ತಂತ್ರೋಪನಿಷತ್ತು
‘ಡಿಸ್ಕ್ ಕ್ಲೀನ್ ಅಪ್’ ಎಂಬ ನಕಲಿ ತಂತ್ರಾಂಶಗಳು
ಮಾಲ್‌ವೇರ್ ಅಥವಾ ವೈರಸ್ ಸಮಸ್ಯೆ, ಹಾರ್ಡ್ ಡ್ರೈವ್‌ನಲ್ಲಿ ಸ್ಥಳ ಕಡಿಮೆ ಇರುವುದು, ಹಿನ್ನೆಲೆಯಲ್ಲಿ ಸಾಕಷ್ಟು ಪ್ರೋಗ್ರಾಂಗಳು ರನ್ ಆಗುತ್ತಿರುವುದು ರ‍್ಯಾಮ್ ಕಡಿಮೆ ಇರುವುದು ಮುಂತಾದ ಕಾರಣಗಳಿಗೆ ಒಮ್ಮೊಮ್ಮೆ ಕಂಪ್ಯೂಟರ್ ನಿಧಾನವಾಗುವುದುಂಟು. ಇಂಥ ಸಂದರ್ಭಗಳಲ್ಲಿ ಕಂಪ್ಯೂಟರ್‌ನ ವೇಗ ವರ್ಧಿಸಲು ಅಥವಾ ಅದರಲ್ಲಿನ ಜಂಕ್ ಫೈಲ್‌ಗಳನ್ನು ಡಿಲೀಟ್ ಮಾಡಲು ಅನೇಕರು ಕ್ಲೀನ್‌ಅಪ್ ಸಾಫ್ಟ್‌ವೇರ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳುತ್ತಾರೆ.
ಉಚಿತ ಎಂದ ಕೂಡಲೇ ಅಥವಾ ಇದನ್ನು ಪ್ರಯತ್ನಿಸ ಬಹುದು ಎಂದು ಯಾರಾದರೂ ಹೇಳಿದ ಕೂಡಲೇ ಹಿಂದೆ ಮುಂದೆ ಯೋಚಿಸದೆ ಸಿಕ್ಕ ಸಿಕ್ಕ ತಂತ್ರಾಂಶಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳುವವರ ಸಂಖ್ಯೆ ದೊಡ್ಡದಿದೆ. ಸುಮ್ಮನೆ ಗೂಗಲ್ ನಲ್ಲಿ ಡಿಸ್ಕ್ ಕ್ಲೀನ್ ಅಪ್ ಸಾಫ್ಟ್‌ವೇರ್ ಎಂದು ಸರ್ಚ್ ಮಾಡಿದರೆ ಸಾವಿರಾರು ತಂತ್ರಾಂಶಗಳ ಕೊಂಡಿಗಳು ತೆರೆದುಕೊಳ್ಳುತ್ತವೆ. ಆದರೆ, ಇದರಲ್ಲಿ ಶೇ 90ರಷ್ಟು ನಕಲಿ. ಅಡ್ವಾನ್ಸ್ಡ್ ಕ್ಲೀನರ್, ಆ್ಯಂಟಿ ಮಾಲ್‌ವೇರ್ ಡಾಕ್ಟರ್, ಆಲ್ಫಾ ಕ್ಲೀನರ್, ಆ್ಯಂಟಿ ಸ್ಪೈ ಸ್ಟಾರ್ಮ್, ಸೆಕ್ಯೂರ್ ಫೈಟರ್, ಸೆಕ್ಯುರಿಟಿ ಸೊಲ್ಯೂಷನ್ ಹೀಗೆ ಸಾವಿರಾರು ನಕಲಿ (http://goo.gl/lahYx) ಸೆಕ್ಯುರಿಟಿ ಸಾಫ್ಟ್‌ವೇರ್‌ಗಳಿವೆ.
ಇಂತಹ ನಕಲಿ ಸಾಫ್ಟ್‌ವೇರ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಂಡ ನಂತರ ಅದನ್ನು ರನ್ ಮಾಡಿದರೆ ಅದು ನಿಮ್ಮ ಕಂಪ್ಯೂಟರ್‌ನಲ್ಲಿ 26571 ಸಮಸ್ಯೆಗಳು ( issues) ಇವೆ ಎಂದೋ, 31765 ಸಮಸ್ಯೆಗಳನ್ನು ಪತ್ತೆ ಹಚ್ಚಲಾಗಿದೆ ಎಂದೋ ತೋರಿಸುತ್ತದೆ. ಅಸಲಿಗೆ ಪ್ರತಿಯೊಂದು ಬ್ರೌಸರ್ ಕುಕಿ ಮತ್ತು ಹಿಸ್ಟರಿ ಎಂಟ್ರಿಯು ಇಲ್ಲಿ ಒಂದು ಸಮಸ್ಯೆಯಾಗಿ ಲೆಕ್ಕ ಹಾಕಲಾಗು ತ್ತದೆ.
