Saturday, 28 February 2015

Interesting topics and success tips


 


‘ಇಯರ್ ಬುಕ್’ ಆಯ್ಕೆ ದ್ವಂದ್ವ : 

ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಹೊಂದುತ್ತಿರುವ ವಿದ್ಯಾರ್ಥಿಗಳಲ್ಲಿ ಹೊಸ ವರ್ಷದ ಆಗಮನವೆಂದರೆ ಏನೋ ಉತ್ಸಾಹ. ಏಕೆಂದರೆ ಹೊಸ ವರ್ಷದ ಆಗಮನ ಹೊಸ ಆಸೆಗಳ ಚಿಗುರುವಿಕೆ ಒಂದಡೆಯಾದರೆ ಮಾರುಕಟ್ಟೆಗೆ ಆಗಮಿಸುವ ‘ವರ್ಷದ ಪ್ರಚಲಿತ ಘಟನೆಗಳ’ ಪುಸ್ತಕಗಳ ಮಹಾಪುರ ಇನ್ನೊಂದೆಡೆ.
ಪ್ರತಿವರ್ಷ ಜನವರಿ ಅಥವಾ ಡಿಸೆಂಬರ್ ತಿಂಗಳುಗಳಲ್ಲೇ ಹಿಂದಿನ ವರ್ಷ ಜರುಗಿದ ಎಲ್ಲಾ ಘಟನೆಗಳನ್ನು ಕ್ರೋಢೀಕರಿಸಿ ದೊಡ್ಡ-ದೊಡ್ಡ ಹೊತ್ತಿಗೆಯ ರೂಪದಲ್ಲಿ ಮಾರುಕಟ್ಟೆಗೆ ಬಿಡುಗಡೆಮಾಡುವ ಪ್ರಕಾಶಕರ ದೊಡ್ಡ ದಂಡು ಇದೆ. ಈ ರೀತಿ ಮಾರುಕಟ್ಟೆಯಲ್ಲಿ ದೊರಕುವ ನೂರಾರು ‘ಇಯರ್ ಬುಕ್’ಗಳಲ್ಲಿ ಯಾವುದು ಒಳ್ಳೆಯದು, ಯಾವುದನ್ನು ಓದಬೇಕು ಎಂಬ ದ್ವಂದ್ವ ಕಾಡುವುದು ಸಹಜ. ಈ ರೀತಿಯ ದ್ವಂದ್ವಗಳನ್ನು ಹೋಗಲಾಡಿಸಲು ಒಂದು ಕಿರು ಪ್ರಯತ್ನವನ್ನು ಈ ಮೂಲಕ ಮಾಡೋಣ.
ಸಾಮಾನ್ಯವಾಗಿ ಯಾವುದೇ ಪ್ರಕಾಶಕರ ಪ್ರಚಲಿತ ಘಟನೆಗಳ ‘ಇಯರ್ ಬುಕ್’ ಅನ್ನು ತೆಗೆದುಕೊಂಡರೂ ಸಾವಿರ ಪುಟಗಳಿಗಿಂತ ಕಡಿಮೆ ಇರುವದಿಲ್ಲ. ಹಾಗಾದರೆ ಈ ರೀತಿಯ ಮಾಹಿತಿಯ ಮಹಾಪೂರದಲ್ಲಿ ನಾವು ಮೀನನ್ನು ಹಿಡಿಯುವದು ಹೇಗೆ ಎಂಬ ಕಲೆಯನ್ನು ಅರಿತುಕೊಳ್ಳಬೇಕು. ಯಾವುದನ್ನು ಓದಬೇಕು ಅನ್ನುವದಕ್ಕಿಂತ ಯಾವುದನ್ನು ಓದಬಾರದು ಎಂಬುದನ್ನು ತಿಳಿದುಕೊಳ್ಳುವುದೇ ಯಶಸ್ವಿ ಅಭ್ಯರ್ಥಿಯ ಗುಟ್ಟು ಎಂದು ಹೇಳಬಹುದು.
ಈ ಲೇಖನದಲ್ಲಿ ಜನವರಿ 2015ರಲ್ಲಿ ಘಟಿಸಿದ ಕೆಲವು ಘಟನೆಗಳನ್ನು ಉದಾಹರಣೆಯಾಗಿ ತೆಗೆದುಕೊಂಡು ಯಾವರೀತಿ ಓದಬೇಕು ಹಾಗೂ ನೋಟ್ಸ್‌ ಬರೆಯಬೇಕು ಎಂಬುದನ್ನು ವಿಶ್ಲೇಷಿಸಲಾಗಿದೆ. ನೇರವಾಗಿ ಮೀನನ್ನು ಹಿಡಿದು ತಿನ್ನಲು ಕೊಡುವ ಬದಲಿಗೆ ಮಹಾಪುರದಲ್ಲಿ ಮೀನು ಹಿಡಿಯುವ ಕಲೆಯನ್ನು ಹೇಗೆ ಬೆಳೆಸಿಕೊಳ್ಳಬೇಕೆಂಬುದನ್ನು ವಿಶ್ಲೇಷಿಸಲಾಗಿದೆ. ಈ ಮುಂದಿನ ಕೆಲವು ಪ್ರಚಲಿತ ಘಟನೆಗಳು ದಿನಪತ್ರಿಕೆಗಳಿಂದ ಆಯ್ದ ಕೆಲವು ಪ್ರಚಲಿತ ಸುದ್ದಿಗಳಾಗಿವೆ.

