Friday 17 October 2014

ಎಬೋಲಾ ವೈರಸ್‌


ವಿಶ್ವಸಂಸ್ಥೆ (ಐಎಎನ್‌ಎಸ್‌):
 ಆಫ್ರಿಕಾ ದೇಶಗಳಲ್ಲಿ ಮಾರಣಾಂತಿಕ ಎಬೋಲಾ ವೈರಸ್‌ನಿಂದ ಇದುವರೆಗೆ 4,493 ಮಂದಿ ಮೃತಪಟ್ಟಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ದೃಢಪಡಿಸಿದೆ.
‘ಡಬ್ಲ್ಯುಎಚ್‌ಒ’ ಇತ್ತೀಚೆಗೆ ಬಿಡುಗಡೆ ಮಾಡಿರುವ ಅಂಕಿ ಅಂಶದಂತೆ ಇದುವರೆಗೆ 7 ದೇಶಗಳಲ್ಲಿ 8,997 ಎಬೋಲಾ ಪ್ರಕರಣಗಳು ವರದಿ­ಯಾಗಿವೆ. ಇದರಲ್ಲಿ 4,493 ಮಂದಿ ಮೃತಪಟ್ಟಿದ್ದಾರೆ ಎಂದು ಡಬ್ಲ್ಯುಎಚ್‌ಒ’ನ ವಕ್ತಾರ ಸ್ಫೀಫನ್‌ ಡುಜಾರಿಕ್‌ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಎಬೋಲಾ ನಿಯಂತ್ರಣದಲ್ಲಿ ತೊಡಗಿರುವ ಆರೋಗ್ಯ ಕಾರ್ಯಕರ್ತರಿಗೂ ಸೋಂಕು ತಗುಲಿದೆ. 427 ಮಂದಿಗೆ ವೈರಸ್‌ ಇರುವುದು ಪತ್ತೆಯಾಗಿದ್ದು ಇವರಲ್ಲಿ  236 ಮಂದಿ ಮೃತಪಟ್ಟಿದ್ದಾರೆ ಎಂದು ಅವರು ತಿಳಿಸಿದರು.
ಆಫ್ರಿಕಾದ ಜಿನಿಯಾ, ಲೈಬೀರಿಯಾ, ಸಿರಿಯಾ ಲಿಯೊನ್‌ನಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಈ ದೇಶಗಳಲ್ಲಿ ಮುಂದಿನ 12 ತಿಂಗಳಲ್ಲಿ ಸುಮಾರು 8 ಲಕ್ಷ ಮಹಿಳೆ­ಯರು ಮಕ್ಕಳಿಗೆ  ಜನ್ಮ ನೀಡಲಿದ್ದು, ಎಲ್ಲೆಡೆ ಸೋಂಕು ಹರಡಿರುವುದರಿಂದ  ಗರ್ಭಿಣಿಯರು  ತೀವ್ರ ಎಚ್ಚರಿಕೆ ವಹಿಸು­ವಂತೆಯೂ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಪಾಲಕರ ಸಭೆಗೆ ಇರಲಿ ಸಿದ್ಧತೆ:

ಪಾಲಕರ– ಟೀಚರ್‌ ಸಭೆಗಳು ಈಗ ಹಿಂದಿಗಿಂತಲೂ ಹೆಚ್ಚು. ಕೆಲವು ಶಾಲೆಗಳು ತಿಂಗಳಿಗೊಮ್ಮೆ ಇಂಥ ಮೀಟಿಂಗ್‌ ನಡೆಸಿದರೆ, ಇನ್ನು ಕೆಲವು ಶಾಲೆಗಳಲ್ಲಿ ಪ್ರತಿ ಪರೀಕ್ಷೆಯ ನಂತರ ಅವರ ಶೈಕ್ಷಣಿಕ ಪ್ರಗತಿ ತಿಳಿಸಲು ಇಂಥ ಸಭೆ ಏರ್ಪಡಿಸುವುದಿದೆ. ಬಂದ ಪಾಲಕರನ್ನೆಲ್ಲ ಒಂದು ಕಡೆ ಕೂರಿಸಿ ಟೀಚರ್‌ ಪಾಲಕರನ್ನು ಉದ್ದೇಶಿಸಿ ಮಾತನಾಡುವುದು ಸಾಮಾನ್ಯವಾಗಿ ನಡೆಯುತ್ತದೆ.
