು ಈ ಓಟಿಜಿ ಮೂಲಕ ಫೋನ್ ಅಥವಾ ಟ್ಯಾಬ್ಲೆಟ್‌ಗೆ ಜೋಡಿಸಿ ಬಳಸಬಹುದು. ಅದೇ ಮಾದರಿಯಲ್ಲಿ ಯುಎಸ್‌ಬಿ ಮೌಸ್ ಕೂಡ ಬಳಸಬಹುದು. ಇವೆರಡೂ ಬೇಕಿದ್ದರೆ? ಮಾರುಕಟ್ಟೆಯಲ್ಲಿ ವಯರ್‌ಲೆಸ್‌ ಡೆಸ್ಕ್‌ಟಾಪ್ ಎಂಬ ಹೆಸರಿನಲ್ಲಿ ಕೀಬೋರ್ಡ್ ಮತ್ತು ಮೌಸ್‌ಗಳು ಜೊತೆಯಾಗಿ ದೊರೆಯುತ್ತವೆ. ಇವುಗಳನ್ನು ನಿಮ್ಮ ಗಣಕಕ್ಕೆ ನಿಸ್ತಂತು (ವಯರ್‌ಲೆಸ್) ವಿಧಾನದಲ್ಲಿ ಜೋಡಿಸಲು ಗಣಕದ ಯುಎಸ್‌ಬಿ ಕಿಂಡಿಗೆ ಜೋಡಣೆಯಾಗುವ ಒಂದು ಡಾಂಗಲ್ ಕೂಡ ಜೊತೆಯಲ್ಲಿ ದೊರೆಯುತ್ತದೆ.
ಇವನ್ನು ನೀವು ಕೊಂಡುಕೊಂಡರೆ ಅಥವಾ ಅವು ನಿಮ್ಮಲ್ಲಿ ಈಗಾಗಲೇ ಇದ್ದರೆ ಆ ಡಾಂಗಲ್ ಅನ್ನು ಓಟಿಜಿ ಮೂಲಕ ಫೋನ್ ಅಥವಾ ಟ್ಯಾಬ್ಲೆಟ್‌ಗೆ ಜೋಡಿಸಿ ದೊಡ್ಡ ಗಾತ್ರದ ಕೀಬೋರ್ಡ್ ಮತ್ತು ಮೌಸ್ ಬಳಸಿ ಆನಂದಿಸಬಹುದು. ಅಂದರೆ ನೀವು ಓಟಿಜಿ ಸೌಲಭ್ಯ ಇರುವ ಒಂದು ಟ್ಯಾಬ್ಲೆಟ್ ಮತ್ತು ಈ ವಯರ್‌ಲೆಸ್‌ ಡೆಸ್ಕ್‌ಟಾಪ್‌ ಕೊಂಡುಕೊಂಡರೆ ಒಂದು ಮಟ್ಟಿಗೆ ಲ್ಯಾಪ್‌ಟಾಪ್‌ ಬದಲಿಗೆ ಅಂದರೆ ಪಠ್ಯ ತಯಾರಿಯ ಕೆಲಸಗಳನ್ನು ಸುಲಭವಾಗಿ ಮಾಡಬಹುದು. ಲೇಖಕರುಗಳೇ, ಗಮನಿಸುತ್ತಿದ್ದೀರಾ?
ನಿಮ್ಮಲ್ಲಿ ಯುಎಸ್‌ಬಿ ಮೂಲಕ ಜೋಡಣೆಯಾಗುವ ಪ್ರಿಂಟರ್ ಇದ್ದಲ್ಲಿ ಅದನ್ನೂ ನೀವು ಓಟಿಜಿ ಮೂಲಕ ಜೋಡಿಸ ಬಳಬಹುದು. ಆದರೆ ಅದಕ್ಕಾಗಿ ಅಗತ್ಯ ಆಪ್ ಮತ್ತು ಡ್ರೈವರ್ ತಂತ್ರಾಂಶಗಳನ್ನು ನಿಮ್ಮ ಫೋನ್ ಅಥವಾ ಟ್ಯಾಬ್ಲೆಟ್‌ಗೆ ಹಾಕಿಕೊಳ್ಳಬೇಕು. ನಾನು ಹುಡುಕಾಡಿದಾಗ ನನಗೆ ಉಚಿತ ಆಪ್ ಯಾವುದೂ ಕಂಡುಬರಲಿಲ್ಲ. ಅದೃಷ್ಟಕ್ಕೆ ಹೆಚ್ಚಿನವುಗಳು ಹಣ ನೀಡದೆ ಪರೀಕ್ಷಿಸಲು ಅನುವು ಮಾಡಿಕೊಡುತ್ತವೆ. ಅವು ಕೆಲಸ ಮಾಡುತ್ತವೆ ಎಂದು ಖಾತ್ರಿಯಾದಾಗ ಹಣ ನೀಡಿ ಕೊಂಡುಕೊಳ್ಳಬಹುದು.