ಇಸ್ರೊ ಅಧ್ಯಕ್ಷ ರಾಧಾಕೃಷ್ಣನ್ ನಿವೃತ್ತಿ: 2009 ರಂದು ಇಸ್ರೊ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದರು. ಮಂಗಳಯಾನ ಮತ್ತು ಮಾನವ ಸಹಿತ ಗಗನ ನೌಕೆಯ ಜಿ.ಎಸ್‌ಎಲ್.ವಿ ಮಾರ್ಕ್‌ 3ಯಶಸ್ಸಿಗೆ ಪಾತ್ರರು. ಕೆ.ರಾಧಾಕೃಷ್ಣನ್ ಅವರು ಕೇರಳದ ತ್ರಿಶ್ಶೂರು ಜಿಲ್ಲೆಯ ಇರಿಂಜಲಕುಡ ಗ್ರಾಮದವರು. ಇವರು 1971ರಲ್ಲಿ ವಿಕ್ರಮ್ ಸಾರಾಭಾಯಿ ಬಾಹ್ಯಾಕಾಶ ಕೇಂದ್ರದಿಂದ ತಮ್ಮ ಸೇವೆಯನ್ನು ಪ್ರಾರಂಭಿಸಿದರು. ಇವರಿಗೆ 2014ರಲ್ಲಿ ಪದ್ಮ ಭೂಷಣ ಪ್ರಶಸ್ತಿ ದೊರಕಿದೆ.
ನ್ಯಾಯಾಂಗ ನೇಮಕ ಆಯೋಗಕ್ಕೆ ಅಂಕಿತ: ಸುಪ್ರೀಂಕೋರ್ಟ್‌ ಹಾಗೂ ಹೈಕೋರ್ಟ್‌ ನ್ಯಾಯಮೂರ್ತಿಗಳ ನೇಮಕಕ್ಕೆ ಈಗಿರುವ ಕೊಲೆಜಿಯಂ ಬದಲಾಗಿ ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ (NATIONAL JUDICIAL  APPOINTMENTS COMMISSION ) ಜಾರಿಗೆ ತರುವ ಮಸೂದೆಗೆ ರಾಷ್ಟ್ರಪತಿ ಅಂಕಿತ ಹಾಕಿದ್ದಾರೆ. 99ನೇ ಸಂವಿಧಾನದ ತಿದ್ದುಪಡಿ ಮೂಲಕ  (121 ನೇ ಸಂವಿಧಾನ ತಿದ್ದುಪಡಿ ಕರಡು ವಿಧೇಯಕ) ಈ ಮಸೂದೆಯನ್ನು ಜಾರಿಗೆ ತರಲು ಈ ವರೆಗೆ 16ರಾಜ್ಯಗಳು ಸಮ್ಮತಿ ಸೂಚಿಸಿವೆ.
ಈ ಆಯೋಗವು ಭಾರತದ ಮುಖ್ಯ ನ್ಯಾಯಮೂರ್ತಿಗಳನ್ನೂಳಗೊಂಡಿದೆ, ಇಬ್ಬರು  ಸುಪ್ರೀಂಕೋರ್ಟ್ ಹಿರಿಯ ನ್ಯಾಯಮೂರ್ತಿಗಳು ಹಾಗೂ ಇಬ್ಬರು ಪರಿಣತರನ್ನೂಳಗೊಂಡಿರುತ್ತದೆ. ಈ ಆಯೋಗವು ಸುಂಪ್ರೀಕೋರ್ಟ್‌ ಹಾಗೂ 24 ಹೈಕೋರ್ಟ್‌ಗಳ ನ್ಯಾಯಮೂರ್ತಿಗಳ ನೇಮಕ ಹಾಗೂ ವರ್ಗಾವಣೆಯನ್ನು ಮಾಡುತ್ತದೆ. ಈ ಘಟನೆಗೆ ಪೊರಕವಾಗಿ ಸಂವಿಧಾನದ ತಿದ್ದುಪಡಿ ಹಾಗೂ ಈ ವರೆಗೂ ಜಾರಿಗೆ ತಂದಿರುವ ಪ್ರಮುಖ ಸಂವಿಧಾನದ ತಿದ್ದುಪಡಿ ಕುರಿತು ಆಳವಾದ ಅಧ್ಯಯನ ಅವಶ್ಯಕ.
*22ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶ ಬೆಂಗಳೂರಿನಲ್ಲಿ ನಡೆಯಿತು.
*ಪ್ಯಾಲೆಸ್ಟೀನ್ ಸ್ವತಂತ್ರ ರಾಷ್ಟ್ರವಾಗಬೇಕೆಂಬ ಬೇಡಿಕೆಯನ್ನು ವಿಶ್ವಸಂಸ್ಥೆಯ ಭದ್ರತಾ ಸಭೆಯಲ್ಲಿ ತಳ್ಳಿಹಾಕಲಾಯಿತು.
ಇದರಿಂದ ಅತೃಪ್ತರಾದ ಪ್ಯಾಲೆಸ್ಟೀನ್ ಅಂತರರಾಷ್ಟ್ರೀಯ ಅಪರಾಧ ನ್ಯಾಯಾಲಯದ ಮೊರೆ ಹೋಗಿದೆ. ಅಂತರರಾಷ್ಟ್ರೀಯ ಅಪರಾಧ ನ್ಯಾಯಾಲವು (international criminal court) ನೆದರ್‌ಲೆಂಡ್‌ನ ಹೇಗ್‌ ನಗರದಲ್ಲಿದ್ದು 121 ಸದಸ್ಯ ರಾಷ್ಟ್ರಗಳನ್ನೊಳಗೊಂಡದೆ.
ಈ ಘಟನೆಗೆ ಪೊರಕವಾಗಿ ಇಸ್ರೇಲ್, ಪ್ಯಾಲೆಸ್ಟೇನ್ ರಾಷ್ಟ್ರಗಳ ನಡುವೆ ತಲೆದೂರಿರುವ ಬಿಕ್ಕಟ್ಟು ವೆಸ್ಟ್ ಬ್ಯಾಂಕ್‌, ಗಾಜಾ ಸ್ಟ್ರಿಪ್ ಮುಂತಾದ ವಿವಾದಾತ್ಮಕ ಸ್ಥಳಗಳ ಮಾಹಿತಿ ಹಾಗೂ ಓಸ್ಲೊ ಒಪ್ಪಂದ, ‘ಇಂಟಿಫಿದ’ ಪದಗಳ ಬಗ್ಗೆ ವಿಶೇಷವಾಗಿ ಅಧ್ಯಯನ ಮಾಡುವುದು ಒಳಿತು.
ಯೋಜನೆ ಆಯೋಗ ರದ್ದು – ನೀತಿ ಆಯೋಗ ರಚನೆ: ಆರೂವರೆ ದಶಕಗಳ ಹಿಂದೆ ಅಂದರೆ 15 ಮಾರ್ಚ್ 1950ರಂದು ದೇಶದ ಪ್ರಥಮ ಪ್ರಾಧಾನಿ ಜವಾಹರ್‌ಲಾಲ್ ನೆಹರು ಅವರ ಕಾಲದಲ್ಲಿ ರಚಿಸಲಾಗಿದ್ದ ಯೋಜನಾ ಆಯೋಗ (planning commission) ವನ್ನು ರದ್ದು ಪಡಿಸಿ ಅದರ ಬದಲಾಗಿ ನೀತಿ ಆಯೋಗವನ್ನು ಆಸ್ತಿತ್ವಕ್ಕೆ ತಂದಿದೆ. 11.2.2015 ರಂದು  ಭಾರತ ಪರಿವರ್ತನಾ ರಾಷ್ಟ್ರೀಯ ಸಂಸ್ಥೆ ( ನ್ಯಾಷನಲ್ ಇನ್‌ಸ್ಟಿಟ್ಯೂಷನ್‌ ಫಾರ್‌ ಟ್ರಾನ್ಸ್‌ರ್ಫಾರ್ಮಿಂಗ್ ಇಂಡಿಯಾ– NITI (Aayog) ಕೇಂದ್ರ ಹಾಗೂ ರಾಜ್ಯ ಸರಕಾರಗಳ ಪ್ರಾತಿನಿಧಿಕ ನೀತಿ ನಿರೂಪಣಾ ಸಂಸ್ಥೆಯನ್ನು ಹುಟ್ಟು ಹಾಕಲಾಯಿತು.