ಪ್ರಶ್ನೆಗಳು, ಅನುಮಾನಗಳು ಇದ್ದಲ್ಲಿ ಪಾಲಕರೂ ಟೀಚರ್‌, ಪ್ರಿನ್ಸಿಪಾಲರನ್ನು ಕೇಳಿ ಪರಿಹರಿಸಿಕೊಳ್ಳಬಹುದು. ಸಲಹೆ ನೀಡಬಹುದು ಎನ್ನುತ್ತಾರೆ, ಕೆಲವು ಕಡೆ, ಬರೆದುಕೊಡಲು ಬಾಕ್ಸ್‌ ಇರಿಸಿರುತ್ತಾರೆ. ಕೆಲವು ಶಾಲೆಗಳಲ್ಲಿ ಒಂದೊಂದು ಬ್ಯಾಚ್‌ನವರಿಗೆ ಒಂದೊಂದು ಸಮಯ ನಿಗದಿಪಡಿಸಿದರೆ, ಇನ್ನು ಕೆಲವು ಕಡೆ ಎಲ್ಲ ತರಗತಿಗೂ ಒಂದೇ ದಿನ ಮೀಟಿಂಗ್‌ ಇರುತ್ತದೆ. ಒಂದೇ ಶಾಲೆಯಲ್ಲಿ ಇಬ್ಬರು ಮಕ್ಕಳು ಓದುವ ಸಂದರ್ಭಕ್ಕೆ ಹೀಗೆ ಒಂದೇ ಸಮಯಕ್ಕೆ ಇರಿಸುವ ಮೀಟಿಂಗ್‌ ಅನುಕೂಲಕರವೇ. ಅರ್ಧ ದಿನ ಕಚೇರಿಗೆ ರಜೆ ಹಾಕಿ ಇಬ್ಬರು ಮಕ್ಕಳ ಬಗ್ಗೆಯೂ ವಿಚಾರಿಸಿಕೊಂಡು ಬರಬಹುದು.
ಮೀಟಿಂಗ್‌ ತುಂಬ ಔಪಚಾರಿಕವಾಗಿದ್ದರೆ, ಕೇಳುವ ಪ್ರಶ್ನೆಗಳಿಗೆ ಸಾಮಾನ್ಯವಾದ, ವ್ಯಾಪಕ ಅರ್ಥದ ಉತ್ತರ ಬರುವುದೇ ಹೆಚ್ಚು. ನಿರ್ದಿಷ್ಟ ಉತ್ತರ ಬೇಕೆಂದಿದ್ದರೆ ಬಹಳ ಸ್ಪಷ್ಟವಾಗಿ ಪ್ರಶ್ನೆ ಕೇಳಬೇಕಾಗುತ್ತದೆ. ಹೆಂಗೆ ಓದ್ತಿದಾಳೆ ನಮ್ಮ ಮಗಳು ಎಂದು ಕೇಳಿದರೆ, ನಿಮ್ಮ ಮಗಳ ಮುಖ ಅವರ ಕಣ್ಣಮುಂದೆ ಬಂದಿರುತ್ತದೊ ಇಲ್ಲವೊ, ತಕ್ಷಣ ಅವರಿಂದ ಬರುವ ಉತ್ತರ ಪರವಾಗಿಲ್ಲ, ಚೆನ್ನಾಗಿದಾಳೆ, ನೀವೂ ಮನೆಯಲ್ಲಿ ಸ್ವಲ್ಪ ಹೇಳಿಕೊಡಿ ಅಂತ.
ಧಾರವಾಡದ ಕೆಲಗೇರಿಯಲ್ಲಿರುವ ಜೆಸ್‌ಎಸ್‌ಎಸ್‌ ಪಬ್ಲಿಕ್‌ ಶಾಲೆಯ ಪ್ರಿನ್ಸಿಪಾಲರಾದ ಜಿ.ಬಿ. ಹೆಗಡಿ, ಪಾಲಕರ ಸಭೆಗಳ ಬಗ್ಗೆ ಮಾತನಾಡುತ್ತ, ಪಾಲಕರು ಇಂತಹ ಸಭೆಗಳಿಗೆ ಬಂದಾಗ ಕೇವಲ ಕ್ಲಾಸ್‌ ಟೀಚರ್‌ ಮಾತ್ರವಲ್ಲ, ಎಲ್ಲ ವಿಷಯದ ಶಿಕ್ಷಕರನ್ನೂ ಭೇಟಿಯಾಗಬೇಕು ಎನ್ನುತ್ತಾರೆ. ‘ಸಭೆಗೆ ಬರಲು ವಿಶೇಷ ತಯಾರಿಯೇನೂ ಬೇಕಿಲ್ಲ, ಮಕ್ಕಳ ಬಗ್ಗೆ ಪಾಲಕರ ತರಹ ನಮಗೂ ಕಾಳಜಿ ಇರುತ್ತದೆ. ಆದರೆ ಒಟ್ಟಾರೆ ಇತ್ತೀಚಿನ ದಿನಗಳಲ್ಲಿ ಮಕ್ಕಳ ಮೇಲೆ ಹೆಚ್ಚಿನ ನಿರೀಕ್ಷೆಯ ಭಾರ ಇದೆ’ ಎಂದು ಅವರು ಅಭಿಪ್ರಾಯಪಡುತ್ತಾರೆ.
