Wednesday, 7 January 2015

ಗ್ಯಾಜೆಟ್ ಲೋಕ , 2014 ಆಗು–ಹೋಗು, ಆಗಸ್ಟ್‌ / ಸರಣಿ– 8, spoken english

ನೋಶನ್ ಇಂಕ್ ಕೈನ್: ಕೈಗೆಟುಕುವ ಬೆಲೆಗೆ 2-ಇನ್-1



ಸ್ಮಾ ರ್ಟ್‌ಫೋನ್ ಮತ್ತು ಟ್ಯಾಬ್ಲೆಟ್ ಗಣಕಗಳನ್ನು ಮೊದಲು  ಮಾರುಕಟ್ಟೆಗೆ ತಂದಿದ್ದು ಆಪಲ್ ಕಂಪೆನಿ ಎಂದು ಹಲವು ಮಂದಿ ತಪ್ಪು ತಿಳಿದಿದ್ದಾರೆ. ಮೈಕ್ರೋಸಾಫ್ಟ್ ಕಂಪೆನಿ ಅದಕ್ಕಿಂತ ತುಂಬ ಮೊದಲೇ ತಂದಿತ್ತು. ಮೈಕ್ರೋಸಾಫ್ಟ್ 1999ರಲ್ಲಿ ಮಾರುಕಟ್ಟೆಗೆ ತಂದಿದ್ದ ಟ್ಯಾಬ್ಲೆಟ್ ನಿಜಕ್ಕೂ ಅತ್ಯುತ್ತಮವಾಗಿತ್ತು. ಆದರೆ ಅದು ತುಂಬ ತೂಕದ್ದಾಗಿದ್ದು, ಒಂದು ಕೈಯಲ್ಲಿ ಹಿಡಿದು ಕೆಲಸ ಮಾಡಲು ಕಷ್ಟಪಡಬೇಕಾದಂಥದ್ದಾಗಿತ್ತು.
ಆಪಲ್ ಐಪ್ಯಾಡ್ ನಂತರ ಆಂಡ್ರಾಯಿಡ್ ಟ್ಯಾಬ್ಲೆಟ್‌ಗಳು ಈಗ ಮಾರುಕಟ್ಟೆಯಲ್ಲಿ ಮುಂದಿವೆ. ಇಂತಹ ಸಂದರ್ಭದಲ್ಲಿ ಮೈಕ್ರೋಸಾಫ್ಟ್ ವಿಂಡೋಸ್ ಬಳಸುವ ಕೆಲವು ಪರಿವರ್ತಿಸಬಲ್ಲ (convertible, 2-in-1) ಅಂದರೆ ಟ್ಯಾಬ್ಲೆಟ್ ಆಗಿಯೂ ಲ್ಯಾಪ್‌ಟಾಪ್ ಆಗಿಯೂ ಬಳಸಬಲ್ಲ ಗಣಕಗಳು ಮಾರುಕಟ್ಟೆಯನ್ನು ಪ್ರವೇಶಿಸಿದವು. ಅಂತಹ ಒಂದು ಲೆನೋವೋ ಟ್ವಿಸ್ಟ್ ಮಾದರಿಯನ್ನು ಒಂದು ವರ್ಷದ ಹಿಂದೆ ಇದೇ ಅಂಕಣದಲ್ಲಿ ವಿಮರ್ಶೆ ಮಾಡಲಾಗಿತ್ತು. ಅದೇನೋ ದುಬಾರಿಯಾಗಿದ್ದು ಪೂರ್ತಿ ಪ್ರಮಾಣದ ಶಕ್ತಿಶಾಲಿಯಾದ ಲ್ಯಾಪ್‌ಟಾಪೇ ಆಗಿತ್ತು. ಈ ಸಲ ಕಡಿಮೆ ಬೆಲೆಯ ಲ್ಯಾಪ್‌ಟಾಪ್ ಆಗಿಯೂ ಟ್ಯಾಬ್ಲೆಟ್ ಆಗಿಯೂ ಬಳಸಬಲ್ಲ ಒಂದು ವಿಂಡೋಸ್ ಸಾಧನದ ಕಡೆಗೆ ಗಮನ ಹರಿಸೋಣ. ಅದುವೇ ನೋಶನ್ ಇಂಕ್ ಅವರ ಕೈನ್ 2-ಇನ್-1 (Notion Ink Cain 2 in 1).