ಪ್ರತಿಯೊಂದು ಟೆಂಪರರಿ ಫೈಲ್‌ಗಳು, ಫ್ರ್ಯಾಗ್ಮೆಂಟೆಡ್ ಫೈಲ್, ಇನ್‌ವ್ಯಾಲಿಡ್ ರೆಜಿಸ್ಟ್ರಿಗಳನ್ನೂ ಸಿಂಗಲ್ ಇಶ್ಯೂ ಆಗಿ ಕೌಂಟ್ ಮಾಡಲಾಗುತ್ತದೆ. ಉದಾಹರಣೆಗೆ ವಿಂಡೋಸ್ ಡಿಸ್ಕ್ ಡಿಫ್ರ್ಯಾಗ್ಮೆಂಟ್‌ನಲ್ಲಿ ಶೇ 2ರಷ್ಟು ಫ್ರ್ಯಾಗ್ಮೆಂಟೇಷನ್ ಎಂದು ತೋರಿಸಿ ದರೆ ‘ಮೈ ಕ್ಲೀನ್ ಪಿಸಿ’ಯಂತಹ ನಕಲಿ ಸಾಫ್ಟ್‌ವೇರ್‌ನಲ್ಲಿ ಇದು ಶೇ 22ರಷ್ಟು ಎಂದು ತೋರಿಸುತ್ತದೆ. ಇದನ್ನು ನೋಡಿ ಹೆದರುವ ಗ್ರಾಹಕರು ಟ್ರಯಲ್ ವರ್ಷನ್ ಅವಧಿ ಮುಗಿಯುತ್ತಿದ್ದಂತೆ ನಕಲಿ ಸಾಫ್ಟ್‌ವೇರ್‌ಗಳನ್ನೇ ಹಣ ನೀಡಿ ಖರೀದಿಸುತ್ತಾರೆ.
ಯಾವುದೇ ಸಾಫ್ಟ್‌ವೇರ್ ಇನ್‌ಸ್ಟಾಲ್ ಮಾಡದೆಯೇ ಕಂಪ್ಯೂಟರ್ ವೇಗ ವರ್ಧನೆ ಮಾಡಬಹುದು. ವಿಂಡೋಸ್ ಆಪರೇಟಿಂಗ್ ಸಿಸ್ಟಂನಲ್ಲಿ ಬಿಲ್ಟ್ ಇನ್ ಪಿಸಿ ಕ್ಲೀನಿಂಗ್ ಟೂಲ್ಸ್ ಡಿಸ್ಕ್ ಕ್ಲೀನ್ ಅಪ್ ಇದೆ. ಕ್ಲೀನಿಂಗ್ ಸಾಫ್ಟ್‌ವೇರ್ ಮಾಡುವ ಕೆಲಸವನ್ನೇ ಈ ಟೂಲ್ ಬಳಸಿ ಮಾಡಬಹುದು. ಅಂದರೆ ಜಂಕ್ ಫೈಲ್, ಬ್ರೌಸಿಂಗ್ ಹಿಸ್ಟರಿಯನ್ನು ಕ್ಲಿಯರ್ ಮಾಡಬಹುದು. ಅಷ್ಟೇ ಯಾಕೆ ಯಾವುದೇ ಹೆಚ್ಚುವರಿ ಸಾಫ್ಟ್‌ವೇರ್ ಇನ್‌ಸ್ಟಾಲ್ ಮಾಡಿಕೊಳ್ಳದೆ ಡಿಫ್ರ್ಯಾಗ್ಮೆಂಟ್ ಕೂಡ ಮಾಡಬಹುದು. ಟೆಂಪ್ರವರಿ ಫೈಲ್‌ಗಳು ಅಥವಾ ಬ್ರೌಸಿಂಗ್ ಹಿಸ್ಟರಿಯಿಂದ ಕಂಪ್ಯೂಟರ್ ವೇಗ ಕಡಿಮೆ ಯಾಗುವುದಿಲ್ಲ. ಕಂಪ್ಯೂಟರ್‌ನ ಫೈಲ್ ಸಿಸ್ಟಂ ಫ್ರ್ಯಾಗ್ಮೆಂಟ್ ಆದರೆ ವೇಗ ಕಡಿಮೆಯಾಗುತ್ತದೆ. ಇದನ್ನು ಡಿಸ್ಕ್ ಡಿಫ್ರ್ಯಾಗ್ಮೆಂಟ್ ಟೂಲ್ ಬಳಸಿ ಸರಿ ಮಾಡಬಹುದು.