ಮೋದಿ ಅವರು ಆಡಳಿತದ ಚುಕ್ಕಾಣಿ ಹಿಡಿದ ಮೂರೇ ದಿನದಲ್ಲಿ ಅಜಯ್‌ ಚಿಬ್ಬರ್ ಎಂಬ ತಜ್ಞ  ಸಲ್ಲಿಸಿದ ವರದಿ ಆಧಾರದ ಮೇಲೆ ಯೋಜನಾ ಆಯೋಗವನ್ನು ರದ್ದುಗೊಳಿಸಿತು. ನೀತಿ ಆಯೋಗದಲ್ಲಿ ಪ್ರಧಾನಿ ಅಧ್ಯಕ್ಷರಾಗಿರುತ್ತಾರೆ. ಉಳಿದ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್‌ ಗೌರ್ನರ್‌, ಕೇಂದ್ರ ಸಂಪುಟ ದರ್ಜೆಯ ನಾಲ್ವರು ಸಚಿವರು ವಿವಿಧ ಕ್ಷೇತ್ರಗಳ ತಜ್ಞರು ಸದಸ್ಯರಾಗಿರುತ್ತಾರೆ.
ಸದಸ್ಯರ ಪೈಕಿ ಕೆಲವರು ಪೂರ್ಣಾವಧಿ ಮತ್ತು ಅಲ್ಪಾವಧಿ ಸದಸ್ಯರು, ಕೇಂದ್ರ ಸಂಪುಟ ಸಚಿವರು ಪದನಿವಿತ್ತ (EX-OFFICIO) ಸದಸ್ಯರಾದರೆ, ವಿವಿಧ ಕ್ಷೇತ್ರಗಳ ತಜ್ಞರು ಆಹ್ವಾನಿತ ಸದಸ್ಯರಾಗಿರುತ್ತಾರೆ. ಆಯೋಗದಲ್ಲಿ ಉಪಾಧ್ಯಕ್ಷರು ಒಳಗೊಂಡಂತೆ ಕಾರ್ಯ ನಿರ್ವಹಣಾಧಿಕಾರಿ (CEO) ಎಂಬ ಹೊಸ ಹುದ್ದೆ ಸೃಷ್ಟಿಸಿದ್ದಾರೆ.
ನೀತಿ ಆಯೋಗದ ಈಗಿನ ಸದಸ್ಯರು
1. ಅಧ್ಯಕ್ಷರು: ಪ್ರಧಾನಿ ನರೇಂದ್ರ ಮೋದಿ
2. ಉಪಾಧ್ಯಕ್ಷರು: ಅರವಿಂದ ಪನಗರಿಯಾ
3. ಮುಖ್ಯ ಕಾರ್ಯನಿರ್ವಹಣಾಧಿಕಾರಿ: ಸಿಂಧುಶ್ರೀ ಕುಲ್ಲಾರ್
4. ಪದನಿಮಿತ್ತ ಸದಸ್ಯರು: ರಾಜನಾಥ ಸಿಂಗ್, ಅರುಣ್‌ ಜೇಟ್ಲಿ. ಸುರೇಶ್ ಪ್ರಭು, ರಾಧಾ ಮೋಹನ ಸಿಂಗ್
5. ಪೂರ್ಣಾವಧಿ ಸದಸ್ಯರು: ವಿವೇಕ್‌ ದೇವರಾಯ್, ವಿ.ಕೆ. ಸಾರಸ್ವತ್
6. ಆಡಳಿತ ಮಂಡಳಿ: ಎಲ್ಲ ಮುಖ್ಯಮಂತ್ರಿಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್ ಗೌರ್ನರ್‌ಗಳು
*ನೀತಿ ಆಯೋಗದ ವಿಶೇಷ ಆಹ್ವಾನಿತ ಸದಸ್ಯರಾಗಿ ಸಚಿವರಾದ ನಿತಿನ್ ಗಡ್ಕರಿ, ಸ್ಮೃತಿ ಇರಾನಿ ಮತ್ತು ತಾವರ ಚಂದ ಗೆಹ್ಲೋಟ್ ಆಯ್ಕೆಯಾಗಿದ್ದಾರೆ.
ಯೋಜನಾ ಆಯೋಗ ಹಾಗೂ ನೀತಿ ಆಯೋಗದ ಹೋಲಿಕೆಗಳು
*ನೀತಿ ಆಯೋಗವು ಕೇವಲ ಚಿಂತಕರ ಚಾವಡಿಯಂತೆ ಕೆಲಸ ಮಾಡುತ್ತದೆ. ರಾಜ್ಯಗಳಿಗೆ ಹಣಕಾಸಿನ ಹಂಚಿಕೆ ವಿಷಯವು ಹಣಕಾಸು ಸಚಿವರ ಪರಿಧಿಯಲ್ಲೆ ಇರುತ್ತದೆ. ಆದರೆ ಯೋಜನಾ ಆಯೋಗವು ರಾಜ್ಯಗಳಿಗೆ ನಿಧಿ ಹಂಚಿಕೆ ವಿಷಯದಲ್ಲೂ ಅಧಿಕಾರವನ್ನು ಹೊಂದಿತ್ತು.
*ನೀತಿ ಆಯೋಗದಲ್ಲಿ ಪೂರ್ಣಾವಧಿ ಸದಸ್ಯರ ಸಂಖ್ಯೆ ಯೋಜನೆ ಆಯೋಗದಲ್ಲಿದ್ದ ಸದಸ್ಯರ ಸಂಖ್ಯೆ  ಕಡಿಮೆ. ಈಗಿನ ನೀತಿ ಆಯೋಗದಲ್ಲಿ ಪೂರ್ಣಾವಧಿ ಸದಸ್ಯರ ಸಂಖ್ಯೆ ಎರಡು ಆದರೆ ಈ ಹಿಂದಿನ ಯೋಜನಾ ಆಯೋಗದಲ್ಲಿ 8 ಜನ ಪೂರ್ಣಾವಧಿ ಸದಸ್ಯರಿದ್ದರು.
*ನೀತಿ ಆಯೋಗದಲ್ಲಿ ರಾಜ್ಯಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಆದರೆ ಯೋಜನಾ ಆಯೋಗದಲ್ಲಿ ರಾಜ್ಯಗಳು ಕೇವಲ ರಾಷ್ಟ್ರೀಯ ಅಭಿವೃದ್ಧಿ ನಿಗಮ (national development council) ದ ಭಾಗವಹಿಸುವುದಕ್ಕೆ  ಮಾತ್ರ ಸೀಮಿತವಾಗಿತ್ತು.
*ನೀತಿ ಆಯೋಗದಲ್ಲಿ ಅಲ್ಪಾವಧಿ ಸದಸ್ಯರಿರುತ್ತಾರೆ. ಆದರೆ ಯೋಜನಾ ಆಯೋಗದಲ್ಲಿ ಅಲ್ಪಾವಧಿ ಸದಸ್ಯರಿಲ್ಲ
*ನೀತಿ ಆಯೋಗದಲ್ಲಿ ಹೊಸದಾಗಿ ಸೃಷ್ಟಿಸಲಾದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳನ್ನೊಳಗೊಂಡಂತೆ. ಉಪಾಧ್ಯಕ್ಷರು ಐದು ಜನ ಪೂರ್ಣಾವಧಿ ಮತ್ತು ಇಬ್ಬರು ಅಲ್ಪಾವಧಿ ಸದಸ್ಯರು, ನಾಲ್ಕು ಜನ ಕ್ಯಾಬಿನೆಟ್ ದರ್ಜೆಯ ಸಚಿವರು ( ಪದನಿಮಿತ್ತ) ಇರುತ್ತಾರೆ. ಆದರೆ ಯೋಜನಾ ಆಯೋಗವು ಉಪಾಧ್ಯಕ್ಷರು, ಸದಸ್ಯ ಕಾರ್ಯದರ್ಶಿ ಹಾಗೂ ಕೆಲವು ಪೂರ್ಣಾವಧಿ ಸದಸ್ಯರನ್ನೊಳಗೊಂಡಿತ್ತು.
(ಮುಂದಿನ ವಾರ ಇನ್ನಷ್ಟು ಘಟನೆಗಳು)
ಮಾಹಿತಿಗೆ: drkaginelli@gmail.com