ಗುಣವೈಶಿಷ್ಟ್ಯಗಳು
1.83 ಗಿಗಾಹರ್ಟ್ಸ್ ವೇಗದ ನಾಲ್ಕು ಹೃದಯಗಳ ಪ್ರೊಸೆಸರ್ (Intel® Z3735 Bay Trail), 2 ಗಿಗಾಬೈಟ್ ಪ್ರಾಥಮಿಕ ಮೆಮೊರಿ, 32 ಗಿಗಾಬೈಟ್ ಸಂಗ್ರಹ ಮೆಮೊರಿ, ಅಧಿಕ ಮೆಮೊರಿಗೆ ಮೈಕ್ರೊಎಸ್‌ಡಿ ಕಾರ್ಡ್ ಹಾಕಿಕೊಳ್ಳುವ ಸೌಲಭ್ಯ, 10 ಇಂಚು ಗಾತ್ರದ 1280x800 ರೆಸೊಲೂಶನ್‌ನ ಐಪಿಎಸ್ ಸ್ಪರ್ಶಸಂವೇದಿ ಪರದೆ, 2 ಮೆಗಾಪಿಕ್ಸೆಲ್ ರೆಸೊಲೂಶನ್‌ನ ಎರಡು ಕ್ಯಾಮೆರಾಗಳು, ಅಕ್ಸೆಲೆರೋಮೀಟರ್, 3ಜಿ ಸಿಮ್ ಹಾಕಲು ಹೆಚ್ಚಿಗೆ ಸೌಲಭ್ಯ (ಇದನ್ನು ಪ್ರತ್ಯೇಕವಾಗಿ ಕೊಂಡುಕೊಳ್ಳಬೇಕು), ಮೈಕ್ರೋ ಯುಎಸ್‌ಬಿ, ಯುಎಸ್‌ಬಿ 3, 3.5 ಮಿ.ಮೀ. ಇಯರ್‌ಫೋನ್, ಎಚ್‌ಡಿಎಂಐ ಕಿಂಡಿಗಳು, ವೈಫೈ, 7900 mAh ಶಕ್ತಿಯ ಬ್ಯಾಟರಿ, ಚಾರ್ಜ್ ಮಾಡಲು ಪ್ರತ್ಯೇಕ ಕಿಂಡಿ, 258x172x9.7 ಮಿ.ಮೀ. ಗಾತ್ರ, 630 ಗ್ರಾಂ ತೂಕ, ಜೋಡಿಸಬಲ್ಲ ಪ್ರತ್ಯೇಕಿಸಬಲ್ಲ ಕೀಬೋರ್ಡ್, ವಿಂಡೋಸ್ 8.1 ಕಾರ್ಯಾಚರಣ ವ್ಯವಸ್ಥೆ, ಇತ್ಯಾದಿ. ಇದನ್ನು ಟ್ಯಾಬ್ಲೆಟ್ ಆಗಿಯೂ ಲ್ಯಾಪ್‌ಟಾಪ್ ಆಗಿಯೂ ಬಳಸಬಹುದು. Snapdeal.com ಜಾಲತಾಣ ಮೂಲಕ ₹19,490 ಗೆ ಲಭ್ಯ.
ಇದನ್ನು ವಿನ್ಯಾಸ ಮಾಡಿದ್ದು ನಮ್ಮ ಬೆಂಗಳೂರಿನ ನೋಶನ್ ಇಂಕ್ ಲ್ಯಾಬೊರೇಟರಿಯವರು. ಇದರ ರಚನೆ ಮತ್ತು ವಿನ್ಯಾಸ ಅತ್ಯುತ್ತಮವಾಗಿದ್ದು ಮೊದಲ ನೋಟದಲ್ಲೇ ಮನಸೆಳೆಯುವಂತಿದೆ. ಕೀಲಿಮಣೆಗೆ ಟ್ಯಾಬ್ಲೆಟ್ ಗಣಕವನ್ನು ಜೋಡಿಸಿ ಅದನ್ನು ಲ್ಯಾಪ್‌ಟಾಪ್ ಮಾದರಿಯಲ್ಲಿ ಬಳಸಬಹುದು. ಕೀಲಿಮಣೆಯಲ್ಲಿ ಸ್ಪರ್ಶಸಂವೇದಿ ಪ್ಯಾಡ್ ಕೂಡ ಇದೆ. ಮೌಸ್ ಬಳಸುವವರಿಗಾಗಿ ಓಟಿಜಿ ಕೇಬಲ್ ಮತ್ತು ಒಂದು ನಿಸ್ತಂತು (ವಯರ್‌ಲೆಸ್) ಮೌಸ್ ಜೊತೆಗೆ ನೀಡಿದ್ದಾರೆ. ಕೀಲಿಮಣೆಯ ಹಿಂಭಾಗವನ್ನು ತ್ರಿಕೋನಾಕಾರದಲ್ಲಿ ಮಡಚಿ ಅದನ್ನು ಟ್ಯಾಬ್ಲೆಟ್‌ಗೆ ಆಧಾರವಾಗಿ ನಿಲ್ಲಿಸಲು ಬಳಸಬಹುದು. ಕೆಲಸ ಮುಗಿದಾಗ ಲ್ಯಾಪ್‌ಟಾಪ್ ಮಾದರಿಯಲ್ಲಿ ಮಡಚಬಹುದು. ಹೀಗೆ ಮಡಚಿದಾಗ ಒಂದು ದೊಡ್ಡ ಡೈರಿಯ ಮಾದರಿಯಲ್ಲಿ ಕಂಡುಬರುತ್ತದೆ. ಎಲ್ಲ ಜೋಡಣೆಗಳು ಮತ್ತು ಮಡಚುವಾಗ ಅಂಟಿಕೊಳ್ಳುವ ಜಾಗಗಳಲ್ಲಿ ಅಯಸ್ಕಾಂತಗಳಿವೆ. ಟ್ಯಾಬ್ಲೆಟ್ ಇರಲಿ, ಡೈರಿ ಮಾದರಿಯಲ್ಲಿ ಮಡಚಿದಾಗ ಇರಲಿ, ಕೈಯಲ್ಲಿ ಹಿಡಿದುಕೊಳ್ಳುವ ಅನುಭವ ತುಂಬ ಚೆನ್ನಾಗಿದೆ.