ಕಂಪ್ಯೂಟರ್‌ಗೆ ಹೊಸ ತಂತ್ರಾಂಶ ಇನ್‌ಸ್ಟಾಲ್ ಮಾಡಿಕೊಳ್ಳು ವಾಗ ಬೇರೆ ಬೇರೆ ಟೂಲ್‌ಬಾರ್‌ಗಳನ್ನು ಇನ್‌ಸ್ಟಾಲ್ ಮಾಡಿ ಕೊಳ್ಳುವಂತೆ ಪಾಪ್–ಅಪ್ ಸಂದೇಶಗಳು ಬರುತ್ತವೆ. ಏನೆಂದು ನೋಡದೆ ಎಲ್ಲದಕ್ಕೂ ಓಕೆ ಎಂದು ಕ್ಲಿಕ್ ಮಾಡುತ್ತಾ ಹೋದರೆ, ಬೇಕಿರುವ, ಬೇಡದಿರುವ ಎಲ್ಲ ಫೈಲ್‌ಗಳು ಸೇರಿಕೊಂಡುಬಿಡು ತ್ತವೆ. ಆನ್‌ಲೈನ್ ಮೂಲಕ ಸಾಫ್ಟ್‌ವೇರ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವಾಗ ಹೆಚ್ಚೇ ಎಚ್ಚರಿಕೆ ವಹಿಸಬೇಕು. ಇಲ್ಲದಿದ್ದರೆ ಅನಗತ್ಯ ಸಾಫ್ಟ್‌ವೇರ್‌ಗಳು ಇನ್‌ಸ್ಟಾಲ್ ಆಗಿ ಕಂಪ್ಯೂಟರ್ ಸ್ಲೋ ಆಗಬಹುದು. ಈ ರೀತಿಯ ಮೆಲಿಷಸ್ ಪಾಪ್ ಅಪ್‌ಗಳ ಇನ್ ಸ್ಟಾಲ್ ಆಗಿ ಕಂಪ್ಯೂಟರ್‌ನಲ್ಲಿ ಸಾಕಷ್ಟು ಬದಲಾವಣೆ ತರಬಹುದು ಅಥವಾ ನಕಲಿ ವೆಬ್‌ಸೈಟ್‌ಗಳು ಕಂಪ್ಯೂಟರನ್ನೇ ಹೈಜಾಕ್ ಮಾಡಬಹುದು.
ಅನಗತ್ಯ ಟೂಲ್‌ಬಾರ್‌ಗಳನ್ನು ತೆಗೆದುಹಾಕಲು ಹೊಸ ಸಾಫ್ಟ್‌ವೇರ್ ಖರೀದಿಸಬೇಕೆಂದೇನಿಲ್ಲ.ವಿಂಡೋಸ್ ನಲ್ಲಾದರೆ ಸೆಕ್ಯುರಿಟಿ ಸ್ಕ್ಯಾನರ್ ಎಂಬ ತಂತ್ರಾಂಶವಿದೆ.ನಮಗೆ ಗೊತ್ತಿಲ್ಲದೆಯೇ ಕಂಪ್ಯೂಟರ್‌ನಲ್ಲಿ ಇನ್‌ಸ್ಟಾಲ್ ಆಗಿರುವ ನಕಲಿ ಸಾಫ್ಟ್‌ವೇರ್‌ಗಳನ್ನು ತೆಗೆದುಹಾಕಲು ಉಚಿತ ರಿಮೂವಲ್(bit.ly/19RSCsO) ಟೂಲ್ ಕೂಡ ಇದೆ.
ವರ್ಲ್ಡ್ ವೈಡ್ ವೆಬ್ ಮತ್ತು ಡೊಮೈನ್ ನೇಮ್
ವರ್ಲ್ಡ್ ವೈಡ್ ವೆಬ್ (www) ಎನ್ನುವುದರ ಸಂಕ್ಷಿಪ್ತ ರೂಪ w3. ಇಂಗ್ಲೆಂಡ್‌ನ ಗಣಕ ವಿಜ್ಞಾನಿ ತಿಮೊಥಿ ಜಾನ್ ಬರ್ನರ್ಸ್ ಲೀ (ಟಿಮ್ ಬರ್ನರ್ಸ್ ಲೀ) ಅವರು 1989ರ ದಶಕದಲ್ಲಿ ಹೈಪರ್ ಟೆಕ್ಟ್ಸ್ ಟ್ರಾನ್ಸ್‌ಫರ್ ಪ್ರೋಟೊಕಾಲ್ (http) ಪರಿಕಲ್ಪನೆ ಬಳಸಿಕೊಂಡು ಜಾಗತಿಕ ಜಾಲ ವ್ಯವಸ್ಥೆಯೊಂದನ್ನು ಅಭಿವೃದ್ಧಿ ಪಡಿಸಿದರು.