ಇನ್ನೂ ಒಂದು ಅತ್ಯುತ್ತಮ ಸೌಕರ್ಯ ಬೇಕೇ? ನಿಮ್ಮ ಫೋನ್ ಅಥವಾ ಟ್ಯಾಬ್ಲೆಟ್‌ನಿಂದ ಓಟಿಜಿ ಬಳಸಿ ಇನ್ನೊಂದು ಫೋನ್ ಅಥವಾ ಯುಎಸ್‌ಬಿ ಮೂಲಕ ಚಾರ್ಜ್ ಆಗುವ ಯಾವುದೇ ಸಾಧನವನ್ನು ಚಾರ್ಜ್ ಮಾಡಬಹುದು! ಆದರೆ ಹೀಗೆ ಮಾಡುವಾಗ ಎಚ್ಚರವಿರಲಿ. ನಿಮ್ಮ ಫೋನ್ ಅಥವಾ ಟ್ಯಾಬ್ಲೆಟ್‌ನ ಬ್ಯಾಟರಿ ಶಕ್ತಿ ಎಷ್ಟು, ಚಾರ್ಜ್ ಮಾಡಬೇಕಾಗಿರುವ ಸಾಧನದ ಬ್ಯಾಟರಿ ಶಕ್ತಿ ಎಷ್ಟು ಎಂಬುದನ್ನೆಲ್ಲ ಗಮನದಲ್ಲಿಟ್ಟುಕೊಳ್ಳಬೇಕು. ನಿಜವಾದ ತುರ್ತು ಸಂದರ್ಭಗಳಲ್ಲಿ ಮಾತ್ರ ಹೀಗೆ ಮಾಡುವುದು ಒಳಿತು.

Thursday 16 October 2014

ಫಿಟಿಂಗ್‌ಗಿಂತ ಕಟಿಂಗ್‌ ಮುಖ್ಯ

ಅಕ್ಟೋಬರ್ 16 ವಿಶ್ವ ಆಹಾರ ದಿನ. ವಿಶ್ವ ಸಂಸ್ಥೆಯ ಆಹಾರ ಮತ್ತು ಕೃಷಿ ಸಂಘಟನೆಯನ್ನು ಸ್ಥಾಪಿಸಿದ ಸಂಕೇತವಾಗಿ ಈ ದಿನವನ್ನು ಆಚರಿಸಲಾಗುತ್ತಿದೆ. ಕೌಟುಂಬಿಕ ಬೇಸಾಯ, ‘ವಿಶ್ವಜನತೆಗೆ ಆಹಾರ ಪೂರೈಕೆ, ಪೃಥ್ವಿಯ ರಕ್ಷಣೆ’ ಪ್ರಸಕ್ತ ವರ್ಷದ ಆಶಯ.೨೦೧೪
ಶ್ರೀಹರಿಕೋಟಾ (ಪಿಟಿಐ):ಭಾರತೀಯ ಪ್ರಾದೇಶಿಕ ಸಂಚಾರ ನಿರ್ವಹಣಾ ವ್ಯವಸ್ಥೆ ಉಪಗ್ರಹದ (ಐಆರ್‌ಎನ್‌ಎಸ್‌ಎಸ್‌) ಯಶಸ್ವಿ ಉಡಾವಣೆಯ ಮೂಲಕ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಬಾಹ್ಯಾಕಾಶ ಕ್ಷೇತ್ರದಲ್ಲಿ ಮತ್ತೊಂದು ಅಧ್ಯಾಯ ರಚಿಸಿದೆ.