ವಿಶ್ಲೇಷಣೆ ವಿವೇಚನೆ :

ಮಹಿಳೆಯರ ರಕ್ಷಣೆಗೆ ಹಿಮ್ಮತ್ ಆಪ್ ಬಿಡುಗಡೆ: ತುರ್ತು ಸಂಧರ್ಭದಲ್ಲಿ ಪೊಲೀಸರು, ಸಂಬಂಧಿಗಳು ಮತ್ತು  ಸೇಹಿತರ ಸಹಾಯ ಯಾಚಿಸುವ ಹಿಮ್ಮತ್ ಆಪ್ ಅನ್ನು  ದೆಹಲಿ ಪೊಲೀಸರು ಅಭಿವೃದ್ಧಿಪಡಿಸಿದ್ದಾರೆ.  ಇದೆ ರೀತಿಯಾಗಿ ಇನ್ನು ಕೆಲವು ಆ್ಯಪ್‌ ಬಳಕೆಯಲ್ಲಿವೆ. ಮುಖ್ಯವಾಗಿ nirbhaya app, circle of six aap, Hollaback app, bsafe, safetypin app, ifollow ಆ್ಯಪ್‌ಗಳ ಬಗ್ಗೆಯೂ ಕೇಳಬಹುದು. ಮಂಗಳಯಾನಕ್ಕೆ ಅಮೇರಿಕಾದ ವಾಷಿಂಗ್ಟನ್‌ ಲ್ಲಿರುವ ನ್ಯಾಷನಲ್ ಸ್ಟೇಸ್ ಸೂಸೈಟಿಯಿಂದ ಸ್ಟೇಸ್ ಪಯನಿರ್ಸ ಪ್ರಶಸ್ತಿ ಪ್ರಕಟ. ಈ ಕುರಿತು ಮಂಗಳಯಾನದ ವಿಶೇಷ ಅಧ್ಯಯನ ಬಹು ಮುಖ್ಯವಾದುದು.
ದೆಹಲಿಯನ್ನು ದೇಶದ ಮೊದಲ ಸ್ಮಾರ್ಟ್‌ ಸಿಟಿಯಾಗಿ ಅಭಿವೃದ್ಧಿ: ನರೇಂದ್ರ ಮೋದಿ ನೇತೃತ್ವದ ಸರಕಾರವು ದೇಶದಲ್ಲಿ 100 ನಗರಗಳನ್ನು ಸ್ಮಾರ್ಟ್‌ ಸಿಟಿಗಳಾಗಿ ಅಭಿವೃದ್ಧಿ ಪಡಿಸಲು ಯೋಜನೆಯನ್ನು  ಹಮ್ಮಿಕೊಂಡಿದೆ. 2013 ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ, ಜೀವಮಾನ ಸಾಧನೆಗಾಗಿ ನೀಡುವ ಡಾ. ರಾಜಕುಮಾರ ಪ್ರಶಸ್ತಿಗೆ  ಹಿರಿಯ ನಟ ಶ್ರೀನಾಥ, ಪುಟ್ಟಣ್ಣ ಕಣಗಾಲ  ಪ್ರಶಸ್ತಿಗೆ ನಿರ್ದೇಶಕ ಪಿ.ಹೆಚ್. ವಿಶ್ವನಾಥ, ಡಾ. ವಿಷ್ಣುವರ್ಧನ್ ಪ್ರಶಸ್ತಿಗೆ ನಿರ್ಮಾಪಕ ಕೆ.ವಿ ಗುಪ್ತಾ ಆಯ್ಕೆಯಾಗಿದ್ದಾರೆ.
ಮುಂಬೈ ಮಾದರಿಯ 26/11ರೀತಿಯ ದಾಳಿಗೆ ಸಜ್ಜಾಗಿದ್ದ ಪಾಕಿಸ್ತಾನದ ಹಡಗನ್ನು ಭಾರತದ ಕರಾವಳಿ ಕಾವಲು ಪಡೆಯವರು ಸ್ಫೋಟಗೊಳಿಸಿದರು. ಗ್ರಾಮ ಪಂಚಾಯಿತಿ ಕಾಯ್ದೆಯ ತಿದ್ದುಪಡಿಗೆ ಶಾಸಕ ಕೆ.ಆರ್.ರಮೇಶ ಕುಮಾರ ನೇತೃತ್ವದಲ್ಲಿ ಸಮಿತಿ ರಚನೆ.  ಕರ್ನಾಟಕ  ಪಂಚಾಯಿತಿ ರಾಜ್ಯ ಕಾಯ್ದೆ -1993 ತಿದ್ದುಪಡಿ ಸಾಧ್ಯತೆ, ಈ ಕುರಿತು ಸಂವಿಧಾನದ ತಿದ್ದುಪಡಿ ಪರಿಚ್ಛೇದ 73, 74 ಹಾಗೂ ಬಲವಂತರಾಯ್ ಮೆಹ್ತಾ, ಮತ್ತು ಅಶೋಕ ಮೆಹ್ತಾ ಸಮಿತಿಗಳ ವರದಿ ಅಧ್ಯಯನ ಮಾಡಬೇಕಿರುವುದು ಅಗತ್ಯವಾಗಿದೆ. ಇವುಗಳ ಸ್ಥೂಲ ಪರಿಚಯವಿದ್ದಲ್ಲಿ ಅನುಕೂಲವಾಗುವುದು. 
ಚಾಮರಾಜನಗರ ಜ್ಯೋತಿಗೌಡನಪುರದಲ್ಲಿ ರಾಜ್ಯಮಟ್ಟದ ಬೌದ್ಧ ಮಹಾಸಮ್ಮೇಳನ ಜರುಗಿತು. ಪಹಲ್ ಎಂಬುದು ಎಲ್.ಪಿ.ಜಿ ಬಳಿಕೆದಾರರಿಗೆ ರಿಯಾಯಿತಿ ದರವನ್ನು ನೇರವಾಗಿ ಬಳಕೆದಾರರ ಬ್ಯಾಂಕ್‌ ಖಾತೆಗೆ ವರ್ಗಾಯಿಸುವ ಕೇಂದ್ರ ಸರಕಾರದ ಮಹಾತ್ವಾಕಾಂಕ್ಷೆಯ ಯೋಜನೆ. ಭಾರತೀಯ ಕ್ರೀಡಾ ಪ್ರಾಧಿಕಾರದ ಮಹಾನಿರ್ದೇಶಕ ಜೆ.ಜೆ. ಥಾಮ್ಸನ್ ರಾಜೀನಾಮೆ .