ಅಭ್ಯಾಸವೊಂದೇ ಅಲ್ಲ, ಇತರ ಪಠ್ಯೇತರ ಚಟುವಟಿಕೆ, ಲಲಿತಕಲೆ ಎಲ್ಲದರಲ್ಲೂ ತಮ್ಮ ಮಗು ಅತ್ಯುನ್ನತ ಸಾಧನೆ ಮಾಡಲಿ ಎಂದೇ ಪಾಲಕರು ಬಯಸುತ್ತಿದ್ದಾರೆ ಎನ್ನುತ್ತಾರೆ ಅವರು. ಏನೇ ಆದರೂ ಶಾಲೆಯಲ್ಲಿ ಮಗು ಕೇವಲ ಏಳು ಗಂಟೆ ಇರುತ್ತದೆ. ಉಳಿದಂತೆ ಮನೆಯೇ ಅದರ ಕಲಿಕೆಯ ಪ್ರಮುಖ ತಾಣ ಎನ್ನುತ್ತಾರೆ ಅವರು. ಆದ್ದರಿಂದ ಪಾಲಕರೂ ಮಗುವಿನ ಒಟ್ಟಾರೆ ವ್ಯಕ್ತಿತ್ವದ ಬೆಳವಣಿಗೆಗೆ ಸಹಕರಿಸಬೇಕು ಎನ್ನುವ ಕಿವಿಮಾತು ಅವರದು.
ಹುಬ್ಬಳ್ಳಿ– ಧಾರವಾಡದ ಕಿಡ್‌ಜೀ ಸಂಚಾಲಕರಾದ ಸವಿತಾ ದುಬೆ ಕೂಡ ಇದನ್ನೇ ಹೇಳುತ್ತಾರೆ. ‘ಪಾಲಕರೂ ಮಕ್ಕಳ ಬೆಳವಣಿಗೆಯ, ಕಲಿಕೆಯ ಘಟ್ಟಗಳನ್ನು ಗಮನಿಸುತ್ತಿರಬೇಕು. ಮಕ್ಕಳು ಶಾಲೆಗಿಂತ ಮನೆಯಲ್ಲೇ ಹೆಚ್ಚು ಸಮಯ ಕಳೆಯುವುದು. ಶಾಲೆಯಲ್ಲಿ ಸ್ಪಂದಿಸುವ ತರಹ, ಮಗು ಮನೆಯಲ್ಲೂ ಕಲಿಕೆಯ ಹಂತಗಳನ್ನು ದಾಟುತ್ತಿರುವ ಬಗೆಯನ್ನು ಗಮನವಿಟ್ಟು ಅರಿಯಬೇಕು. ಶಾಲೆಯಲ್ಲಿ ರೈಮ್‌ ಗುನುಗುವ ಮಗು ಮನೆಯಲ್ಲಿ ಹೇಳದೇ ಇದ್ದರೆ, ಅಥವಾ ಇತರ ವರ್ತನೆಯಲ್ಲಿ ಸಹಜತೆ ಇಲ್ಲದಿದ್ದರೆ ಶಾಲೆಯ ಗಮನಕ್ಕೆ ತರಬೇಕು’ ಎನ್ನುತ್ತಾರೆ ಅವರು.