ಮುಂದೆ ಇದೇ ವರ್ಲ್ಡ್ ವೈಡ್ ವೆಬ್ ಎಂದು ಜನಪ್ರಿಯವಾಯಿತು. ವರ್ಲ್ಡ್ ವೈಡ್ ವೆಬ್ ಅನ್ನು (w3) ಮಾನವ ಜ್ಞಾನದ ಭಂಡಾರ ಎಂದೇ ಬಣ್ಣಿಸಲಾಗುತ್ತದೆ. ಅನೇಕರು ಅಂತರ್ಜಾಲ ಮತ್ತು ವರ್ಲ್ಡ್ ವೈಡ್ ವೆಬ್ ಒಂದೇ ಎಂದು ಭಾವಿಸಿದ್ದಾರೆ. ಆದರೆ, ಇವೆರಡು ಪದಗಳನ್ನು ಕೆಲವೊಮ್ಮೆ ಸಮನ್ವಯಗೊಳಿಸಲಾಗುತ್ತದೆಯಾದರೂ, ಎರಡರ ಅರ್ಥ ಒಂದೇ ಅಲ್ಲ.
ಅಂತರ್ಜಾಲ ಎಂಬುದು ಅಂತರ್ ಸಂಪರ್ಕಿತ ಕಂಪ್ಯೂಟರ್ ಜಾಲಗಳ ಒಂದು ಜಾಗತಿಕ ವ್ಯವಸ್ಥೆಯಾದರೆ, ವೆಬ್ ಎಂಬುದು ಅಂತರ್ಜಾಲದ ಮೇಲೆ ನಡೆಯುವ ಒಂದು ಸೇವೆ. ಇದನ್ನು ಹೈಪರ್ ಲಿಂಕ್‌ಗಳು ಮತ್ತು ಯುಆರ್‌ಎಲ್‌ಗಳಿಂದ ಸಂಪರ್ಕಿಸ ಲಾಗಿರುತ್ತದೆ. ಬ್ರೌಸರ್ ತೆರೆದು ಅದರಲ್ಲಿ ವಿಳಾಸ ಟೈಪಿಸುವ ಮೂಲಕ ವರ್ಲ್ಡ್ ವೈಡ್ ವೆಬ್‌ನ ಮೇಲೆ ಒಂದು ವೆಬ್ ಪುಟ ವೀಕ್ಷಿಸುವ ಕಾರ್ಯ ಆರಂಭವಾಗುತ್ತದೆ.
ವಿಳಾಸ ಟೈಪಿಸಿ ಎಂಟರ್ ಬಟನ್ ಅದುಮುತ್ತಿದ್ದಂತೆ ಬ್ರೌಸರ್‌ನ ಹಿಂದೆ ತೆರೆಯ ಮರೆಯಲ್ಲಿ ಸಂವಹನಾ ಸಂದೇಶಗಳ ಒಂದು ಸರಣಿಯೇ ತೆರೆದುಕೊಳ್ಳುತ್ತದೆ. ಈ ಸಂದೇಶಗಳ ಪ್ರಕ್ರಿಯೆ ಪೂರ್ಣಗೊಂಡಾಗ ನಾವು ವೀಕ್ಷಿಸಲು ಬಯಸಿದ ವೆಬ್ ಪುಟ ತೆರೆಯ ಮೇಲೆ ಸಂಪೂರ್ಣವಾಗಿ ತೆರೆದುಕೊಳ್ಳುತ್ತದೆ.