ಬಜೆಟ್‌ ಮಾಹಿತಿ ಸಂಗ್ರಹ: 

ಪ್ರತಿವರ್ಷ ಬಜೆಟ್ ಸಮಯದಲ್ಲಿ ಹಾಗೂ ಅದಕ್ಕಿಂತ ಸ್ವಲ್ಪ ಮುಂದು ಬಿಡುಗಡೆಯಾಗುವ ಭಾರತದ ಆರ್ಥಿಕ ಸಮೀಕ್ಷೆ ರೈಲ್ವೆ ಬಜೆಟ್, ಕೇಂದ್ರ ಸರಕಾರದ ಬಜೆಟ್‌ಗಳು. ಹಾಗೆಯೇ ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದಂತೆ ‘ಕರ್ನಾಟಕ ಆರ್ಥಿಕ ಸಮೀಕ್ಷೆ, ‘ಕರ್ನಾಟಕ ಬಜೆಟ್’ಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬಹುಮುಖ್ಯ ಮಾಹಿತಿಯ ಆಗರಗಳಾಗಿರುತ್ತವೆ. ಇಂದಿನ ಲೇಖನದಲ್ಲಿ ‘ಕರ್ನಾಟಕ ಆರ್ಥಿಕ ಸಮೀಕ್ಷೆ 2014-15’ಅನ್ನು ತೆಗೆದುಕೊಂಡು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮುಖ್ಯವಾದ ವಿಷಯಗಳನ್ನು ಇಲ್ಲಿ ಚರ್ಚಿಸಲಾಗಿದೆ.
2011ರ ಜನಗಣತಿಯಂತೆ ಕರ್ನಾಟಕದ ಜನಸಂಖ್ಯೆಯು 6.11 ಕೋಟಿಯಷ್ಟಿದ್ದು ಇದು ಭಾರತದ ಜನಸಂಖ್ಯೆಯ ಶೇಕಡ 5.05ರಷ್ಟು ಆಗಿರುತ್ತದೆ. ಕರ್ನಾಟಕ ರಾಜ್ಯವು ಜನಸಂಖ್ಯೆಯಲ್ಲಿ ಭಾರತ ದೇಶದಲ್ಲಿ 9ನೇ ಸ್ಥಾನದಲ್ಲಿರುತ್ತದೆ. ಕರ್ನಾಟಕ ರಾಜ್ಯವು ವಿಸ್ತಿರ್ಣದಲ್ಲಿ ಭಾರತದಲ್ಲಿ 8ನೇ ಅತಿ ದೊಡ್ಡ ರಾಜ್ಯವಾಗಿದ್ದು ಭಾರತದ ಭೌಗೋಳಿಕ ಪ್ರದೇಶ ಶೇ. 5.83ರಷ್ಟು ಹೊಂದಿದೆ. 2011ರ ಜನಗಣತಿಯಂತೆ ಕರ್ನಾಟಕ ರಾಜ್ಯದ ಜನಸಾಂದ್ರತೆಯು 319 ಇದ್ದು, ಕಳೆದ ದಶಕದಲ್ಲಿ ರಾಜ್ಯದ ಜನಸಂಖ್ಯೆಯು ಶೇಕಡ 15.7ರಷ್ಟು ಬೆಳೆದಿದೆ.
ರಾಜ್ಯದಲ್ಲಿನ ಜನನ ಪ್ರಮಾಣವು (ಪ್ರತಿ 1000ಜನರಿಗೆ) 2001ರಲ್ಲಿ ಶೇಕಡ 19.2ರಷ್ಟು ಇರುತ್ತದೆ. ಅದೇ ರೀತಿ ಮರಣ ಪ್ರಮಾಣವು ಶೇಕಡ 7.1ರಷ್ಟು ಇರುತ್ತದೆ. 2011ರ ಜನಗಣತಿಯಂತೆ ರಾಜ್ಯದಲ್ಲಿ ಲಿಂಗಾನುಪಾತ 943ಇರುತ್ತದೆ ಹಾಗೂ ಜನಸಂಖ್ಯೆಯ ಶೇ. 50.80ರಷ್ಟು ಪುರುಷರು ಇರುತ್ತಾರೆ. ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ (ಜಿಎಸ್‌ಡಿಪಿ) ತಲಾ ಆದಾಯವು ಸ್ಥಿರ ಜಿಲ್ಲೆಗಳಲ್ಲಿ (2004-05) ರಲ್ಲಿ ಶೇಕಡ 7.0ರಷ್ಟು ನಿರೀಕ್ಷಿಸಲಾಗಿದೆ. ರಾಜ್ಯದ ಆದಾಯವು 2014-15ನೇ ಸಾಲಿನಲ್ಲಿ 3,44,106 ಕೋಟಿಗಳಿಗೆ ಏರಿಕೆಯಾಗುವ ನಿರೀಕ್ಷೆಯಿದೆ.
ರಾಜ್ಯದ ಆದಾಯಕ್ಕೆ ಪ್ರಮುಖ ವಲಯಗಳಾದ  ಸೇವಾ ವಲಯದಲ್ಲಿ ಶೇ. 8.9ರಷ್ಟು ಕೃಷಿ ವಲಯದಲ್ಲಿ ಶೇ.4.5ರಷ್ಟು ಹಾಗೂ ಕೈಗಾರಿಕಾ ವಲಯದಲ್ಲಿ ಶೇ.4.4 ರಷ್ಟು ಪ್ರಗತಿಯಾಗುವ ನಿರೀಕ್ಷೆ ಇದೆ. ರಾಜ್ಯದ ತಲಾ ಆದಾಯವು ಸ್ಥಿರ ಬೆಲೆಗಳಲ್ಲಿ (2004-05) 2014-15ನೇ ಸಾಲಿನಲ್ಲಿ 48907ಕ್ಕೆ ಹೆಚ್ಚಾಗಬಹುದೆಂದು ಅಂದಾಜಿಸಲಾಗಿದೆ. ಡಿಸೆಂಬರ್ 2013ರ ಅಂತ್ಯಕ್ಕೆ ಅಖಿಲ ಭಾರತ ಮಟ್ಟದ ಸಗಟು ಮಾರಾಟ ಸೂಚ್ಯಂಕ 179.6 ಇದ್ದು, ಇದು ಡಿಸೆಂಬರ್ 2014ರ ಅಂತ್ಯಕ್ಕೆ 179.8 ರಷ್ಟು ಹೆಚಾಗಿದ್ದು ಇದರಿಂದಾಗಿ ವಾರ್ಷಿಕ ಹಣದುಬ್ಬರ ಶೇ. 0.11 ರಷ್ಟು ಏರಿಕೆಯಾಗಿರುತ್ತದೆ.
ಏಪ್ರಿಲ್ 2000 ದಿಂದ 2014ರ ನವೆಂಬರ್‌ವರೆಗೂ ಕರ್ನಾಟಕವು ವಿದೇಶಿ ನೇರ ಬಂಡವಾಳ ಹೂಡಿಕೆಗೆ ಯು.ಎಸ್. ಡಾಲರ್ 14.174 ಮಿಲಿಯನ್ ಆಕರ್ಷಿಸಿದ್ದು, ಇದು ರಾಷ್ಟ್ರಮಟ್ಟದ ವಿದೇಶಿ ಬಂಡವಾಳ ಹೂಡಿಕೆಯ ಶೇ. 5.99 ರಷ್ಟಾಗಿದೆ. ಕರ್ನಾಟಕವು ವಾಣಿಜ್ಯ ರಫ್ತಿನಲ್ಲಿ 4ನೇ ಸ್ಥಾನವನ್ನು ಪಡೆದಿದ್ದು ರಾಷ್ಟ್ರದ ರಫ್ತಿನ ಶೇ. 12.37 ರಷ್ಟು ಪಾಲನ್ನು ಒಂದಿರುತ್ತದೆ. ರಾಜ್ಯದ ಒಟ್ಟು ಆಂತರಿಕ ಉತ್ಪನ್ನದಲ್ಲಿ (ಜಿಎಸ್‌ಡಿಪಿ) ಕರ್ನಾಟಕದ ರಫ್ತು ಸಾಕಷ್ಟು ಹೆಚ್ಚಿನ ಭಾಗವಾಗಿದ್ದು ಶೇ. 47.3ರಷ್ಟು ಪಾಲನ್ನು ಹೊಂದಿದೆ. ಎಲೆಕ್ಟ್ರಾನಿಕ್ಸ್ ಮತ್ತು ಕಂಪ್ಯೂಟರ್ ತಂತ್ರಾಂಶವು ರಾಜ್ಯದ ರಫ್ತಿನ ಶೇ.61ರಷ್ಟು ಪಾಲನ್ನು ಹೊಂದಿದೆ.
ಮಳೆ ನೀರನ್ನು ಸಂರಕ್ಷಿಸಲು ಮತ್ತು ನ್ಯಾಯಯುತವಾಗಿ ಬಳಕೆ ಮಾಡಲು ಕೃಷಿ ಭಾಗ್ಯ ಯೋಜನೆಯನ್ನು ಜಾರಿಗೆ ತರಲಾಗಿದೆ. ಎಲ್ಲಾ ಕೃಷಿ ಮತ್ತು ತೋಟಗಾರಿಕಾ ಉತ್ಪನ್ನಗಳ ಬೆಲೆ ನೀತಿಯ ಮೇಲೆ ರಾಜ್ಯ ಸರಕಾರಕ್ಕೆ ಸಲಹೆ ನೀಡುವುದಕ್ಕಾಗಿ ರಾಜ್ಯವು 2014-15 ರಲ್ಲಿ ‘ಕೃಷಿ ಬೆಲೆ ಆಯೋಗ’ವನ್ನು ಸ್ಥಾಪಿಸಿರುತ್ತದೆ. ಪ್ರಮುಖ ಕೃಷಿ ಯಂತ್ರೋಪಕರಣಗಳ ಸೇವೆಗಳನ್ನು ಪಡೆಯುವುದಕ್ಕಾಗಿ ಪ್ರತಿಯೊಂದು ಹೋಬಳಿ ಮಟ್ಟದಲ್ಲಿ ‘ಕಸ್ಟಮ್ ಹೈರ್’ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಹೊಸದಾದ ಕೇಂದ್ರಿಯ ಪುರಸ್ಕೃತ ಯೋಜನೆಯಾದ ‘ರಾಷ್ಟ್ರೀಯ ಸುಸ್ಥಿರ ಕೃಷಿ ಅಭಿಯಾನ’ (ಎನ್‌ಎಮ್‌ಎಸ್‌ಎ) ರೂಪಿಸಲಾಗಿರುತ್ತದೆ.
ರಾಜ್ಯದಲ್ಲಿನ ಜಾನುವಾರು ಸಾಂದ್ರತೆಯು ಪ್ರತಿ ಚದರ ಕಿ.ಮೀ. ಪ್ರದೇಶಕ್ಕೆ 151.21ರಷ್ಟು ಇರುತ್ತದೆ. ಹಾಲು ಉತ್ಪಾದನೆಯಲ್ಲಿ ಭಾರತವು ಪ್ರಪಂಚದಲ್ಲಿ ಎರಡನೇ ಸ್ಥಾನವನ್ನು ಗಳಿಸಿರುತ್ತದೆ ಮತ್ತು ಭಾರತದ ರಾಜ್ಯಗಳ ಪೈಕಿ ಕರ್ನಾಟಕವು 11ನೇ ಸ್ಥಾನದಲ್ಲಿರುತ್ತದೆ. ರಾಷ್ಟ್ರದ ಮೀನು ಉತ್ಪಾದನೆಗೆ ಹೋಲಿಸಿದರೆ ಕರ್ನಟಕವು ಸಮುದ್ರದ ಮೀನು ಉತ್ಪಾದನೆಯಲ್ಲಿ 6ನೇ ಸ್ಥಾನವನ್ನೂ, ಒಳನಾಡಿನ ಮೀನು ಉತ್ಪಾದನೆಯಲ್ಲಿ 9ನೇ ಸ್ಥಾನವನ್ನು ಪಡೆದಿರುತ್ತದೆ. ರಾಜ್ಯದ 2013–14ರ ಅರಣ್ಯ ಇಲಾಖೆಯ ವಾರ್ಷಿಕ ವರದಿಯಂತೆ ಕರ್ನಾಟಕವು 43,3356.47 ಚದರ ಕಿ.ಮೀಗಳಷ್ಟು ಅರಣ್ಯ ಪ್ರದೇಶವನ್ನು ಹೊಂದಿದ್ದು, ಇದು ರಾಜ್ಯದ ಭೌಗೋಳಿಕ ಪ್ರದೇಶದ ಶೇ. 22.61  ರಷ್ಟು ಇರುತ್ತದೆ.
ರಾಜ್ಯವು ಸಾಕ್ಷರತಾ ಸಾಧನೆಯಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ. 2001ರಲ್ಲಿ ಶೇಕಡಾ 66.64 ರಷ್ಟಿದ್ದ ರಾಜ್ಯದ ಸಾಕ್ಷರತಾ ಪ್ರಮಾಣವು 2011ರಲ್ಲಿ ಶೇ. 75.60ಕ್ಕೆ ಏರಿಕೆಯಾಗಿದೆ. ಅರದಲ್ಲಿ ಪುರುಷರ ಸಾಕ್ಷರತಾ ಪ್ರಮಾಣ 82.85% ರಷ್ಟು ಹಾಗೂ ಮಹಿಳೆಯರ ಸಾಕ್ಷರತಾ ಪ್ರಮಾಣ ಶೇಕಡಾ 65.46ರಷ್ಟು ಇರುತ್ತದೆ. ಕಳೆದ ಕೆಲವು ವರ್ಷಗಳಲ್ಲಿ ಶಿಶುಮರಣ ದರವು ತೀವ್ರಗತಿಯಲ್ಲಿ ಕಡಿಮೆಯಾಗಿದ್ದು ಪ್ರಸ್ತುತವಾಗಿ ಇದನ್ನು ಒಂದು ಸಾವಿರ ಜನನಕ್ಕೆ ಸುಮಾರು 10ರ ಪ್ರಮಾಣದಲ್ಲಿ ನಿಯಂತ್ರಣಕ್ಕೆ ತರಲಾಗಿದೆ. ಒಂದು ಲಕ್ಷ ಸಜೀವ ಜನನಕ್ಕೆ ತಾಯಂದಿರ ಮರಣ ಪ್ರಮಾಣ (ಎಂಎಂಆರ್) 2010-13ರಲ್ಲಿ 144ರಷ್ಟಿದೆ.