ಈ ನಿಟ್ಟಿನಲ್ಲಿ ಹೆಚ್ಚು ಕಾರ್ಯಚಟುವಟಿಕೆ ಕೈಗೊಂಡು ಇದನ್ನು ಸರಿಪಡಿಸಲು ಅವರು ಶ್ರಮಿಸಲು ಇದು ಸಾಧ್ಯವಾಗುತ್ತದೆಯಂತೆ. ವೈಯಕ್ತಿಕ ಪ್ರಗತಿಯನ್ನು ಹಂತ ಹಂತವಾಗಿ ವಿವರವಾಗಿ ಮಗುವಿನ ನಿಕಟ ಸಂಪರ್ಕದಲ್ಲಿರುವ ಟೀಚರ್‌ ಬರೆದಿಟ್ಟಿರುತ್ತಾರೆ. ಪಾಲಕ– ಟೀಚರ್‌ ಸಭೆ ನಡೆದಾಗ ಅದನ್ನು ನೋಡುವ ಪಾಲಕರು ಈ ದಾಖಲೆಗೆ ಸ್ಪಂದಿಸಬೇಕು. ಅದರಂತೆಯೇ ಮಗುವಿನ ಪ್ರಗತಿ ಮನೆಯಲ್ಲಿ ಕಂಡುಬರುತ್ತಿಲ್ಲ ಎಂದಾದರೆ ಅದನ್ನೂ ಬರೆಯಲು ಅವಕಾಶವಿದೆ.
ನಂತರ ಅದನ್ನು ಸರಿಪಡಿಸುವ ಬಗ್ಗೆ ಅವರು ತಾವೇ ಶಿಕ್ಷಕರ ಜತೆ ಸಭೆ ನಡೆಸಿ ನಿರ್ಧರಿಸುತ್ತಾರೆ. ಆಗ ಒಟ್ಟಾರೆ ಮಗುವಿನ ಕಲಿಕೆ ಪರಿಪೂರ್ಣವಾಗಿರುವಂತೆ ನೋಡಿಕೊಳ್ಳಲು ಸಾಧ್ಯ ಎನ್ನುವ ಅಭಿಪ್ರಾಯ ಅವರದು. ಆದರೆ ತರಗತಿಯಲ್ಲಿ ಮಕ್ಕಳು ಹೆಚ್ಚಿದಂತೆ, ಕಲಿಕೆಯ ವಿಷಯಗಳು ಹೆಚ್ಚಿ, ಪ್ರತಿ ವಿಷಯಕ್ಕೂ ಬೇರೆ ಬೇರೆ ಟೀಚರ್‌ ಇದ್ದು, ತರಗತಿ ತುಂಬಿ ತುಳುಕಿದರೂ ಇದೇ ವಿಧಾನ ಸಲೀಸಾಗಿ ಅನುಸರಿಸಬಹುದು ಎನ್ನುತ್ತಾರೆ ಸವಿತಾ. ಯಾವ ಶಾಲೆಯೂ ಈ ವಿಧಾನವನ್ನು ಅನುಸರಿಸಬಹುದು ಎನ್ನುವ ಖಚಿತ ನಿಲುವು ಅವರದು.
ಹೌದು. ಇನ್ನೂ ಪ್ಲೇಗ್ರೂಪ್‌ನಲ್ಲಿರುವ ಮಗು, ಅಲ್ಲಿ ಇರುವ ಸ್ವಲ್ಪವೇ ಮಕ್ಕಳ ಜತೆ ಕೂಡ ಹೇಗೆ ಬೆರೆಯುತ್ತದೆ? ಆಟಿಕೆಗಳನ್ನು ಹಂಚಿಕೊಂಡು ಅವರೊಡನೆ ಕೂಡಿ ಆಡುತ್ತದೆಯೆ? ತಾನೊಂದೇ ಇರಲು ಬಯಸುತ್ತದೆಯೆ, ಗುಂಪಿನಲ್ಲಿ ಆಡಲು ಇಷ್ಟಪಡುತ್ತದೆಯೆ ಎಂಬುದೆಲ್ಲವನ್ನೂ ಅವರು ದಾಖಲಿಸುತ್ತಾರೆ. ಮನೆಯ ವಿಷಯವನ್ನು ಶಾಲೆಯಲ್ಲಿ ಹೇಳಿಕೊಳ್ಳುತ್ತದೆಯೆ? ಎಂಬುದನ್ನೂ ಅರಿತಿರುತ್ತಾರೆ.