ಇದು ಬಳಸುವುದು ವಿಂಡೋಸ್ 8.1 ಕಾರ್ಯಾಚರಣ ವ್ಯವಸ್ಥೆಯನ್ನು (operating system). ಅದೂ ಟ್ಯಾಬ್ಲೆಟ್‌ಗಳಿಗೆಂದೇ ಪ್ರತ್ಯೇಕ ಬರುವ ಆವೃತ್ತಿಯಲ್ಲ. ಅಂದರೆ ನೀವು ವಿಂಡೋಸ್‌ನಲ್ಲಿ ಬಳಸುವ ಮಾಮೂಲಿ ತಂತ್ರಾಂಶಗಳನ್ನು (ಉದಾ- ಬರಹ) ಇದರಲ್ಲಿ ಬಳಸಬಹುದು. ಆದರೂ ಇದು ಶಕ್ತಿಶಾಲಿಯಾದ ಲ್ಯಾಪ್‌ಟಾಪ್‌ಗೆ ಬದಲಿ ಅಲ್ಲ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಇದರಲ್ಲಿ ಹಾರ್ಡ್‌ಡಿಸ್ಕ್ ಇಲ್ಲ. 32 ಗಿಗಾಬೈಟ್ ಸಂಗ್ರಹ ಶಕ್ತಿ ಇದೆ. ಒಂದು ಮಟ್ಟಿನ ಕೆಲಸಗಳಿಗೆ ಇದು ಸಾಕು. ತುಂಬ ಶಕ್ತಿಯನ್ನು ಬೇಡುವ ಆಟಗಳನ್ನು ಆಡಲು, ಗ್ರಾಫಿಕ್ಸ್ ಕೆಲಸ ಮಾಡಲು ಅಥವಾ ವಿಡಿಯೊ ಎಡಿಟಿಂಗ್ ಮಾಡಲು ಇದನ್ನು ಬಳಸಲು ಸಾಧ್ಯವಿಲ್ಲ.
ಲೇಖನ ತಯಾರಿ, ಮೈಕ್ರೋಸಾಫ್ಟ್ ಆಫೀಸ್ ತಂತ್ರಾಂಶ ಬಳಕೆ, ಇಮೈಲ್, ಜಾಲತಾಣ ವೀಕ್ಷಣೆ, ವಿಡಿಯೊ ವೀಕ್ಷಣೆ –ಇಂತಹ ಕೆಲಸಗಳಿಗೆ ಇದು ಸಾಕು. ಇದಕ್ಕೆ ಹೊರಗಡೆಯಿಂದ ಹಾರ್ಡ್‌ಡಿಸ್ಕ್, ಸಿ.ಡಿ./ಡಿ.ವಿ.ಡಿ. ಡ್ರೈವ್ ಎಲ್ಲ ಜೋಡಿಸಬಹುದು. ನಾನು ಹಾರ್ಡ್‌ಡಿಸ್ಕ್ ಜೋಡಿಸಿ ಅದರಲ್ಲಿದ್ದ ಫೈಲ್‌ಗಳನ್ನು ಬಳಸಿ ಆರಾಮವಾಗಿ ಕಲಸ ಮಾಡಿದ್ದೇನೆ. ಯಾವುದೇ ತೊಂದರೆ ಕಂಡುಬರಲಿಲ್ಲ. ಇದರಲ್ಲಿ ಮೈಕ್ರೊಎಸ್‌ಡಿ ಕಾರ್ಡ್ ಹಾಕಿಕೊಳ್ಳಲೂ ಜಾಗವಿದೆ. ಯುಎಸ್‌ಬಿ ಮೂಲಕವೂ ಅಧಿಕ ಮೆಮೊರಿ ಜೋಡಿಸಿಕೊಳ್ಳಬಹುದು. ಆದುದರಿಂದ ಇದರಲ್ಲಿ ಹಾರ್ಡ್‌ಡಿಸ್ಕ್ ಇಲ್ಲ ಎಂಬುದು ಅಷ್ಟು ದೊಡ್ಡ ಕೊರತೆಯಾಗಬೇಕಾಗಿಲ್ಲ. ವಿಡಿಯೊ ವೀಕ್ಷಣೆ ಅನುಭವ ಚೆನ್ನಾಗಿದೆ.