ಫಿಟಿಂಗ್‌ಗಿಂತ ಕಟಿಂಗ್‌ ಮುಖ್ಯ

ಒಮ್ಮೆಲೆ ನೋಡಿದರೆ ಹೆಚ್ಚೂ ಕಡಿಮೆ ಎಲ್ಲ ಒಂದೇ ರೀತಿ ಎನಿಸುವ ಜೀನ್ಸ್‌ನಲ್ಲಿಯೂ ಬಹಳ ವಿಧಗಳಿವೆ. ಪ್ಯಾಂಟಿನ ಕಟ್‌ ಮತ್ತು ಹೊಲಿಗೆಯ ರೀತಿ, ಅದಕ್ಕೆ ಅಲಂಕರಿಸಿದ ಆಭರಣ ಸಹಿತ ಇನ್ನೂ ಹಲವು ಎದ್ದು ಕಾಣುವ ವೈಶಿಷ್ಟ್ಯಗಳಿವೆ. ಗಮನಿಸಿ ನೋಡಿದರೆ ಹೌದೇ ಎನಿಸುತ್ತದೆ. ಅರೆ ಇಷ್ಟೆಲ್ಲ ಇದೆಯಾ ಎನಿಸುವಷ್ಟು ವೈವಿಧ್ಯ ದೊರೆಯುತ್ತದೆ.
ಪ್ಯಾಂಟಿನ ನಡುಪಟ್ಟಿ ಅಥವಾ ಬೆಲ್ಟ್‌ನ ಜಾಗ ಕೂಡ ಎಲ್ಲ ಪ್ಯಾಂಟಿಗೆ ಒಂದೇ ಎಂದಿರುವುದಿಲ್ಲ. ಇನ್ನು ಪಾಕೆಟ್‌ಗಳು, ಕರ್ವ್‌, ಬಣ್ಣ, ನೇಯ್ಗೆ ಎಲ್ಲವೂ ಮುಖ್ಯವಾಗುತ್ತದೆ. ಬರೀ ಫಿಟಿಂಗ್‌ಗಿಂತಲೂ ತಮಗೆಷ್ಟು ಸೂಕ್ತವಾಗಿ ಹೊಂದುತ್ತದೆ ಎಂಬುದು ಬಹಳ ಮುಖ್ಯ.
ಇಟಲಿಯ ಜಿನೋವಾ ಕಾಟನ್‌ ಕಾರ್‌ಡ್ರಾಯ್‌ (corduroy)ಗೆ ಪ್ರಸಿದ್ಧ. ಜಿನೋವಾಗೆ ಫ್ರೆಂಚ್‌ನಲ್ಲಿ ಪರ್ಯಾಯ ಪದವೆಂದರೆ genes. ಬಹುಶಃ ಇದೇ ಪದದಿಂದ ಬಂದಿರಬಹುದು ಜೀನ್ಸ್‌ ಶಬ್ದ. ಜೀನ್ಸ್‌್‌ ಡೆನಿಮ್‌ ಅಥವಾ ಡಂಗರಿ ಬಟ್ಟೆಯಿಂದ ತಯಾರಾಗಿರುತ್ತದೆ. ಅದರಲ್ಲಿ ಶೇ 1ರಿಂದ ಶೇ 2ರಷ್ಟು ಲೈಕ್ರಾ (ಸ್ಪ್ಯಾಂಡೆಕ್ಸ್‌) ಇರುತ್ತದೆ. ಹಾಗಾಗಿ ಬಟ್ಟೆಗೆ ಸ್ಥಿತಿಸ್ಥಾಪಕತ್ವ ಗುಣ ಬರುತ್ತದೆ. ಅದಕ್ಕಾಗೇ ಅದು ಆರಾಮವಾಗಿಯೂ ಇರುತ್ತಲೇ ಹಿಡಿದಿಟ್ಟಂತೆ ಎನಿಸುತ್ತದೆ.