ಯಾವುದಕ್ಕೂ ಒತ್ತಾಯ ಮಾಡದಿದ್ದರೂ ಮಗುವಿನ ಸಹಜ ಸ್ವಭಾವವನ್ನು ಗಮನಿಸಿ ಅದಕ್ಕೆ ತಕ್ಕಂತೆ ಅವರು ಕಲಿಕಾ ವಿಧಾನವನ್ನೂ ಅನುಸರಿಸುವುದು ವಿಧಾನ. ನಾವು ಶಾಲೆಯಲ್ಲಿ ನಮ್ಮ ಮಗು ಹೇಗಿದೆ ಎಂದು ಕೇಳುವಂತೆಯೇ ಅವರಿಗೂ ಕುತೂಹಲವಿದೆ. ಮಗು ಮನೆಯಲ್ಲಿ ಯಾವ ಆಟವನ್ನು ಬಹಳ ಇಷ್ಟಪಟ್ಟು ಆಡುವುದು? ಶಾಲೆಗೆ ಖುಷಿಯಿಂದ ಹೋಗುತ್ತದೆಯೆ ಎಂಬ ಮಾಹಿತಿಯನ್ನೂ ಪಾಲಕರಿಂದ ಕಲೆಹಾಕುತ್ತಾರೆ. ಸಲಹೆ, ಸೂಚನೆಗಳಿಗೆ ಮುಕ್ತಮನದ ಸ್ವಾಗತ ಅವರಿಂದ.
ಆದರೆ ಹೆಚ್ಚೇನಾದರೂ ಹೇಳಹೋದರೆ ನಮ್ಮ ಶಾಲೆಯಲ್ಲಿ ನಾವು ಇಷ್ಟೇ ಮಾಡಿಸಲು ಸಾಧ್ಯ. ಬೇಕಿದ್ದರೆ ನಿಮ್ಮ ಮಕ್ಕಳನ್ನು ಕರೆದುಕೊಂಡು ಹೋಗಬಹುದು ಎನ್ನುವ ದಾರ್ಷ್ಟ್ಯದ ಉತ್ತರವೂ ಸಿಗುತ್ತದೆ ಎಂದು ಧಾರವಾಡದ ಕಾನ್ವೆಂಟ್‌ ಶಾಲೆಯ ಪಾಲಕರೊಬ್ಬರು ಬೇಸರದಿಂದ ನುಡಿಯುತ್ತಾರೆ. ಮಾರ್ಕ್ಸ್‌ ಕಡಿಮೆ ಬಂದಿವೆ ಎಂದು ದೂರಿದರೆ, ಮಾಡ್ತಾರೆ ಬಿಡಿ ಎನ್ನುವ ಉತ್ತರ ಸಹಜ. ನಮ್ಮ ಮಕ್ಕಳ ಬಗ್ಗೆ ಅವರು ಚೆನ್ನಾದ ಅಭಿಪ್ರಾಯವನ್ನೇ ಕೊಡಬೇಕೆಂದಿಲ್ಲ.
ಅವರು ಸ್ವಲ್ಪ ನಿಷ್ಠುರವಾಗಿಯಾದರೂ ಸರಿ, ಸರಿಯಾದ ಚಿತ್ರಣವನ್ನೇ ನೀಡುವುದು ಸಮಂಜಸ ಎನ್ನುತ್ತಾರೆ ಐದನೇ ತರಗತಿಯ ವಿದ್ಯಾರ್ಥಿಯ ತಾಯಿ ವೇದಾ. ಕನಿಷ್ಠ ಮನೆಯಲ್ಲಾದರೂ ನಾವು ಆ ಅಂಶಗಳತ್ತ ವಿಶೇಷ ಗಮನ ನೀಡಬಹುದು. ಆಗ ನಿಜವಾದ ಪ್ರಗತಿ ಸಾಧ್ಯ ಎನ್ನುತ್ತಾರೆ ಅವರು.
ಪೇರೆಂಟ್‌– ಟೀಚರ್‌ ಮೀಟಿಂಗ್‌ಅನ್ನು ಹೆಚ್ಚು ಸುಲಭವಾಗಿಸಲು ಕೆಲವು ಟಿಪ್ಸ್‌ಗಳಿವೆ.
* ವಿಶೇಷ ಜ್ಞಾನ, ಬಲ, ದೌರ್ಬಲ್ಯ, ಇಷ್ಟಾನಿಷ್ಟಗಳ ಬಗ್ಗೆ ಹೇಳುವುದು ಒಳ್ಳೆಯದು. ಇದೂ ಅವರ ಕಲಿಕೆಯಲ್ಲಿ ನೆರವಾಗಬಲ್ಲದು. ನಮ್ಮ ಮಕ್ಕಳ ಬಗ್ಗೆ ನಮಗಲ್ಲದೆ ಇನ್ನಾರಿಗೆ ಹೆಚ್ಚು ತಿಳಿದಿರಲು ಸಾಧ್ಯ?