ಏನು, ಎಷ್ಟು ತಿಳಿದಿರಬೇಕು?: 




ರಾಜ್ಯದಲ್ಲಿ ಪ್ರಥಮ ಬಾರಿಗೆ ಏಪ್ರಿಲ್ 11 ರಿಂದ 30ರವರೆಗೆ ಜಾತಿ ಗಣತಿ ಮಾಡಲಾಗುವುದು. ಈ ಗಣತಿಯು ಜಾತಿ ಆಧಾರಿತ  ಮೀಸಲಾತಿ ಹಾಗೂ ವಿವಿಧ ಜಾತಿಗಳ ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿಯನ್ನು ತಿಳಿಯಲು ಸಹಕಾರಿಯಾಗುತ್ತದೆ. ಈ ಹಿಂದೆ ಕ್ರಿ.ಶ. 1931ರಲ್ಲಿ ಕೂಡಾ ಈ ರೀತಿ ಜನಗಣತಿ ಮಾಡಲಾಗಿತ್ತು.
ಜನವರಿ 7ರಿಂದ 9ರವರೆಗೆ ಪ್ರವಾಸಿ ಭಾರತೀಯ ದಿವಸವನ್ನು ಗುಜರಾತಿನ ಅಹ್ಮದಾಬಾದ್‌ನಲ್ಲಿ ಆಚರಿಸಲಾಯಿತು.
ತಮಿಳನಾಡಿನ ಥೇನಿ ಜಿಲ್ಲೆಯ ಪೊಟ್ಟಪುರಂ ಬಳಿ ಬೋಡಿ ಪರ್ವತ ಶ್ರೇಣಿಯಲ್ಲಿ 1500 ಕೋಟಿ ರೂಪಾಯಿ ವೆಚ್ಚದಲ್ಲಿ ಭಾರತೀಯ ಕಣ ವಿಶ್ಲೇಣಾಲಯ ಸ್ಥಾಪನೆ. (ಇಂಡಿಯನ್ ನ್ಯೂಟ್ರಿನೊ ಆಬ್ಸರ್ವೇಟರಿ- ಐಎನ್‌ಓ)
ನ್ಯುಟ್ರಿನೋಸ್: ಬೆಳಕಿಗಿಂತ ವೇಗವಾಗಿ ಚಲಿಸುವ ಹಾಗೂ ನಿಲುಕದ ಪರಮಾಣುವಿಗಿಂತ ಚಿಕ್ಕದಾದ  ಸೂಕ್ಷ್ಮತೀಸೂಕ್ಷ್ಮ ಕಣಗಳನ್ನು ನ್ಯೂಟ್ರಿನೋಸ್ ಎಂದು ಕರೆಯುತ್ತಾರೆ.
ಅಶ್ವಥ್‌ ಅಯ್ಯಪ್ಪ ಅವರ ‘ವೆನ್‌ ಗಾಡ್‌ ಬೌಲ್ಸ್‌ ಎ ಗೂಗ್ಲಿ‘ ಕೃತಿ ಬಿಡುಗಡೆ. ಶ್ರೀಲಂಕಾದ ನೂತನ ಅಧ್ಯಕ್ಷರಾಗಿ ಮೈತ್ರಿಪಾಲ ಸಿರಿಸೇನ (63) ಆಯ್ಕೆಯಾದರು. ಇವರು ಶ್ರೀಲಂಕಾದ 7ನೇ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ.
ಶ್ರೀಲಂಕಾದಲ್ಲಿ ಆಡಳಿತ ನಡೆಸಿದ ರಾಷ್ಟ್ರಪತಿಗಳ ವಿವರ
1.  ವಿಲಿಯಂಮ್  ಗೊಪಾಲ್ಲವ 1972–78
2.  ಜುನಿಯಸ್ ರಿಚರ್ಡ ಜಯವರ್ಧನೆ 1978–1989
3. ರಣಸಿಂಗ್ ಪ್ರೇಮದಾಸ 1989–1993 (ಎಲ್‌ಟಿಟಿಇಯಿಂದ ಹತರಾದರು)
4.  ದಿಂಗಿರಿ ಬಂಡ ವಿಜೆಯತುಂಗ  1993–1994
5.  ಚಂದ್ರಿಕ ಕುಮಾರತುಂಗ  1994–2005
6.  ಮಹಿಂದಾ ರಾಜಪಕ್ಷೆ 2005–2015
7.  ಮೈತ್ರಿಪಾಲ ಸಿರಿಸೇನ  2015 ರಿಂದ ಈ ವರೆಗೆ
ದ್ವೈವಾರ್ಷಿಕವಾಗಿ ನಡೆಯುವ ವೈಬ್ರಂಟ್  ಗುಜರಾತ್ (ಉಜ್ವಲ ಗುಜರಾತ್)ನೇ ಶೃಂಗಸಭೆಗೆ ಮೋದಿ ಅವರಿಂದ ಚಾಲನೆ. ಈ ಶೃಂಗಸಭೆಗೆ ಮುಖ್ಯ ಗಣ್ಯರಾಗಿ ಅಮೆರಿಕಾದ ವಿದೇಶಾಂಗ ಇಲಾಖೆಯ ಕಾರ್ಯದರ್ಶಿ ಜಾನ್ ಕೆರಿ, ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್, ವಿಶ್ವಬ್ಯಾಂಕ್‌ ಅಧ್ಯಕ್ಷ ಜಿಮ್ ಯಾಂಗ್ ಕಿಮ್, ಮಸಡೋನಿಯಾ ಪ್ರಧಾನಿ ನಿಕೋಲ್ ಗ್ರುವಸ್ಕಿ ಸೇರಿದಂತೆ ಅನೇಕ ದಿಗ್ಗಜರು ಪಾಲ್ಗೊಂಡಿದ್ದರು.
2 ಲಕ್ಷ ಕೋಟಿ ರೂಪಾಯಿ ಬಂಡವಾಳ ಹೂಡಿಕೆಗೆ ಈ ಸಮಾವೇಶದಲ್ಲಿ ಒಪ್ಪಂದಕ್ಕೆ ಬರಲಾಯಿತು.  ಸುಮಾರು 50 ಸಾವಿರ ಉದ್ಯೋಗ ಸೃಷ್ಟಿಯ ನಿರೀಕ್ಷೆ ಹಾಗೂ ವಿವಿಧ ವಲಯಗಳಿಗೆ ಸಂಬಂಧಿಸಿದಂತೆ 31 ಒಪ್ಪಂದಗಳಿಗೆ ಸಹಿ ಹಾಕಲಾಯಿತು.
ಸ್ವಿಟ್ಜರ್‌ಲೆಂಡ್‌ನ  ರೋಜರ್ ಫೆಡರರ್ ಬ್ರಿಸ್ಪೇನ ಇಂಟರ್  ನ್ಯಾಷನಲ್ ಟೆನಿಸ್ ಟೂರ್ನಿಯಲ್ಲಿ ಜಯಗಳಿಸುವುದರ ಮೂಲಕ ವೃತ್ತಿ ಜೀವನದಲ್ಲಿ ಸಾವಿರ ಪಂದ್ಯಗಳನ್ನು ಜಯಿಸಿದ ಮೂರನೇ  ಆಟಗಾರನೆಂಬ ಕೀರ್ತಿಗೆ ಪಾತ್ರರಾದರು. ಜಿಮ್ಮಿ ಕಾನರ್ಸ (1253) ಮತ್ತು ಇವಾನ್ ಲೆಂಪ್ಲ್ (1071) ಸಾವಿರಕ್ಕೂ ಅಧಿಕ ಪಂದ್ಯಗಳಲ್ಲಿ ಜಯಸಾಧಿಸಿದ ಇತರ ಆಟಗಾರರು.
ಇಸ್ರೊದ ನೂತನ ಅಧ್ಯಕ್ಷರಾಗಿ ಕನ್ನಡಿಗ ಆಲೂರು ಸಿಳಿನ್ ಕಿರಣಕುಮಾರ ಆಯ್ಕೆಯಾದರು. ಇವರು ಈ ವರೆಗೂ ಅಹ್ಮದಾಬಾದಿನ ಉಪಗ್ರಹ ಆನ್ವಯಿಕ ಕೇಂದ್ರ ನಿರ್ದೇಶಕರಾಗಿದ್ದರು. 1975 ರಿಂದಲೂ  ಇಸ್ರೋದೊಂದಿಗೆ ಒಡನಾಟ ಹೊಂದಿರುವ ಇವರು ಮಹತ್ವಾಕಾಂಕ್ಷೆಯ ಯೋಜನೆಗಳಾದ ಭಾಸ್ಕರ (1979), ಚಂದ್ರಯಾನ 1 (2008)ರಲ್ಲಿ ಮಹತ್ವದ ಪಾತ್ರ ವಹಿಸಿದ್ದರು.
ಬಾಂಗ್ಲಾ ದೇಶದಲ್ಲಿ ಮೊದಲ ಬಾರಿಗೆ ಮುಖ್ಯ ನ್ಯಾಯಮೂರ್ತಿಗಳಗಿ ಹಿಂದೂಗಳೊಬ್ಬರು ನೇಮಕವಾಗಿದ್ದಾರೆ. ನ್ಯಾಯಮೂರ್ತಿ ಎಸ್.ಕೆ.ಸಿನ್ಹಾ ಅವರು ಈ ಹುದ್ದೆಗೆ ಆಯ್ಕೆಯಾದ ಭಾರತೀಯ ಮೂಲದವರು. ಭಾರತ ಮತ್ತು ಬಾಂಗ್ಲಾದೇಶದ  ಗಡಿಯಲ್ಲಿ ಸ್ಥಳೀಯ ಉತ್ಪನ್ನಗಳ ಮಾರಾಟಕ್ಕೆ ಅವಕಾಶ ಕಲ್ಪಿಸುವ  ಬಾರ್ಡರ್ ಹಾತ್ ಕಾರ್ಯಕ್ರಮಕ್ಕೆ  ತ್ರಿಪುರಾದಲ್ಲಿ ಚಾಲನೆ.  ಖ್ಯಾತ ಹಿಂದಿ ಸಾಹಿತಿ ಕಮಲ್ ಕಿಶೋರ್ ಗೋಯಂಕಾ ಅವರಿಗೆ ಪ್ರತಿಷ್ಠಿತ ವ್ಯಾಸ್ ಸಮ್ಮಾನ್ -2014ರ ಪ್ರಶಸ್ತಿ ಪ್ರದಾನ.
ವ್ಯಾಸ್ ಸಮ್ಮಾನ್ ಪ್ರಶಸ್ತಿ ಹಿಂದಿ ಸಾಹಿತ್ಯ  ಕೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ  ನೀಡಲಾಗುತ್ತದೆ. ಪ್ರಶಸ್ತಿಯು 2.5 ಲಕ್ಷ ರೂ ನಗದು ಪುರಸ್ಕಾರವನ್ನು ಒಳಗೊಂಡಿದೆ. ಈ ಪ್ರಶಸ್ತಿಯನ್ನು 1991 ರಲ್ಲಿ ಮೊದಲ ಬಾರಿಗೆ ಕೆ.ಕೆ ಬಿರ್ಲಾ ಫೌಂಡೇಶನ್ ವತಿಯಿಂದ ಪ್ರಾರಂಭಿಸಲಾಯಿತು. ಈ ಪ್ರಶಸ್ತಿಗೆ ಹಿಂದಿ ಸಾಹಿತ್ಯಕ್ಕೆ ಕಳೆದ ಹತ್ತು ವರ್ಷಗಳಿಂದ ಗಣನೀಯ ಸೇವೆ ಸಲ್ಲಿಸಿದವರನ್ನು ಆಯ್ಕೆ ಮಾಡಲಾಗುತ್ತದೆ.
ಈ ವರ್ಷದ ಪ್ರಶಸ್ತಿಯು ‘ಪ್ರೇಮಚಂದ ಕೆ. ಕಹಾನಿಯೊಂಕಾ ಕಾಲ ಕ್ರಮಾನುಸಾರ ಅಧ್ಯಯನ’ ಎಂಬ ಕೃತಿಗೆ  ನೀಡಲಾಗಿದೆ.
ಬಡತನ ರೇಖೆಗಿಂತ  ಮೇಲಿನ ಎ.ಪಿ.ಎಲ್ ಕಾರ್ಡ್‌ ಕುಟುಂಬಗಳಿಗೆ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ಒದಗಿಸುವ ‘ರಾಜೀವ್ ಆರೋಗ್ಯ ಭಾಗ್ಯ’ ಮತ್ತು ಸರಕಾರಿ ನೌಕರರಿಗೆ  ನಗದು ರಹಿತ ಚಿಕಿತ್ಸೆ ನೀಡುವ ‘ಜ್ಯೋತಿ ಸಂಜೀವಿನಿ’ ಯೋಜನೆಗಳಿಗೆ ಚಾಲನೆ ನೀಡಲಾಗಿದೆ.
ಸ್ವದೇಶಿ ವಿನ್ಯಾಸದೊಂದಿಗೆ  ಅಭಿವೃದ್ಧಿಗೊಂಡಿರುವ ಮೊದಲು ಹಗುರ ಯುದ್ಧ ವಿಮಾನ ತೇಜಸ್‌ ಅನ್ನು ವಾಯುಪಡೆಗೆ ಹಸ್ತಾಂತರ ಮಾಡಲಾಯಿತು. ತೇಜಸ್ ಹಗುರ ಯುದ್ಧ  ವಿಮಾನ ತಯಾರಿಕಾ ಪ್ರಣಾಳಿಕೆಗೆ 1983ರಲ್ಲಿ ಚಾಲನೆ ದೊರೆಯಿತು. ತೇಜಸ್  ಯುದ್ಧ ವಿಮಾನವು ಆಕಾಶದಿಂದ  ಭೂಮಿ ಮತ್ತು ಆಕಾಶದಿಂದ ಸಮುದ್ರದೆಡೆಗೆ ಮುನ್ನಗ್ಗಬಲ್ಲ ರೀತಿಯಲ್ಲಿ ವಿನ್ಯಾಸ ಮಾಡಲಾಗಿದೆ. ರಷ್ಯಾ ನಿರ್ಮಿತ ಮಿಗ್‌ಬಿ ಜೆಟ್‌ಗೆ ಪರ್ಯಾಯವಾಗಿ ಬಳಸಲು ಉದ್ದೇಶಿಸಲಾಗಿದೆ.
ಸ್ಪೇನ್ ಲೇಖಕ ಜೇವಿಯರ್ ಮೋರೊ ಬರೆದ ಕಾಂಗ್ರೆಸ್ ಅಧ್ಯಕ್ಷ ಸೋನಿಯಾ ಗಾಂಧಿ ಜೀವನ ಆಧಾರಿತ ‘ರೆಡ್ ಸ್ಯಾರಿ: ಎ ಡ್ರಾಮಾಟೈಸ್ಡ್ ಬಯೋಗ್ರಫಿ ಆಫ್ ಸೋನಿಯಾ ಗಾಂಧಿ’ ಭಾರತದಲ್ಲಿ ಬಿಡುಗಡೆ.