ಹೈಡೆಫಿನಿಶನ್ ಮಾತ್ರವಲ್ಲ 4k ವಿಡಿಯೊಗಳನ್ನೂ ವೀಕ್ಷಿಸಬಹುದು. ಇದರ ಆಡಿಯೊ ಎಂಜಿನ್ ಚೆನ್ನಾಗಿದೆ. ಇದರ ಜೊತೆ ಯಾವುದೇ ಇಯರ್‌ಫೋನ್ ನೀಡಿಲ್ಲ. ಹಾಗೆ ನೀಡಲು ಇದು ಫೋನಂತೂ ಅಲ್ಲ ತಾನೆ? ಉತ್ತಮ ಗುಣಮಟ್ಟದ ಇಯರ್‌ಫೋನ್ ಜೋಡಿಸಿ ಆಲಿಸಿದಾಗ ಧ್ವನಿಯ ಗುಣಮಟ್ಟ ಉತ್ತಮವಾಗಿಯೇ ಇತ್ತು. ಅಂದರೆ ಉತ್ತಮ ಸಂಗೀತ ಆಲಿಸುವುದು ಅಥವಾ ಸಿನಿಮಾ ವೀಕ್ಷಣೆ ನಿಮ್ಮ ಪ್ರಮುಖ ಅಗತ್ಯಗಳಲ್ಲಿ ಒಂದಾಗಿದ್ದಲ್ಲಿ ಇದನ್ನು ಖಂಡಿತ ಕೊಳ್ಳಬಹುದು. ಇದರ ಬ್ಯಾಟರಿ ಶಕ್ತಿಶಾಲಿಯಾಗಿದೆ. ಸುಮಾರು 7ರಿಂದ 9 ಗಂಟೆ ಬಾಳಿಕೆ ಬರುತ್ತದೆ. ಬ್ಯಾಟರಿ ಚಾರ್ಜ್ ಮಾಡಲು ಚಾರ್ಜರ್ ನೀಡಿದ್ದಾರೆ. ಅದನ್ನು ಜೋಡಿಸಲು ಪ್ರತ್ಯೇಕ ಕಿಂಡಿ ಇದೆ. ಇದರಲ್ಲಿರುವ ಮೈಕ್ರೋಯುಎಸ್‌ಬಿ ಕಿಂಡಿಗೆ ನಿಮ್ಮ ಮನೆಯಲ್ಲಿರುವ ಯಾವುದೇ ಯುಎಸ್‌ಬಿ ಚಾರ್ಜರ್ ಜೋಡಿಸಿಯೂ ಇದನ್ನು ಚಾರ್ಜ್ ಮಾಡಬಹುದು. 
ದುಬಾರಿ ಬೆಲೆಯ ಸಾಧನಗಳಿಗಿಂತ ಇದು ಯಾವ ರೀತಿಯಲ್ಲೂ ಕಡಿಮೆಯಿಲ್ಲ. ಖ್ಯಾತ ಕಂಪೆನಿಗಳ, ಇಷ್ಟೇ ದೊಡ್ಡ ಟ್ಯಾಬ್ಲೆಟ್‌ಗಳಿಗೆ ₹40,000ದ ಆಸುಪಾಸಿನಲ್ಲಿ ಬೆಲೆಯಿದೆ. ಕೀಲಿಮಣೆ ಪ್ರತ್ಯೇಕ ಕೊಳ್ಳಬೇಕು. ಇದರಲ್ಲಿ ಟ್ಯಾಬ್ಲೆಟ್, ಕೀಲಿಮಣೆ, ಮೌಸ್ ಎಲ್ಲ ಸೇರಿ ಕೇವಲ ₹19,490 ಅಂದರೆ ಇದು ನಿಜಕ್ಕೂ ನೀಡುವ ಹಣಕ್ಕೆ ಅತ್ಯುತ್ತಮ ಉತ್ಪನ್ನ ಎಂದು ಖಡಾಖಂಡಿತವಾಗಿ ಹೇಳಬಹುದು. ಅದರಲ್ಲೂ ನೀವು ವಿಂಡೋಸ್ ಆಧಾರಿತ ತಂತ್ರಾಂಶಗಳನ್ನು, ಫಾಂಟ್‌ಗಳನ್ನು ಬಳಸುವವರಾದರೆ ನಿಮಗೆ ಇದು ಖಂಡಿತ ವಾಗಿಯೂ ಉತ್ತಮ ಕೊಳ್ಳುವಿಕೆ ಎನ್ನಬಹುದು. ಕನ್ನಡ ಲೇಖಕರುಗಳೇ ಗಮನಿಸುತ್ತಿದ್ದೀರಾ?