* ಮನೆಯ ವಾತಾವರಣದ ಕುರಿತು ತುಸುವಾದರೂ ತಿಳಿದಿದ್ದರೆ ಮಗುವಿನೊಂದಿಗೆ ಅವರ ಸಂವಹನ ಅದಕ್ಕೆ ತಕ್ಕಂತೆ ಇರುತ್ತದೆ. ಅಂದರೆ ಮನೆಯಲ್ಲಿ ವಿಚ್ಛೇದನ, ಒಳಜಗಳ, ಮನೆಯಲ್ಲೊಂದು ಪುಟ್ಟ ಪಾಪು ಹೀಗೆ ವಾತಾವರಣದಲ್ಲಿನ ಬದಲಾವಣೆ ಮಕ್ಕಳ ಮೇಲೆ ಪರಿಣಾಮ ಬೀರಬಲ್ಲದು. ಅವರ ಕಲಿಕೆಯ ಮೇಲೂ, ಕಲಿಕೆಯ ಸಮಯದ ಗ್ರಹಿಕೆಯ ಮೇಲೂ.
* ಮುಖ್ಯವಾಗಿ ಇತರ ಮಕ್ಕಳೊಡನೆ ಮಗುವಿನ ಸಂಬಂಧ, ವರ್ತನೆಯ ಕುರಿತು ನಾವು ಕೇಳಿಕೊಳ್ಳಬೇಕು.
*ಭಾವನಾತ್ಮಕವಾಗಿ ಹೇಗೆ ಸ್ಪಂದಿಸುತ್ತದೆ ಮಗು ಎಂಬುದೂ ಮುಖ್ಯ. ಶಾಲೆಯಲ್ಲಿ ನಮ್ಮ ಮಗು ಖುಷಿಯಾಗಿದೆಯೆ ಎಂದು ಕೇಳಿ ತಿಳಿಯಬೇಕು.
*ನಮಗಿಂತ ಭಿನ್ನವಾಗಿ ಅವರ ಟೀಚರ್‌ ಅವರನ್ನು ನೋಡಿರುತ್ತಾರೆ. ಹಾಗಾಗಿ ಯಾವ ಯಾವ ವೈಯಕ್ತಿಕ ವಿಷಯಗಳತ್ತ ಅಥವಾ ದೌರ್ಬಲ್ಯಗಳತ್ತ ನಾವು ಹೆಚ್ಚಿನ ಗಮನಹರಿಸಬೇಕಾಗುತ್ತದೆ ಎಂಬುದನ್ನು ಅವರ ಮೂಲಕ ತಿಳಿದರೆ ಸರಿ. ಅದಕ್ಕೆ ಉತ್ತರವಾಗಿ ಅವರು ಏನು ಹೇಳಿದರೂ ಕೇಳಿಸಿಕೊಳ್ಳುವ ಮುಕ್ತ ಗುಣ ನಮ್ಮಲ್ಲಿರಬೇಕಾಗುತ್ತದೆ.
*ನಮ್ಮ ಅರಿವಿಗೇ ಬಾರದಂತೆ ಅವರ ವಿಶೇಷ ಆಸಕ್ತಿ ಯಾವುದಾದರೂ ಇದ್ದಿರಬಹುದು. ಉದಾಹರಣೆಗೆ ಆಟೋಟ, ಕಲೆ ಇತ್ಯಾದಿ. ಶಾಲೆಯ ಆಚೆಯೂ ಅವರಿಗೆ ಸ್ವಲ್ಪ ಬೆಂಬಲ, ಉತ್ತಮ ತರಬೇತಿ ದೊರೆಯುವಂತಾದರೆ ಅವರು ಅದ್ಭುತವಾಘಿ ಬೆಳೆಯುವಂತಾದರೆ? ಅದನ್ನೂ ತಿಳಿಯಬಹುದು ಟೀಚರ್‌ರಿಂದ.
* ಶಾಲೆಗೇ ಸೀಮಿತವಾಗಿ ಕೆಲವು ಪ್ರಶ್ನೆಗಳನ್ನು ಕೇಳಬಹುದು. ಇತರ ಮಕ್ಕಳೊಡನೆ ಹೋಲಿಸಿ ನೋಡದೆ, ನಮ್ಮ ಮಗುವೇ ಮೊದಲಿಗಿಂತ ಈಗ ಸುಧಾರಿಸಿದೆಯೆ? ಗ್ರೇಡ್‌ ಮಟ್ಟದಲ್ಲಿ ಬದಲಾಗಿದೆಯ ಎಂದು ತಿಳಿಯಬಹುದು. ಪ್ರತಿ ಮಗುವಿನ ಕಲಿಕೆಯ ವೇಗ ಮತ್ತು ವಿಧಾನ ಬೇರೆಯೇ.