ಪ್ರಶ್ನೆಪತ್ರಿಕೆ ಅಧ್ಯಯನ ಮಹತ್ವ:

ವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಯಲ್ಲಿ ತೊಡಗಿಕೊಂಡಿರುವ ಅಭ್ಯರ್ಥಿಗಳಿಗೆ ಹಳೆಯ ಪ್ರಶ್ನೆ ಪತ್ರಿಕೆಗಳ ಅಧ್ಯಯನ ಬಹು ಮುಖ್ಯವಾಗಿರುತ್ತದೆ. ಸುಮಾರು 4ರಿಂದ 5 ವರ್ಷಗಳ ಹಿಂದಿನಿಂದ ನಡೆಸಲಾಗಿರುವ ಪ್ರಶ್ನೆ ಪತ್ರಿಕೆಗಳನ್ನು ಶೇಖರಿಸಿ ಅದರಲ್ಲಿ ಪ್ರಶ್ನೆಗಳನ್ನು ವಿಭಾಗಗಳಾಗಿ ವಿಂಗಡಿಸಿ ಅಂದರೆ ಇತಿಹಾಸ ವಿಭಾಗಕ್ಕೆ ಸಂಬಂಧಿಸಿದ ಪ್ರಶ್ನೆಗಳು, ರಾಜಕೀಯ ಶಾಸ್ತ್ರದ ಪ್ರಶ್ನೆಗಳು, ಭೂಗೋಳಶಾಸ್ತ್ರಕ್ಕೆ ಸಂಬಂಧಿಸಿದ ಪ್ರಶ್ನೆಗಳು, ಅರ್ಥಶಾಸ್ತ್ರಕ್ಕೆ ಸಂಬಂಧಿಸಿದವು, ಪ್ರಚಲಿತ ವಿದ್ಯಾಮಾನಗಳಿಗೆ ಸಂಬಂಧಿಸಿದ ಪ್ರಶ್ನೆಗಳು, ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದವು.
ಕ್ರೀಡೆಗೆ ಸಂಬಂಧಿಸಿದ ಪ್ರಶ್ನೆಗಳು ಹೀಗೆ ವಿಭಾಗಗಳಾಗಿ ಪ್ರತ್ಯೇಕಿಸಿ ಯಾವ ವಿಭಾಗದಲ್ಲಿ ಹೆಚ್ಚಿನ ಪ್ರಶ್ನೆಗಳು ಬಂದಿವೆ, ಯಾವುದಕ್ಕೆ ಹೆಚ್ಚು ಒತ್ತು ಕೊಡಬೇಕು ಎಂಬ ಅಂಶಗಳನ್ನು ಮನದಟ್ಟು ಮಾಡಿಕೊಂಡರೆ ಮುಂಬರುವ ಪರೀಕ್ಷೆಗೆ ಕ್ರಮ ಬದ್ಧ ತಯಾರಿಗೆ ಸಹಾಯಕವಾಗುತ್ತದೆ.
ಕೆ.ಎ.ಎಸ್. ಪರೀಕ್ಷೆಗೆ ಸಂಬಂಧಪಟ್ಟಂತೆ ಪೂರ್ವಭಾವಿ ಪರೀಕ್ಷೆಯ ವಿಧಾನವು 2011ರಿಂದ ಬದಲಾವಣೆ ಗೊಳಪಟ್ಟಿದ್ದು, ಹೊಸ ಮಾದರಿಯಲ್ಲಿ 2011-12ನೇ ಸಾಲಿನಲ್ಲಿ ಪರೀಕ್ಷೆಯನ್ನು ನಡೆಸಲಾಗಿದೆ. 2011-12ನೇ ಸಾಲಿನಲ್ಲಿ ನಡೆಸಿದ ಪೂರ್ವಭಾವಿ ಪರೀಕ್ಷೆಯ ಸಾಮಾನ್ಯ ಅಧ್ಯಯನ-1 ಮತ್ತು ಸಾಮಾನ್ಯ ಅಧ್ಯಯನ-2 ಪ್ರಶ್ನೆ ಪತ್ರಿಕೆಗಳ ಲಭ್ಯವಿದ್ದು, ಬದಲಾದ ಪರೀಕ್ಷಾ ಪದ್ಧತಿಯನ್ನು ತಿಳಿದುಕೊಳ್ಳುವುದಕ್ಕೆ ಸಹಕಾರಿಯಾಗಿವೆ.
ಈ ಒಂದು ಲೇಖನದಲ್ಲಿ 2011ರಲ್ಲಿ ನಡೆದ ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆಯ ಸಾಮಾನ್ಯ ಅಧ್ಯಯನ ಪತ್ರಿಕೆ-1ಅನ್ನು ತೆಗೆದುಕೊಂಡು ಅದರಲ್ಲಿ ಕೆಳಲಾದ ಪ್ರಶ್ನೆಗಳನ್ನು ವಿಭಾಗಗಳಾಗಿ ವಿಂಗಡಿಸಿ ವಿಶ್ಲೇಷಿಸಲಾಗಿದೆ. 2011ನೇ ಸಾಲಿನ ಗೆಜೆಟೆಡ್ ಪ್ರೊಬೆಷನರಿ ಪೂರ್ವಭಾವಿ ಪರೀಕ್ಷೆಯ ಸಾಮಾನ್ಯ ಅಧ್ಯಯನಪತ್ರಿಕೆ-1 ಅನ್ನು ತೆಗೆದುಕೊಂಡರೆ ಇದು 100 ಪ್ರಶ್ನೆಗಳನ್ನೊಳಗೊಂಡು 100ಅಂಕದ 2ಗಂಟೆ ಪ್ರಶ್ನೆ ಪತ್ರಿಕೆಯಾಗಿರುತ್ತದೆ.
ಇದು ಬದಲಾದ ಮಾದರಿಯಲ್ಲಿ ಪ್ರಥಮ ಬಾರಿಗೆ ನಡೆದ ಪರೀಕ್ಷೆಯಾಗಿರುತ್ತದೆ. ಈ ಪ್ರಶ್ನೆ ಪತ್ರಿಕೆಯಲ್ಲಿ ಕೇಳಲಾದ 100ಪ್ರಶ್ನೆಗಳನ್ನು ನಾವು ವಿವಿಧ ವಿಭಾಗಗಳಾಗಿ ವಿಂಗಡಿಸುವುದಾದರೆ ಪ್ರಧಾನವಾಗಿ ಇತಿಹಾಸಕ್ಕೆ ಸಂಬಂಧಿಸಿದ ಪ್ರಶ್ನೆಗಳು ಶೇಕಡ 16 ರಷ್ಟು ಇದರಲ್ಲಿ ಕರ್ನಾಟಕದ ಇತಿಹಾಸಕ್ಕೆ ಸಂಬಂಧಿಸಿದಂತೆ ಸುಮಾರು 5 ರಿಂದ 6 ಪ್ರಶ್ನೆಗಳು ಬಂದಿರುತ್ತವೆ. ಅದೇ ರೀತಿ ಭೂಗೋಳ ಶಾಸ್ತ್ರಕ್ಕೆ ಸಂಬಂಧಿಸಿದಂತೆ 18 ಪ್ರಶ್ನೆಗಳು ಅಂದರೆ ಶೇಕಡ 18 ರಷ್ಟು ಇದರಲ್ಲಿ ಕರ್ನಾಟಕದ ಭೂಗೋಳ ಶಾಸ್ತ್ರಕ್ಕೆ ಸಂಬಂಧಿಸಿದಂತೆ 5 ಪ್ರಶ್ನೆಗಳು ಬಂದಿರುತ್ತವೆ.