ವಾರದ ಆಪ್ (app)
ಇನ್‌ಬ್ರೌಸರ್

ಇದು ಆಂಡ್ರಾಯಿಡ್ ಫೋನ್ ಮತ್ತು ಟ್ಯಾಬ್ಲೆಟ್‌ಗಳಲ್ಲಿ ಕೆಲಸ ಮಾಡುವ ಕಿರುತಂತ್ರಾಂಶ InBrowser Incognito Browsing (ಆಪ್). ಇದು ಕೂಡ ಒಂದು ಬ್ರೌಸರ್, ಅಂದರೆ ಜಾಲತಾಣ ವೀಕ್ಷಣೆ ಮಾಡಲು ಸಹಾಯ ಮಾಡುವ ಆಪ್. ಬ್ರೌಸರ್ ಆಪ್‌ಗಳು ಗೂಗ್ಲ್ ಪ್ಲೇ ಸ್ಟೋರ್‌ನಲ್ಲಿ ಬೇಕಾದಷ್ಟಿವೆ. ಹಾಗಿರುವಾಗ ಇದರಲ್ಲೇನು ವಿಶೇಷ ಎಂದು ಕೇಳುತ್ತೀರಾ? ಇದರ ವಿಶೇಷವೇನೆಂದರೆ, ಇದು ನೀವು ಭೇಟಿ ನೀಡುವ ಜಾಲತಾಣಗಳನ್ನು ನೆನಪಿಟ್ಟುಕೊಳ್ಳುವುದಿಲ್ಲ. ನೀವು ಏನನ್ನು ಹುಡುಕಾಡುತ್ತೀರೋ ಅದಕ್ಕೆ ಸಂಬಂಧಪಟ್ಟ ಜಾಹೀರಾತುಗಳು ನಿಮಗೆ ಇತರೆ ಆಪ್‌ಗಳಲ್ಲಿ ಬರುವುದನ್ನು ಇದರಿಂದ ತಪ್ಪಿಸಬಹುದು.
ಗ್ಯಾಜೆಟ್ ಸುದ್ದಿ
ಡ್ರೋನ್‌ಗಳಿಗೆ ಭಾರತದಲ್ಲಿ ನಿಷೇಧ

ಚಾಲಕನಿಲ್ಲದ ಚಿಕ್ಕ ಆಕಾಶನೌಕೆ ಅಥವಾ ಚಿಕ್ಕ ಹೆಲಿಕಾಪ್ಟರ್ ಅನ್ನು ಡ್ರೋನ್ ಎನ್ನಬಹುದು. ಇದನ್ನು ದೂರನಿಯಂತ್ರಣ ತಂತ್ರಜ್ಞಾನದ ಮೂಲಕ ಹಾರಾಡಿಸಲಾಗುತ್ತದೆ. ಅಮೆಜಾನ್ ಕಂಪೆನಿ ಇದನ್ನು ಬಳಸಿ ಗ್ರಾಹಕರ ಮನೆ ಬಾಗಿಲಿಗೆ ಅವರು ಕೊಂಡ ವಸ್ತುಗಳನ್ನು ತಲುಪಿಸುವುದಾಗಿ ಹೇಳಿಕೊಂಡಿದೆ. ಅದರ ಬಗ್ಗೆ ಒಂದು ಕಿರುವಿಡಿಯೊ ಕೂಡ ತಯಾರಿಸಿದ್ದಾರೆ. ನೀವು ಒಂದು ಉತ್ಪನ್ನವನ್ನು ಆಜ್ಞೆ ಮಾಡಿದರೆ 30 ನಿಮಿಷಗಳಲ್ಲಿ ಅದು ನಿಮ್ಮನ್ನು ತಲುಪುತ್ತದೆ ಎಂದು ಅಮೆಜಾನ್ ಹೇಳಿಕೊಂಡಿದೆ. ಭಾರತದಲ್ಲಿ ಅದನ್ನು ಪ್ರಯೋಗಾತ್ಮಕವಾಗಿ ಪ್ರಾರಂಭಿಸಲಾಗುವುದು ಎಂದೂ ತಿಳಿಸಿದೆ. ಈಗ ಭಾರತದ ನಾಗರಿಕ ವಾಯುಯಾನ ಪ್ರಾಧಿಕಾರವು ಸಾರ್ವಜನಿಕ ಡ್ರೋನ್ ಬಳಕೆಗೆ ನಿರ್ಬಂಧ ವಿಧಿಸಿದೆ. ಅದರ ಬಗ್ಗೆ ಎಲ್ಲ ನಿಯಮಗಳನ್ನು ಮಾಡಿದ ನಂತರ ಮಾತ್ರ ಡ್ರೋನ್‌ಗಳನ್ನು ಭಾರತದಲ್ಲಿ ಬಳಸಬಹುದು ಎಂದು ಅದು ಸೂಚಿಸಿದೆ.