ಡೊಮೈನ್ ನೇಮ್: ಈ ಪ್ರಕ್ರಿಯೆಯಲ್ಲಿ ಡೊಮೈನ್ ನೇಮ್ ಸಿಸ್ಟಂ (DNA) ಪಾತ್ರ ಪ್ರಮುಖವಾದದ್ದು. ಇಲ್ಲಿಯವರೆಗೆ ಅಂತರ್ಜಾಲ ವಿಳಾಸಗಳು ಡಾಟ್ ಕಾಂ (.com) ಅಥವಾ ಡಾಟ್ ನೆಟ್ (.net)net ಡಾಟ್ ಇನ್ (.in)ವಿಳಾಸದೊಂದಿಗೆ ಅಂತ್ಯಗೊಳ್ಳುತ್ತಿದ್ದವು. ಆದರೆ, ಈಗ ಪ್ರಪಂಚ ಯಾವುದೇ ಭಾಷೆಯಲ್ಲಿ, ಯಾವುದೇ ಹೆಸರಿನಲ್ಲಿ ವೆಬ್ ವಿಳಾಸಗಳನ್ನು (ಟಿಎಲ್‌ಡಿ) ಅಂತ್ಯಗೊಳಿಸಲು ಜಾಗತಿಕ ಇಂಟರ್‌ನೆಟ್ ಸಲಹಾ ಸಂಸ್ಥೆ ‘ದ ಇಂಟರ್‌ನೆಟ್ ಕಾರ್ಪೊರೇಷನ್ ಫಾರ್ ಅಸೈನ್ಡ್ ನೇಮ್ಸ್ ಆ್ಯಂಡ್ ನಂಬರ್ಸ್ (ICANN) ಒಪ್ಪಿಗೆ ನೀಡಿದೆ.
ವರ್ಲ್ಡ್ ವೈಡ್ ವೆಬ್ ಪರಿಕಲ್ಪನೆ ರೂಪುಗೊಂಡ ಎರಡು ದಶಕಗಳ ನಂತರ ಆಗಿರುವ ಮಹತ್ವದ ಬದಲಾವಣೆ ಇದು. ಅಂದರೆ, ಇನ್ನು ಮುಂದೆ ಕಂಪೆನಿಗಳು ತಮಿಗಿಷ್ಟ ಬಂದ ಹೆಸರಿನೊಂದಿಗೆ ಡೊಮೈನ್ ವಿಳಾಸ ಅಂತ್ಯಗೊಳಿಸಬಹುದು.
ಸದ್ಯ 22 ಮುಂಚೂಣಿ ಡೊಮೈನ್ ನೇಮ್‌ಗಳನ್ನು 250ಕ್ಕೂ ಹೆಚ್ಚು ದೇಶಗಳಲ್ಲಿ ಬಳಸಲಾಗುತ್ತದೆ. ಆಯಾ ರಾಷ್ಟ್ರಗಳಿಗೆ ಸಂಬಂಧಿಸಿದ ಡಾಟ್ ಯುಕೆ, ಡಾಟ್ ಇನ್, ಡಾಟ್ ಡೆ, ಡಾಟ್ ಜಿಒವಿ ಎನ್ನುವ ಹೆಸರುಗಳೂ ಅಸ್ತಿತ್ವದಲ್ಲಿದೆ.
ಮೈಕ್ರೊಸಾಫ್ಟ್‌ನ ಹೊಸ ಬ್ರೌಸರ್ ‘ಎಡ್ಜ್’
ಕ್ಲೌಡ್ ಕಂಪ್ಯೂಟಿಂಗ್ ಅಥವಾ ಸಾಮಾನ್ಯ ಗಣಕಯಂತ್ರದಲ್ಲಿ ಪಡೆಯಬಹುದಾದ ಎಲ್ಲ ಸೌಲಭ್ಯಗಳನ್ನು ಆನ್‌ಲೈನ್ ಮೂಲಕ ಪಡೆಯುವ ತಂತ್ರಜ್ಞಾನ ಅಭಿವೃದ್ಧಿಗೊಂಡ ನಂತರ ವೆಬ್ ಬ್ರೌಸರ್‌ನ ವೀಕ್ಷಕ ಸೌಲಭ್ಯಗಳಲ್ಲೂ ಸಾಕಷ್ಟು ಸುಧಾರಣೆಗಳಾಗಿವೆ. ಕ್ಲೌಡ್ ಸೇವೆಯಡಿ ಸಾವಿರಾರು ಅಪ್ಲಿಕೇಷನ್‌ಗಳನ್ನು ಬ್ರೌಸರ್ ಮೂಲಕ ಪಡೆದುಕೊಳ್ಳಬಹುದು. ಹೀಗಾಗಿ ಹೊಸ ಬ್ರೌಸರ್‌ಗಳು ಈ ಸಾಧ್ಯತೆಗಳನ್ನು ಗಮನದಲ್ಲಿಟ್ಟುಕೊಂಡೇ ಅಭಿವೃದ್ಧಿಯಾಗುತ್ತಿವೆ.