ಅದೇ ರೀತಿ ರಾಜ್ಯಶಾಸ್ತ್ರ ಹಾಗೂ ಭಾರತೀಯ ಸಂವಿಧಾನಕ್ಕೆ ಸಂಬಂಧಪಟ್ಟಂತೆ 12 ಪ್ರಶ್ನೆಗಳು ಅಂದರೆ ಶೇ. 12 ರಷ್ಟು ಪ್ರಶ್ನೆಗಳು, ಅರ್ಥಶಾಸ್ತ್ರಕ್ಕೆ ಸಂಬಂಧಿಸಿದಂತೆ ಸುಮಾರು 20 ಪ್ರಶ್ನೆಗಳು ಬಂದಿದ್ದು, ಇದರಲ್ಲಿ ಹೆಚ್ಚಿನ ಪ್ರಶ್ನೆಗಳು ಪ್ರಚಲಿತ ವಿದ್ಯಾಮಾನಕ್ಕೆ ಸಂಬಂಧಿಸಿದ ಪ್ರಶ್ನೆಗಳಾಗಿರುತ್ತವೆ. ವಿಜ್ಞಾನ-ತಂತ್ರಜ್ಞಾನ ಹಾಗೂ ಪರಿಸರಕ್ಕೆ ಸಂಬಂಧಿಸಿದ ಪ್ರಶ್ನೆಗಳು ಶೇಕಡ 6ರಷ್ಟು, ಕ್ರೀಡೆಗೆ ಸಂಬಂಧಿಸಿದಂತೆ 2 ಪ್ರಶ್ನೆಗಳು ಬಂದಿರುತ್ತವೆ.
ಪ್ರಶ್ನೆ ಪತ್ರಿಕೆಯಲ್ಲಿ ಬಹುಮುಖ್ಯ ಭಾಗವಾದ ಪ್ರಚಲಿತ ಘಟನೆಗಳು ವಿಭಾಗದಲ್ಲಿ ಶೇಕಡ 25ರಷ್ಟು ಪ್ರಶ್ನೆಗಳು ಕೇಳಲಾಗಿದ್ದು, ಅದರಲ್ಲಿ ರಾಜ್ಯಕ್ಕೆ ಸಂಬಂಧಿಸಿದ ಪ್ರಚಲಿತ ಘಟನೆಗಳ 8 ಪ್ರಶ್ನೆಗಳು, ರಾಷ್ಟ್ರಕ್ಕೆ ಸಂಬಂಧಿಸಿದ ಪ್ರಚಲಿತ ಘಟನೆಗಳ 10 ಪ್ರಶ್ನೆಗಳು ಹಾಗೂ ಅಂತರರಾಷ್ಟ್ರೀಯ ಪ್ರಚಲಿತ ಘಟನೆಗಳಿಗೆ ಸಂಬಂಧಿಸಿದಂತೆ 8ರಿಂದ 10 ಪ್ರಶ್ನೆಗಳನ್ನು ಕೇಳಲಾಗಿದೆ.
2011ರ ಪೂರ್ವಭಾವಿ ಪರೀಕ್ಷೆಯ ಸಾಮಾನ್ಯ ಅಧ್ಯಯನ ಪ್ರಶ್ನೆಪತ್ರಿಕೆ-1ಅನ್ನು ವಿಶ್ಲೇಷಿಸಿದಾಗ ನಮಗೆ ಬಹುಮುಖ್ಯವಾಗಿ ಎರಡು ಮಾದರಿಯ ಪ್ರಶ್ನೆಗಳು ಕಂಡುಬರುತ್ತವೆ. ಮೊದಲನೆಯದಾಗಿ ‘ಕ್ವಿಜ್’ ಮಾದರಿಯ ಪ್ರಶ್ನೆಗಳಾದರೆ ಎರಡನೆಯ ‘ವಿಸ್ತೃತ’ (Illustrativee) ಮಾದರಿಯ ಪ್ರಶ್ನೆಗಳು ಉದಾಹರಣೆಗಳೊಂದಿಗೆ ವಿವರಿಸುವುದಾದರೆ ಪ್ರಶ್ನೆ ಪತ್ರಿಕೆಯಲ್ಲಿ ಒಂದು ಪ್ರಶ್ನೆ ಈ ರೀತಿಯಾಗಿರುತ್ತದೆ.
ಪ್ರಶ್ನೆ: ‘ದೇವನಾಂಪ್ರಿಯ’ ಮತ್ತು ‘ಪ್ರಿಯದರ್ಶಿನಿ’ ಎಂಬುದು ಈ ಕೆಳಕಂಡ ವ್ಯಕ್ತಿಯ ಇತರ ಹೆಸರುಗಳು
1) ಹರ್ಷವರ್ಧನ, 2) ಮಹಾವೀರ 3) ಗೌತಮ ಬುದ್ಧ  4) ಅಶೋಕ
ಈ ಮೇಲಿನ ಪ್ರಶ್ನೆಯು ಕ್ವಿಜ್ ಮಾದರಿಯ ಪ್ರಶ್ನೆಯಾಗಿರುತ್ತದೆ.
ವಿಸ್ತೃತ ಮಾದರಿಯ ಪ್ರಶ್ನೆಗಳನ್ನು ನೋಡುವುದಾದರೆ ಈ ಕೆಳಗಿನ ಒಂದು ಪ್ರಶ್ನೆಯನ್ನು ನೋಡೋಣ.
ಪ್ರಶ್ನೆ: ಈ ಕೆಳಗಿನ ಯಾವ ಕ್ರಮಗಳನ್ನು ಜಾರಿಗೆ ತರುವ ಬಗ್ಗೆ ರೌಲಟ್ ಕಾಯ್ದೆ ಪ್ರಯತ್ನಿಸಿತು.
ಎ.  ಪತ್ರಿಕೆಗಳ ಮೇಲೆ ಇನ್ನೂ ಹೆಚ್ಚಿನ ಹಾಗೂ ಕಟ್ಟುನಿಟ್ಟಿನ ನಿಯಂತ್ರಣ
ಬಿ. ರಾಜಕೀಯ ಅಪರಾಧಿಗಳ ವಿಚಾರಣೆಯನ್ನು ನ್ಯಾಯವೇತ್ತರಿಲ್ಲದೆ (Juries) ನ್ಯಾಯಾಧೀಶರೇ ನಡೆಸುವುದು.
ಸಿ. ವಿಧ್ವಂಸಕ ಗುರಿ ಹೊಂದಿದವರು ಎಂದು ಸಂದೇಹಿಸಲಾದ ವ್ಯಕ್ತಿಗಳನ್ನು ವಿಚಾರಣೆಯಿಲ್ಲದೆ ಸ್ಥಾನ ಬದ್ದತೆಯಲ್ಲಿರಿಸುವದು.
ಡಿ. ದೇಶದಾದ್ಯಂತ ಸೈನಿಕ ಕಾನೂನಿನ ಆಡಳಿತ
ಮೇಲಿನ ವಿವರಣೆಗಳಲ್ಲಿ ಸರಿಯಾದುದು ಯಾವುವು?
ಎ ಮತ್ತು ಡಿ
ಎ, ಬಿ ಮತ್ತು ಸಿ
ಬಿ, ಸಿ ಮತ್ತು ಡಿ
ಮೇಲಿನ ಎಲ್ಲವೂ
ಈ ಪ್ರಶ್ನೆಯು ವಿಸ್ತೃತ ಮಾದರಿಯ ಪ್ರಶ್ನೆಯಾಗಿದ್ದು ವಿಷಯದ ಬಗ್ಗೆ ಆಳವಾದ ಅಧ್ಯಯನ ಮಾಡಿದ ಅಭ್ಯರ್ಥಿಗಳು ಮಾತ್ರ ಉತ್ತರಿಸಲು ಸಾಧ್ಯ.
‘ಸಿರಿಯಸ್’ ಆಗಿ ಪರೀಕ್ಷೆಯನ್ನು ಬರೆಯುತ್ತಿರುವ ಅಭ್ಯರ್ಥಿಗಳು ಹಾಗೂ ‘ನಾಮಕಾವಸ್ತೆ’ ಪರೀಕ್ಷೆ ಬರೆಯುವ ಅಭ್ಯರ್ಥಿಗಳನ್ನು ‘ಫಿಲ್ಟರ್’ ಮಾಡಲು ಇಂತಹ ಪ್ರಶ್ನೆಗಳನ್ನು ಕೇಳಲಾಗುತ್ತದೆ. 2011ರ ಪ್ರಶ್ನೆಪತ್ರಿಕೆಯಲ್ಲಿ ಕ್ವಿಜ್ ಮಾದರಿಯ ಪ್ರಶ್ನೆಗಳು ಕಡಿಮೆಯಿದ್ದು, ಹೆಚ್ಚಿನ ಪ್ರಶ್ನೆಗಳು ವಿಸ್ತೃತ ಮಾದರಿಯ ಪ್ರಶ್ನೆಗಳಾಗಿರುತ್ತವೆ. ಕೆ.ಎ.ಎಸ್. ಪರೀಕ್ಷೆಯ ಪ್ರಶ್ನೆಪತ್ರಿಕೆಗಳು ಇತ್ತೀಚಿಗೆ ಯು.ಪಿ.ಎಸ್.ಸಿ. ಮಾದರಿಯಲ್ಲೇ ಬರುತ್ತಿದ್ದು ಆಳವಾದ ಅಧ್ಯಯನ ಬಹುಮುಖ್ಯವಾಗಿರುತ್ತದೆ. 


No comments:

Post a Comment