ಯಾವ ಬಣ್ಣ?: ಬ್ಲೂ ಜೀನ್ಸ್‌ ಸಾಮಾನ್ಯವಾಗಿ ಕಂಡುಬರುವ ವಿಧ. ನೈಸರ್ಗಿಕವಾಗಿ ಇಂಡಿಗೊ ಬಣ್ಣ ಬಳಸಿ ಸಾಂಪ್ರದಾಯಿಕ ಬಣ್ಣದ ಜೀನ್ಸ್‌ ತಯಾರಾಗುತ್ತಿತ್ತು. ಆದರೆ ಈಗ ಸಿಂಥೆಟಿಕ್‌ ಇಂಡಿಗೊ ಬಣ್ಣ ಪಡೆದು ಬಣ್ಣಗಾಣುತ್ತಿವೆ ಜೀನ್ಸ್‌ಗಳು. ಒಂದು ಜೊತೆ ಡೆನಿಮ್‌ಗೆ ಕೇವಲ ಕೆಲವೇ ಗ್ರಾಮ್‌ ಬಣ್ಣ ಸಾಕು. ಅಂಥದರಲ್ಲಿ ಅಂದಾಜು ವರ್ಷಕ್ಕೆ 20 ಸಾವಿರ ಟನ್‌ ಇಂಡಿಗೊ ಇದೇ ಉದ್ದೇಶಕ್ಕಾಗೇ ಉತ್ಪಾದನೆಯಾಗುತ್ತದೆ. ಈಗೆ ಹೆಚ್ಚೂ ಕಡಿಮೆ ಎಲ್ಲ ಬಣ್ಣಗಳಲ್ಲೂ ಜೀನ್ಸ್‌ ದೊರೆಯುತ್ತಿವೆ. ಅವುಗಳಿಗೆ ಬಣ್ಣ ಹಾಕುವ ವಿಧಾನವೇ ಬೇರೆ. ಏನೇ ಆಗಲಿ, ಬ್ಲೂ ಜೀನ್ಸ್‌ ಮಾತ್ರ ಅಮೆರಿಕ ಸಂಸ್ಕೃತಿಯ ಪ್ರತೀಕವಾಗಿ ಈಗಲೂ ಯುವಜನರನ್ನು ಹಿಡಿದಿಟ್ಟುಕೊಂಡಿದೆ. ಕ್ಲಾಸಿಕ್‌ ಲುಕ್‌ ಕೊಡುವ ಕಾರಣಕ್ಕೆ ಮಧ್ಯ ವಯಸ್ಸಿನವರಲ್ಲೂ ಬಲುಪ್ರಿಯ.
1963ರಲ್ಲಿ ಲೆವಿ ಸ್ಟ್ರಾಸ್‌ ಮೊದಲೇ ಉಡುಗಿಸಿಟ್ಟ  ಜೀನ್ಸ್‌ ತಯಾರು ಮಾಡಿ ಮಾರುಕಟ್ಟೆಗೆ ಬಿಟ್ಟದ್ದು. ಇದರಿಂದ ಗ್ರಾಹಕರು ತಮಗೆ ಸರಿಯಾಗಿ ಹೊಂದುವ ಅಳತೆಯ ಜೀನ್ಸ್‌ಅನ್ನೇ ಕೊಳ್ಳಲು ಸಾಧ್ಯವಾಯಿತು.