*ಹಾಗಾಗಿ ನಮ್ಮ ಮಗು ತನ್ನ ಪೂರ್ತಿ ಸಾಮರ್ಥ್ಯ ಬಳಸಿ ಕಲಿಕೆಯಲ್ಲಿ ತೊಡಗುತ್ತಿದೆಯೆ ಎಂದು ಮಾತ್ರ ತಿಳಿದರೆ ಸಾಕು. ಮಗು ಹಿಂದೆ ಉಳಿಯುತ್ತಿದೆ, ಸಾಕಷ್ಟು ಗಮನ ಕೊಡುತ್ತಿಲ್ಲ ಎಂದು ಟೀಚರ್‌ಗೆ ಎನಿಸಿದ್ದರೆ ಅದನ್ನು ಅರಿಯಬಹುದು.
*ಸ್ಪೆಲ್ಲಿಂಗ್‌, ಕಾಗುಣಿತ, ಗಣಿತ, ವ್ಯಾಕರಣ, ಕೈಬರಹ ಹೀಗೆ ಯಾವುದಕ್ಕೆ ಹೆಚ್ಚು ಗಮನ ನೀಡಬೇಕು, ಮನೆಯಲ್ಲಿ ಹೆಚ್ಚಿನ ತಯಾರಿ ಯಾವ ವಿಷಯದಲ್ಲಿ ಇರಬೇಕು ಎಂದೂ ಕೇಳಬಹುದು. ಬಹಳ ತಡವಾದಮೇಲೆ ಸುಧಾರಿಸಲಾಗದೆ ಒದ್ದಾಡುವು ಬದಲು ಮೊದಮೊದಲಿನ ಮೀಟಿಂಗ್‌ಗಳಲ್ಲೇ ಇವನ್ನೆಲ್ಲ ಗಮನಿಸಿ ತಿದ್ದಿಕೊಳ್ಳುವುದು ಮೇಲು.
* ಕಲಿಕಾ ವಿಧಾನವಾಗಲೀ ಸಹಪಾಠಿಗಳ ವರ್ತನೆಯಾಗಲೀ ನಮ್ಮ ಮಕ್ಕಳು ಹೇಳಿದ ಒಂದು ಮುಖ ಮಾತ್ರ ನಮಗೆ ತಿಳಿಸಿರುತ್ತದೆ. ಟೀಚರ್‌ ಕಡೆಯಿಂದ ಖಚಿತಪಡಿಸಿಕೊಂಡೇ ಇದರ ಕುರಿತು ಅರಿಯಬೇಕು. ನಂತರ ನಿಜವಾದ ಪರಿಹಾರ ಹುಡುಕಲು ಸಾಧ್ಯ.
*ಟೀಚರ್‌ ಅನುಸರಿಸುತ್ತಿರುವ ಕಲಿಕಾ ವಿಧಾನದ ಬಗ್ಗೆ ತಿಳಿದುಕೊಳ್ಳುವುದು ಉತ್ತಮ. ಇದರಿಂದ ನಮ್ಮ ಮಗುವಿಗೆ ಈ ವಿಧಾನದಿಂದ ಸುಲಭವಾಗಿ ಅರ್ಥವಾಗುತ್ತಿದೆಯೆ ಎಂದು ತಕ್ಷಣ ತಿಳಿಯಬಹುದು. ಇಲ್ಲವಾದರೆ ನಮ್ರವಾಗಿ ನಮ್ಮ ಮಗು ಹೇಗೆ ಹೇಳಿದರೆ ಚೆನ್ನಾಗಿ ಅರ್ಥಮಾಡಿಕೊಳ್ಳುತ್ತದೆ ಎಂದು ಹೇಳಬಹುದು.
* ಬೆಂಗಳೂರಿನ ಕ್ವೀನ್ಸ್‌ ರಸ್ತೆಯ ಸೇಂಟ್‌ ಮೇರೀಸ್‌ ಶಾಲೆಯ ಶಿಕ್ಷಕಿ ರಾಜಮ್ಮಾ ಶಾಲೆಯಿಂದ ಯಾವುದಾದರೂ ಕೆಟ್ಟವರ್ತನೆಯನ್ನು ಅನುಕರಿಸಿ ಬರುತ್ತಿದ್ದರೆ ನಮಗೆ ತಿಳಿಸಿ. ನಾವು ಸರಿಪಡಿಸುತ್ತೇವೆ  ಎಂದವರು. ಶಾಲೆ ಇರಲಿ, ಮನೆ ಇರಲಿ, ನಮ್ಮ ಮಗುವಿನ ನಿರ್ದಿಷ್ಟ ವರ್ತನೆ ಬಗ್ಗೆ ಹೇಳಿ, ಅವರ ಸಹಾಯದಿಂದ ಅದನ್ನು ತಿದ್ದುವ ಯತ್ನವನ್ನೂ ಮಾಡಬಹುದು.