ಆನ್‌ಲೈನ್ ಜಗತ್ತು ಪ್ರವೇಶಿಸಲು ಹೆದ್ದಾರಿಯಂತಿದ್ದ ಈ ಜಾಲದರ್ಶಕಗಳು ಇದೀಗ ಕ್ಲೌಡ್ ಸೇವೆಗಳ ಪ್ರಮುಖ ವೇದಿಕೆಯಾಗಿಯೂ ಪ್ರವರ್ಧಮಾನಕ್ಕೆ ಬರುತ್ತಿವೆ. ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಮೊಝಿಲ್ಲಾ ಫೈರ್ ಫಾಕ್ಸ್ ಎರಡು ವರ್ಷಗಳ ಹಿಂದೆಯೇ ಮೊಬೈಲ್ ಬ್ರೌಸರ್ ಬಿಡುಗಡೆ ಮಾಡಿತ್ತು. ಇದನ್ನು ಕ್ಲೌಡ್ ಬ್ರೌಸರ್ ಅಂತಲೇ ಕರೆಯಲಾಗುತ್ತದೆ. ಅಡೋಬ್ ಫ್ಲಾಶ್ ಪ್ಲೇಯರ್ ತೆರೆದುಕೊಂಡಂತೆ ಇದು ಕೂಡ ಯಾವುದೇ ಕಾರ್ಯನಿರ್ವಹಣಾ ತಂತ್ರಾಂಶದಲ್ಲೂ ತೆರೆದುಕೊಳ್ಳುತ್ತದೆ.
ಇದೀಗ ಮೈಕ್ರೊಸಾಫ್ಟ್‌ನ ಸರದಿ. ಎರಡು ದಶಕಗಳಿಂದ ಮಾರುಕಟ್ಟೆ ಆಳಿದ್ದ ಇಂಟರ್‌ನೆಟ್ ಎಕ್ಸ್‌ಪ್ಲೋರರ್ (ಐಇ) ಬದಲಿಗೆ ಮೈಕ್ರೊಸಾಫ್ಟ್ ‘ಎಡ್ಜ್’ ಎಂಬ ಹೊಸ ಬ್ರೌಸರ್ ಪರಿಚಯಿಸಿದೆ. ಎಡ್ಜ್ ಬಿಡುಗಡೆಯಾಗುತ್ತಿದ್ದಂತೆ ಎರಡು ದಶಕಗಳಿಂದ ಮಾರುಕಟ್ಟೆ ಆಳಿದ್ದ ಇಂಟರ್‌ನೆಟ್ ಎಕ್ಸ್‌ಪ್ಲೋರರ್‌ನ ಯುಗ ಅಂತ್ಯವಾಗಿದೆ. ‘ಪ್ರಾಜೆಕ್ಟ್ ಸ್ಫಾರ್ಟನ್’ ಎಂಬ ಹೆಸರಿನಲ್ಲಿ ಮೈಕ್ರೊಸಾಫ್ಟ್ ಈ ಹೊಸ ತಲೆಮಾರಿನ ಬ್ರೌಸರ್ ಅಭಿವೃದ್ಧಿಪಡಿಸಿದೆ. ವಿಂಡೋಸ್ 10 ರಲ್ಲಿ ಎಡ್ಜ್ ಡಿಫಾಲ್ಟ್ ಬ್ರೌಸರ್ ಆಗಿರಲಿದೆ. ಗೂಗಲ್ ಕ್ರೋಮ್ ಮತ್ತು ಮೊಝಿಲ್ಲಾ ಫೈರ್‌ಫಾಕ್ಸ್‌ಗಳತ್ತ ಗ್ರಾಹಕರ ವಲಸೆ ತಡೆಯುವುದು ಎಡ್ಜ್‌ನ ಪ್ರಮುಖ ಉದ್ದೇಶ. ಇವೆರಡು ಬ್ರೌಸರ್‌ಗಳ ಸಾಮರ್ಥ್ಯವಿರುವುದು ಅದರ ಅನ್ವಯಿಸುವಿಕೆ ಕಾರ್ಯಕ್ಷಮತೆಯಲ್ಲಿ ಹಾಗೂ ಜಾವಾಸ್ಕ್ರಿಪ್ಟ್‌ನ ಪ್ರಕ್ರಿಯೆ ವೇಗದಲ್ಲಿ. ಈ ತಾಂತ್ರಿಕ ಅಂಶಗಳಿಂದಲೇ ಕ್ರೋಮ್ ಈ ಕಾಲದ ಕ್ಷಿಪ್ರಗತಿಯ ಬ್ರೌಸರ್ ಎಂದೆನಿಕೊಂಡಿದೆ. ಎಡ್ಜ್‌ನಲ್ಲಿರುವ ಹಲವು ತಾಂತ್ರಿಕ ಸೌಲಭ್ಯಗಳು ಹೆಚ್ಚೂ ಕಡಿಮೆ ಕ್ರೋಮ್ ಅನ್ನೇ ಹೋಲುತ್ತವೆ.