ಗ್ಯಾಜೆಟ್ ತರ್ಲೆ
ನೀವು ಅಮೆಜಾನ್ ಜಾಲತಾಣದಿಂದ ಒಂದು ಡ್ರೋನ್ ಅನ್ನು ಕೊಂಡುಕೊಂಡರೆ ಅದನ್ನು ಅವರು ಕೊರಿಯರ್ ಮೂಲಕ ಕಳುಹಿಸಿಕೊಡುತ್ತಾರಾ ಅಥವಾ ಡ್ರೋನ್ ತಾನಾಗಿಯೇ ಹಾರಿಕೊಂಡು ನಿಮ್ಮ ಮನೆಗೆ ಬರುತ್ತದೋ?
ಗ್ಯಾಜೆಟ್ ಸಲಹೆ
ಶರತ್ ಅವರ ಪ್ರಶ್ನೆ: ನನಗೆ ಒಂದು ಉತ್ತಮ ಆಂಡ್ರಾಯಿಡ್ ಮೊಬೈಲ್ ಟ್ರ್ಯಾಕರ್ ಆಪ್ ಬೇಕು. ಯಾವುದು ಬಳಸಬಹುದು?
ಉ: ಇದೇ ಅಂಕಣದಲ್ಲಿ ತುಂಬ ಹಿಂದೆಯೇ ಸೂಚಿಸಿದ Prey ಬಳಸಬಹುದು.

ಮೋಂಬತ್ತಿಯೆಂಬ ಪ್ರಯೋಗಾಲಯ

ಸಾಮಗ್ರಿಗಳು: ಮೋಂಬತ್ತಿ, ಬೆಂಕಿ ಪೆಟ್ಟಿಗೆ, ಚಿಮ್ಮಟ.
ವಿಧಾನ: 
1) ಒಂದು ಹೊಸ ಮೋಂಬತ್ತಿಯನ್ನು ತೆಗೆದುಕೊಂಡು ಅದನ್ನು ಬೆಂಕಿಕಡ್ಡಿಯಿಂದ ಉರಿಸಿರಿ.
2) ಕನಿಷ್ಟ ಐದು ನಿಮಿಷ ಮೋಂಬತ್ತಿ ಉರಿಯುವುದನ್ನು ಸರಿಯಾಗಿ ವೀಕ್ಷಿಸಿರಿ.
3) ಐದು ನಿಮಿಷಗಳ ನಂತರ ಚಿಮ್ಮಟದ ಸಹಾಯದಿಂದ ಮೋಂಬತ್ತಿಯ ಉರಿಯುತ್ತಿರುವ ಬತ್ತಿಯ (ದಾರ) ತಳಭಾಗನ್ನು ಗಟ್ಟಿಯಾಗಿ ಚಿವುಟಿ ಹಿಡಿಯಿರಿ.
ಪ್ರಶ್ನೆ:
1) ಮೋಂಬತ್ತಿಯ ಮೇಣವನ್ನಷ್ಟೇ ತೆಗೆದುಕೊಂಡು ಅದನ್ನು ಉರಿಸಿದರೆ ಅದು ಉರಿಯುತ್ತಿದೆಯೇ? ಯಾಕೆ ?
2) ಕೇವಲ ಮೋಂಬತ್ತಿಯ ಬತ್ತಿ (ದಾರ)ಯನ್ನು ಉರಿಸಿದರೆ ಅದು ಉರಿಯುತ್ತಿದೆಯೇ? ಯಾಕೆ ?
3) ಚಿಮ್ಮಟದ ಸಹಾಯದಿಂದ ಮೋಂಬತ್ತಿಯ ‘ಬತ್ತಿ’ಯನ್ನು ಗಟ್ಟಿಯಾಗಿ ಚಿವುಟಿ ಬಿಟ್ಟಾಗ ಮೋಂಬತ್ತಿ
ಉರಿಯುತ್ತದೆಯೇ. ಯಾಕೆ ?
4) ಮೋಂಬತ್ತಿ ಉರಿಯುವ ಕ್ರಿಯೆಯನ್ನು ವಿವರಿಸಿರಿ.
ಉತ್ತರ:
1) ಮೋಂಬತ್ತಿಯ ಮೇಣವನ್ನಷ್ಟೇ ತೆಗೆದುಕೊಂಡು ಉರಿಸಿದರೆ ಅದು ಉರಿಯುವುದಿಲ್ಲ.
2) ಮೋಂಬತ್ತಿಯ ಬತ್ತಿಯನ್ನಷ್ಟೇ ತೆಗೆದುಕೊಂಡು ಉರಿಸಿದರೆ ಅದು ಉರಿಯುವುದಿಲ್ಲ. ಅದು ಸುಟ್ಟು ಹೋಗುತ್ತದೆ.