ಆಸಿಡ್‌ ವಾಶ್‌್: ಬಳಸಿದ ಜೀನ್ಸ್‌ನ ನೋಟಕ್ಕೆ ಆಸಿಡ್‌ ವಾಶ್‌ ಮಾಡಿದ ಜೀನ್ಸ್‌ ಕೊಳ್ಳಬಹುದು. ಅಕ್ರಿಲ್‌ ರೆಸಿನ್‌, ಫಿನಾಲ್‌, ಹೈಪೊಕ್ಲೋರೈಟ್‌, ಪೊಟ್ಯಾಷಿಯಂ ಪರಮಾಂಗನೇಟ್‌, ಕಾಸ್ಟಿಕ್‌ ಸೋಡಾ, ಆಸಿಡ್‌ ಇತ್ಯಾದಿ ರಾಸಾಯನಿಕ ಪದಾರ್ಥ ಬಳಸಿ ವಾಶ್‌ ಮಾಡಿರುತ್ತಾರೆ. ಹಾಕಿ ಹಾಕಿ ಹಳೆಯದಾದ ಜೀನ್ಸ್‌ನಂತೆ ಕಾಣಲು ಸ್ಯಾಂಡ್‌ಬ್ಲಾಸ್ಟಿಂಗ್‌ ತಂತ್ರ ಅನುಸರಿಸುತ್ತಿದ್ದರು. ಇದು ಈಗ ಅಷ್ಟಾಗಿ ಬಳಕೆಯಲ್ಲಿಲ್ಲ. ನೋಡಲೆಂತೊ ಏನೋ, ಬಟ್ಟೆಯ ವಿಧ ಒಂದು ತರಹ ಆದರೆ, ಪ್ಯಾಂಟ್‌ನ ಹೊಲಿಗೆಯ ಲೈನ್‌ಗಳು, ಹೊಲಿಗೆಗೂ ಮೊದಲು ಕತ್ತರಿಸಿ ಕಟ್‌ ಸ್ಟೈಲ್‌ಗಳೆಲ್ಲ ಬಹಳ ಮುಖ್ಯವಾಗಿಬಿಡುತ್ತವೆ.
ಕಟ್‌ ಎಂದರೆ ಬರೀ ಕಾಲಿನ ಶೇಪ್‌ ಅಲ್ಲ, ಕರ್ವ್‌ ಹೇಗಿರಬೇಕು, ಹಿಂಭಾಗದಲ್ಲಿ ಬೆಲ್ಟ್‌ನ ಕೆಳಗೆ ಬರುವ ಯೋಕ್‌ (ಎರಡೂ ಕಾಲು ಕೂಡುವ ಜಾಗದ ಮೇಲೆ ಎಲೆ ಅಥವಾ ಹೃದಯದಾಕಾರದ ಕಟ್‌ಪೀಸ್‌ ಕೂರಿಸಿದ ರೀತಿ); ಪಾಕೆಟ್‌ನ ಸೈಜ್‌ ಮತ್ತು ಶೇಪ್‌; ಹಿಂದಿನ ಪಾಕೆಟ್‌ನ ಮೇಲೆ ಲೋಹದ ಪುಟ್ಟ ಬಟನ್‌ ಅಥವಾ ಇತರ ವಿನ್ಯಾಸದ ಅಲಂಕಾರ; ನಾಲ್ಕು ಪಾಕೆಟ್‌ನ ಪ್ಯಾಂಟೊ, ಐದು ಪಾಕೆಟ್‌ನ ಪ್ಯಾಂಟೊ ಎನ್ನುವುದು; ಪುಟ್ಟ ಕಾಯಿನ್‌ ಪಾಕೆಟ್‌ಗೆ ಜಿಪ್‌ ಇರಬೇಕಾ, ಮುಂದಿನ ಪಾಕೆಟ್‌ ಪ್ಯಾಂಟಿನೊಳಗೇ ಇರಬೇಕಾ ಮೇಲೆ ಹಚ್ಚಿ ಹೊಲಿದಿರಬೇಕಾ ಎನ್ನುವುದೆಲ್ಲ ಬಹಳ ಬಹಳ ಮುಖ್ಯವಾಗುತ್ತವೆ. ಎಲ್ಲವೂ ನಮ್ಮದೇ ಸ್ಟೈಲ್‌ ತೋರಲೆಂದೇ ಇರುತ್ತವಲ್ಲ.
ಸಾಮಾನ್ಯವಾಗಿ ನಡುಪಟ್ಟಿ ಒಂದರಮೇಲೊಂದು ಪದರದ ಡೆನಿಮ್‌ ಹೊಲಿಗೆ ಹಾಕಿದ್ದು ಇರುತ್ತದೆ. ಆದರೆ ಈ ನಡುಪಟ್ಟಿ ಎಲ್ಲಿ ಬರುವಂತೆ ಇರುತ್ತದೆ ಎನ್ನುವುದು ಸ್ಟೈಲ್‌ನ ಪ್ರಮುಖ ಅಂಶ. ಹೈ ರೈಸ್‌ ಮತ್ತು ಸೂಪರ್‌ ಹೈ ರೈಸ್‌ ಪ್ಯಾಂಟ್‌ ಎತ್ತರದ ನಿಲುವಿನವರಿಗೆ ಹೇಳಿದ್ದು. ಸೂಪರ್‌ ಹೈರೈಸ್‌ ಎಂದರೆ ನಡುಪಟ್ಟಿ ನಡುವಿನಿಂದ 1ಇಂಚಿಗಿಂತ ಹೆಚ್ಚು ಮೇಲಿರುತ್ತದೆ. ಹೈರೈಸ್‌ನಲ್ಲಿ ನಡುವಿನಿಂದ 1ಇಂಚು ಮೇಲೆ. ಮೀಡಿಯಂ ರೈಸ್‌ನಲ್ಲಿ ಸರಿಯಾಗಿ ನಡುವಿಗೆ ಬರುವಂತೆ ಇರುತ್ತದೆ.