ಕೋರ್ಟನಾ: ಎಡ್ಜ್‌ನಲ್ಲಿರುವ ಹೊಸತೊಂದು ಅಂಶವೆಂದರೆ ಕೋರ್ಟನಾ ಎಂಬ ಸೌಲಭ್ಯ. ಇದು ಬಳಕೆದಾರ ಹೇಳಿದ್ದನ್ನು ಟೈಪ್ ಮಾಡುವ, ಸರ್ಚ್ ಮಾಡಿ ಫಲಿತಾಂಶಗಳನ್ನು ಮುಂದಿಡುವ, ಪೂರಕ ಫಲಿತಾಂಶಗಳನ್ನು ಒದಗಿಸುವ ಡಿಜಿಟಲ್ ಮಾರ್ಗದರ್ಶಕ ನಂತೆ ಕೆಲಸ ಮಾಡುತ್ತದೆ. ಬ್ರೌಸರ್‌ನ ಬಲ ತುದಿ ಮೇಲ್ಭಾಗದಲ್ಲಿ ಕೋರ್ಟನಾ ಸೌಲಭ್ಯದ ನೀಲಿ ವೃತ್ತವನ್ನು ಕಾಣಬಹುದು.
ಎಡ್ಜ್ ಎಚ್‌ಟಿಎಂಎಲ್: ಈ ಬ್ರೌಸರ್, ಕೀಬೋರ್ಡ್, ಮೌಸ್, ಟಚ್, ಸಂಜ್ಞೆ, ಧ್ವನಿ, ಸೆನ್ಸರ್ ಹೀಗೆ ಎಲ್ಲದಕ್ಕೂ ಬೆಂಬಲ ನೀಡುತ್ತದೆ. ವೇಗವಾಗಿ ಪುಟಗಳು ತೆರೆದುಕೊಳ್ಳಲು ಎಡ್ಜ್ ಎಚ್‌ಟಿಎಂಎಲ್ ರೆಂಡರಿಂಗ್ ತಂತ್ರಜ್ಞಾನ ಪರಿಚಯಿಸಲಾಗಿದೆ. ಇದರಿಂದ ಜಾವಾ ಸ್ಕ್ರಿಪ್ಟ್‌ನ ಪ್ರಕ್ರಿಯೆ ವೇಗದಲ್ಲಿ ಸಾಕಷ್ಟು ಸುಧಾರಣೆ ಆಗಿದೆ. ಎಕ್ಸ್‌ಪ್ಲೋರರ್ 11ರಲ್ಲಿದ್ದ ಟ್ರೈಡೆಂಟ್ 7 ಅಥವಾ ಎಂಎಸ್ ಎಚ್‌ಟಿಎಂಎಲ್ ಎಂಜಿನ್‌ಗೆ ಹೋಲಿಸಿದರೆ ಇದು ಹೆಚ್ಚು ಪರಿಣಾಮಕಾರಿ. ಜತೆಗೆ ವೆಬ್ ಗ್ರಾಫಿಕ್ ಲೈಬ್ರರಿ (WebGL API) ವಿಚಾರದಲ್ಲಿ ಎಡ್ಜ್, ಮೊಝಿಲ್ಲಾ ಮತ್ತು ಕ್ರೋಮ್‌ಗಿಂತಲೂ ಒಂದು ಹೆಜ್ಜೆ ಮುಂದಿದೆ.
ನ್ಯೂ ಟ್ಯಾಬ್ ಪೇಜ್: ಎಕ್ಸ್‌ಪ್ಲೋರರ್‌ನಲ್ಲಿ ಜನಪ್ರಿಯವಾಗಿದ್ದ ನ್ಯೂ ಟ್ಯಾಬ್ ಸೌಲಭ್ಯವನ್ನು ಎಡ್ಜ್‌ನಲ್ಲಿ ಇನ್ನಷ್ಟು ಸುಧಾರಿಸಲಾಗಿದೆ. ಅಂದರೆ ಹೊಸ ಟ್ಯಾಬ್ ತೆರೆದು ಸ್ವಲ್ಪ ಸಮಯದ ನಂತರ ಮುಚ್ಚಿದ್ದೀರಿ ಎಂದಿಟ್ಟುಕೊಳ್ಳಿ. ಸ್ವಲ್ಪ ಸಮಯದ ನಂತರ ಅದೇ ಪುಟ ಬೇಕಾದರೆ ಅಡ್ರೆಸ್‌ಬಾರ್‌ನ ಸಮೀಪಕ್ಕೆ ಕರ್ಸರ್ ಕೊಂಡೊಯ್ದರೆ ಸಾಕು, ಹಿಂದೆ ತೆರೆದಂತಹ ಪ್ರಮುಖ ಪುಟಗಳ ಥಂಬ್‌ನಿಲ್ ಇಮೇಜ್‌ಗಳು ಕಾಣಿಸುತ್ತವೆ.