ಉದಾಹರಣೆಗೆ ತರಕಾರಿ ಇಷ್ಟಪಡದಿರುವ ವರ್ತನೆಯನ್ನು ನಾವು ಬದಲಿಸಲಾಗದೇ ಇದ್ದರೂ ಅವರಿಂದ ಅದು ಸಾಧ್ಯವಾಗಬಹುದು. ಅದೇ ಶಾಲೆಯ ಪುನೀತಾ ಮಿಸ್‌ ಕೂಡ ಊಟದ ಅಭ್ಯಾಸವನ್ನು ಆರೋಗ್ಯಕರವಾಗಿರಿಸಲು ಹೆಣಗುತ್ತಿದ್ದವರು. ಇದೂ ಕಲಿಕೆಗೆ ಬಹಳ ಅಗತ್ಯ. ಅವರು ಇಂಥ ಮತ್ತು ಇತರ ಇನ್ನೂ ಎಷ್ಟೋ ರೀತಿಯ ಮಕ್ಕಳನ್ನು ನಿಭಾಯಿಸಿರುವುದರಿಂದ ಅವರ ಸಲಹೆ ನಿಜಕ್ಕೂ ಅದ್ಭುತ ಪರಿಣಾಮ ಬೀರಬಹುದು.
*ಮಗು ಮನೆಯಲ್ಲಿ ಕಡಿಮೆ ನೀರು ಕುಡಿಯುವ ಅಭ್ಯಾಸ ಇರಿಸಿಕೊಂಡಿರಬಹುದು. ಆದರೆ ಶಾಲೆಯಲ್ಲಿ ಮಕ್ಕಳೊಡನೆ ಆಡುತ್ತಲೇ ಆಗಾಗ ನೀರು ಕುಡಿಯುವ ರೂಢಿ ಮಾಡಿಸಲು ಸಾಧ್ಯವಿದೆ. ಇಂತಹ ವಿಚಾರಗಳಲ್ಲಿ ಕೂಡ ಶಾಲೆಯವರ ನೆರವು ಪಡೆಯಬಹುದು.
*ಶಾಲೆಯ ಸಿಬ್ಬಂದಿಗೂ ನಮ್ಮ ನೆರವಿನಿಂದ ತರಗತಿಯಲ್ಲಿ ಸಹಾಯವಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ನಮ್ಮಿಂದ ಯಾವ ಸಹಾಯ ನೀಡಬಹುದು ಎಂದೂ ಕೇಳಿದರೆ ಉತ್ತಮ.  ಒಂದು ವೇಳೆ ಇಂತಹ ಮೀಟಿಂಗ್‌ಗಳಿಗೆ ಹೋಗಲಾಗದೆ ಇದ್ದಲ್ಲಿ ಅವರನ್ನು ಹೇಗೆ ಮತ್ತು ಯಾವಾಗ ಸಂಪರ್ಕಿಸಬಹುದು ಎಂದೂ ಕೇಳಿಕೊಂಡಿರುವುದು ಸೂಕ್ತ. ಡೈರಿಯಲ್ಲಿ ಬರೆದು ಕಳಿಸಬೇಕೆ, ಶಾಳೆಯ ನಂಬರಿಗೆ ಅಥವಾ ಟೀಚರ್‌ ವೈಯಕ್ತಿಕ ಫೋನ್‌ ನಂಬರ್‌ಗೆ ಕರೆ ಮಾಡಬಹುದೆ ಎಂದು ಕೇಳಿ.
*ಪ್ರಶ್ನೆಗಳ ಪಟ್ಟಿ ಸಿದ್ದಪಡಿಸಿಟ್ಟುಕೊಂಡು ಹೋದರೆ ನಮ್ಮ ಮತ್ತು ಟೀಚರ್‌ ಸಮಯ ಮಾತ್ರವಲ್ಲ, ಇತರ ಪಾಲಕರ ಸಮಯವನ್ನೂ ವ್ಯರ್ಥಗೊಳಿಸದಂತೆ ಮೀಟಿಂಗ್‌ ಮುಗಿಸಬಹುದು.

No comments:

Post a Comment