3) ಚಿಮ್ಮಟದ ಸಹಾಯದಿಂದ ಬತ್ತಿಯನ್ನು ಹಿಚುಕಿದರೆ ಮೋಂಬತ್ತಿ ನಂದುತ್ತದೆ. ಯಾಕೆಂದರೆ ಮೋಂಬತ್ತಿ ಉರಿಯುವಾಗ ಅದು ಘನ ಮೇಣವನ್ನು ಕರಗಿಸುತ್ತದೆ. ದ್ರವ ಮೇಣವು ಬತ್ತಿಯ  ಮುಖಾಂತರ ಲೋಮನಾಳ ತತ್ವದಿಂದ ಮೇಲೆ ಏರಿ ಜ್ವಾಲೆಯ ಸಂಪರ್ಕದಿಂದ ಕಾಯ್ದು ಮೇಣ ಆವಿಯಾಗಿ, ಈ ಬಿಸಿಮೇಣದ ಆವಿ ಬತ್ತಿಯ ಸುತ್ತಲೂ ಉರಿಯುತ್ತದೆ. ಉರಿಯುತ್ತಿರುವ ಬತ್ತಿಯ ತಳಭಾಗವನ್ನು ಹಿಚುಕಿದಾಗ ದ್ರವ ಮೇಣವು ಮೇಲೇರುವುದು ನಿಂತು ಜ್ವಾಲೆ ನಂದುತ್ತದೆ.
4)  ಮೋಂಬತ್ತಿಯ ಬತ್ತಿಗೆ ಬೆಂಕಿ ಕಡ್ಡಿಯಿಂದ ಬೆಂಕಿ ಹಚ್ಚಿದಾಗ ಬತ್ತಿಯು ಲಗುಬಗೆಯಿಂದ ಉರಿಯುತ್ತ, ‘ಬತ್ತಿ’ಯ ಕೆಳಗೆ ಚಲಿಸುತ್ತದೆ. ಅದು ಉರಿಯುವುದು ಸ್ವಲ್ಪ ನಿಲ್ಲುತ್ತದೆ ಹಾಗೂ ಅದರ ಸುತ್ತಲೂ ಚಿಕ್ಕ ಜ್ವಾಲೆ ಕಾಣಿಸುತ್ತದೆ. ಆ ನಂತರ ಅದು ದೊಡ್ಡದಾಗಿ ಸ್ಥಿರವಾಗಿ ಉರಿಯುತ್ತದೆ. ‘ಬತ್ತಿ’ಯ ಜ್ವಾಲೆ, ಕರಗಿದ ಹಾಗೂ ಘನ ಮೇಣದ ಮಧ್ಯ ನೇರವಾದ ಸಂಪರ್ಕವಿಲ್ಲ. ಜ್ವಾಲೆ ಹಾಗೂ ಕರಗಿದ ಮೇಣದ ಮಧ್ಯ ‘ಬತ್ತಿ’ಯ ಸ್ವಲ್ಪ ಭಾಗ ಉರಿಯುತ್ತಿಲ್ಲ. ಜ್ವಾಲೆಯು ಕೆಳಮುಖವಾಗಿ ಚಲಿಸಿ ಘನ ಮತ್ತು ದ್ರವ ಮೇಣವನ್ನು ಸುಡುವುದಿಲ್ಲ. ಕರಗಿದ ಮೇಣದ ಸುತ್ತಲು ಘನ ಮೇಣವನ್ನು  ಗಮನಿಸಿ. ಮೋಂಬತ್ತಿ ಜ್ವಾಲೆಯಲ್ಲಿ ವಿವಿಧ ಬಣ್ಣಗಳನ್ನು ಕಾಣುವಿರಲ್ಲವೇ?

ಬಯೊಡೇಟಾ ಒಂದು ಸ್ಥೂಲ ಪರಿಚಯ

ಕೆಲಸಕ್ಕೆ ಅರ್ಜಿ ಸಲ್ಲಿಸುವಾಗ ಒಂದು ಒಳ್ಳೆಯ cover letterನ ಜೊತೆಯಲ್ಲಿ, ನಮ್ಮ ಬಗ್ಗೆ ಒಂದು ಸಂಕ್ಷಿಪ್ತ ಮಾಹಿತಿಯನ್ನು ಕೊಡುವಂತಹ Bio-dataವನ್ನು ಕಳುಹಿಸುವುದು ಬಹು ಮುಖ್ಯ.
Bio ಎಂದರೆ ಸ್ವ (self) data ಎಂದರೆ ‘ಮಾಹಿತಿ’ ಎಂದರ್ಥ. Bio-dataವನ್ನು ಅಮೆರಿಕನ್ ಇಂಗ್ಲಿಷ್‌ನಲ್ಲಿ resume (ರೆಸ್ಯೂಮೆ) ಎಂದು, ಬ್ರಿಟಿಷ್ ಇಂಗ್ಲಿಷ್‌ನಲ್ಲಿ CV (Curriculum Vitae) ಎಂದು ಕರೆಯುತ್ತಾರೆ. ಸಾಮಾನ್ಯವಾಗಿ, resume ನಲ್ಲಿರುವ ನಮ್ಮ ಮಾಹಿತಿಗಳು ಆದಷ್ಟು ಸಂಕ್ಷಿಪ್ತವಾಗಿದ್ದು, ಒಂದು ಪುಟದ ಮಿತಿಯಲ್ಲಿರಬೇಕು. ಆದರೆ CVಯಲ್ಲಿ, ನಾವು ಕೊಡುವ ಮಾಹಿತಿಗಳ ಸಂಪೂರ್ಣ ವಿವರ ಕೂಲಂಕಷವಾಗಿದ್ದು, ಇಷ್ಟೇ ಪುಟಗಳಿರಬೇಕೆಂಬ ನಿಬಂಧನೆಯಿಲ್ಲ.