ರೀಡಿಂಗ್ ಮೋಡ್: ಆ್ಯಪಲ್ ಸಫಾರಿಯಲ್ಲಿ ಜನಪ್ರಿಯವಾಗಿರುವ ರೀಡಿಂಗ್ ವ್ಯೂ ಎಂಬ ಸೌಲಭ್ಯವನ್ನು ಎಡ್ಜ್‌ನಲ್ಲೂ ಅಳವಡಿಸ ಲಾಗಿದೆ. ಇ -ಪತ್ರಿಕೆ, ಪಾಕ್ಷಿಕಗಳನ್ನು ಓದುವವರಿಗೆ ಈ ಸೌಲಭ್ಯ ಹೇಳಿ ಮಾಡಿಸಿದಂತಿದೆ.
ಆನಟೇಷನ್ (ಟಿಪ್ಪಣಿ): ಮೊಝಿಲ್ಲಾ, ಕ್ರೋಮ್, ಸಫಾರಿಯಲ್ಲಿ ಕಾಣದ ಪೇಜ್ ಆನಟೇಷನ್ (Page Annotations) ಸೌಲಭ್ಯವನ್ನು ಎಡ್ಜ್‌ನಲ್ಲಿ ನೀಡಲಾಗಿದೆ.
ಇದನ್ನು ಬಳಸಿಕೊಂಡು ಬಳಕೆದಾರ ವೆಬ್‌ಪುಟದಲ್ಲಿರುವ ನಿರ್ದಿಷ್ಟ ಚಿತ್ರ, ಪ್ಯಾರಾಗಳನ್ನು ಡ್ರಾಯಿಂಗ್ ಟೂಲ್ ಬಳಸಿ ಗುರುತು ಹಾಕಿಕೊಳ್ಳಬಹುದು, ಇದನ್ನು ಇಮೇಲ್ ಮಾಡಬಹುದು ಅಥವಾ ವಾಟ್ಸ್ ಆ್ಯಪ್ ಮತ್ತಿತರ ಸಾಮಾಜಿಕ ಆ್ಯಪ್‌ಗಳ ಮೂಲಕ ಶೇರ್ ಕೂಡ ಮಾಡಬಹುದು.
ಬ್ರೌಸರ್ ಎಕ್ಸ್‌ಟೆನ್ಷನ್ : ಎಡ್ಜ್‌ನಲ್ಲಿ ಫೈರ್‌ಫಾಕ್ಸ್ ಮತ್ತು ಕ್ರೋಮ್ ಮಾದರಿ ಹೋಲುವಂತಹ ಸಂಪೂರ್ಣ ಬ್ರೌಸರ್ ಎಕ್ಸ್‌ಟೆನ್ಷನ್ ಸೌಲಭ್ಯ ಅಳವಡಿಸಲಾಗಿದೆ.
ಇಂಟರ್‌ನೆಟ್ ಎಕ್ಸ್‌ಪ್ಲೋರರ್‌ನಲ್ಲಿ ಟೂಲ್‌ಬಾರ್, ವೆಬ್‌ಸ್ಲೈಸ್ ಮತ್ತು ಅಕ್ಸೆಲೇಟರ್ಸ್‌ಗಳಿಗೆ ಮಾತ್ರ ಇದು ಸೀಮಿತವಾಗಿತ್ತು. ಆದರೆ ಈಗ ಎಡ್ಜ್ ಎಕ್ಸ್‌ಟೆನ್ಷನ್ ಅಭಿವೃದ್ಧಿದಾರರು ಕ್ರೋಮ್ ಮತ್ತು ಫೈರ್‌ಫಾಕ್ಸ್‌ನಲ್ಲಿ ಬಳಸಿರುವ ಜಾವಾಸ್ಕ್ರಿಪ್ಟ್ ಮತ್ತು ಎಚ್‌ಟಿಎಂಎಲ್ ಮಾನದಂಡಗಳನ್ನು ಬಳಸಿಕೊಂಡು ಕೆಲಸ ಮಾಡಬಹುದು.
No comments:
Post a Comment