ಮೀಡಿಯಂನಿಂದ ಲೋರೈಸ್‌ ಎಂದರೆ ಹೊಕ್ಕಳಿನಿಂದ 2–3 ಇಂಚು ಕೆಳಗೆ. ಹೆಚ್ಚಿನ ಬ್ರಾಂಡ್‌ಗಳಲ್ಲಿ ಹೆಣ್ಮಕ್ಕಳಿಗೆ ಹೆಚ್ಚು ಇಷ್ಟವಾದ ವಿಧ ಇದು. ತೆಳುವಾದ ಆಕಾರದ ದೇಹಕ್ಕೆ ಹೇಳಿಸಿದ್ದು. ಸ್ವಲ್ಪ ದೇಹಾಕಾರದ ತಿರುವು ಹೆಚ್ಚಿದ್ದವರು ಮಿಡ್‌ರೈಸ್‌ ಹಾಕುವುದು ಒಳಿತು.
ಲೋರೈಸ್‌ ಹೊಕ್ಕಳಿನಿಂದ ತೀರ ಕೆಳಗೆ ಅಂದರೆ 3–5 ಇಂಚು ಕೆಳಗೆ ಇರುತ್ತದೆ. ಈ ವಿಧವಂತೂ ಚಪ್ಪಟೆ ಹೊಟ್ಟೆಯ ಕೃಶಾಂಗಿಯರಿಗೇ ಸೈ. ಅಲ್ಟ್ರಾ ಲೋರೈಸ್‌ ಇದಂತೂ ದಿಟ್ಟ ಕಾಮೋತ್ತೇಜಕ ಕಟ್‌ಗಳಿದ್ದು, ಬ್ರೆಜಿಲಿಯನ್‌ ಜೀನ್ಸ್‌ನಲ್ಲಿ ಬಹಳ ಜನಪ್ರಿಯವಾಗಿದೆ. ಅಷ್ಟೇನೂ ಎತ್ತರವಿರದವರಿಗೆ ಹೆಚ್ಚು ಒಪ್ಪುತ್ತದೆ.
ಮೇರಿ ಕೋಮ್


ಐದು ಬಾರಿ ವಿಶ್ವ ಚಾಂಪಿಯನ್‌ ಆದ  ಬಾಕ್ಸರ್‌ ಮಣಿಪುರದ ಎಂ.ಸಿ. ಮೇರಿ ಕೋಮ್‌





ಶಾರುಖ್ ಖಾನ್ ಹಾಗೂ ಕಾಜೋಲ್ ಅಭಿನಯದ ಅತ್ಯುತ್ತಮ ಚಿತ್ರಗಳಲ್ಲಿ ಒಂದಾದ ‘ದಿಲ್‌ವಾಲೇ ದುಲ್ಹನಿಯಾ ಲೇ ಜಾಯೇಂಗೆ’ (ಡಿಡಿಎಲ್‌ಜೆ) ಇದೀಗ ಮತ್ತೊಂದು ಮೈಲಿಗಲ್ಲು ಮುಟ್ಟುತ್ತಿದೆ. ಇದೇ ಅಕ್ಟೋಬರ್ 20ಕ್ಕೆ ಚಿತ್ರ ಬರೋಬ್ಬರಿ 19 ವರ್ಷಗಳನ್ನು ಪೂರೈಸಿ 20ನೇ ವರ್ಷಕ್ಕೆ ಕಾಲಿರಿಸಲಿದೆ.