ಇನ್ನೂ ನಿಖರವಾಗಿ ಹೇಳಬೇಕೆಂದರೆ, CVಯಲ್ಲಿ, ನಮ್ಮ ವಿದ್ಯಾರ್ಹತೆಗೆ ಸಂಬಂಧಿಸಿದ ವಿವರಗಳನ್ನು (academic details) ತಿಳಿಸಬೇಕು. ಹಾಗಾಗಿ, education ಮತ್ತು researchಗೆ ಸಂಬಂಧಪಟ್ಟ ಉದ್ಯೋಗಗಳಿಗೆ (teacher, lecturer, research scholar, scientist...) CVಯನ್ನೂ, ಇತರ ಉದ್ಯೋಗ ಗಳಿಗೆ (police, clerk, typist, receptionist, IT company ಯಲ್ಲಿನ ಕೆಲಸಗಳು....) resume  ಅನ್ನೊ ಕಳುಹಿಸುವುದು ಸೂಕ್ತ.
Bio-data ಒಳ್ಳೆಯ ಕೆಲಸ ಪಡೆಯವುದಕ್ಕೆ ಇರುವಂತಹ ಪ್ರಮುಖ ಸಾಧನ. ಆದ್ದರಿಂದ, ಅದರ ರಚನೆ ಹಾಗೂ ಸ್ವರೂಪದ ಬಗ್ಗೆ ಎಚ್ಚರವಹಿಸಬೇಕು. Bio-dataದಲ್ಲಿ ಸಾಮಾನ್ಯವಾಗಿ ನಾವು ಕೊಡಬೇಕಾದ ಮಾಹಿತಿಗಳ ಪಟ್ಟಿಯನ್ನು ಗಮನಿಸಿ:
Name / ಹೆಸರು:
Age / ವಯಸ್ಸು:
Date of Birth / ಜನ್ಮ ದಿನಾಂಕ:
Address for communication / ವಿಳಾಸ:
Phone/Mobile / ದೂರವಾಣಿ, ಮೊಬೈಲ್‌ ಸಂಖ್ಯೆ:
Email/ ಇಮೇಲ್‌ ವಿಳಾಸ:
Career Objective / ವೃತ್ತಿಪರ ನಿಲುವು:
Educational Qualifications/ ಶೈಕ್ಷಣಿಕ ಅರ್ಹತೆ:
Work Experience / ವೃತ್ತಿ ಅನುಭವ
Achievements and Extra Curricular Activities/ ಸಾಧನೆ, ಪಠ್ಯೇತರ ಚಟುವಟಿಕೆ:
About Yourself / ಸ್ವ ವಿವರ:
Personal Information/ ವೈಯಕ್ತಿಕ ಮಾಹಿತಿ:
Father’s Name/ ತಂದೆಯ ಹೆಸರು:
Mother’s Name/ ತಾಯಿಯ ಹೆಸರು:
Hobbies/Interests/ ಹವ್ಯಾಸ/ ಆಸಕ್ತಿ:
Marital Status: ವಿವಾಹ ಮಾಹಿತಿ:
Languages known/ ಭಾಷಾ ಜ್ಞಾನ:
Place/ ಸ್ಥಳ:
References will be provided on Request/ ಕೋರಿಕೆಯ ಮೇರೆಗೆ ಶಿಫಾರಸ್ಸು ನೀಡಲಾಗುವುದು.
ಇಲ್ಲಿ career objectiveಎಂದು ಇರುವ ಜಾಗದಲ್ಲಿ ನಮಗೆ ಯಾವ ಉದ್ಯೋಗದ ಬಗ್ಗೆ ಒಲವಿದೆ ಎಂಬುದನ್ನು ಸೂಚ್ಯವಾಗಿ ವಿವರಿಸಬೇಕು.
Educational Qualifications ಬಗ್ಗೆ ಮಾಹಿತಿ ನೀಡುವಾಗ, ವರ್ತಮಾನದ ವಿವರಗಳನ್ನು ಮೊದಲು ನೀಡಿ ಅನಂತರ ಹಿಂದಿನ ವರ್ಷದ ವಿವರಗಳನ್ನು ನೀಡುತ್ತಾ ಹೋಗಬೇಕು. (ಉದಾ: Ph. D., M. Phil., M.A., B.A., -ಈ ಕ್ರಮದಲ್ಲಿರಬೇಕು)
About Yourselfನ ಜಾಗದಲ್ಲಿ, ಉದ್ಯೋಗಕ್ಕೆ ಸಂಬಂಧಿಸಿದಂತೆ ನಮ್ಮಲ್ಲಿರುವ ವಿಶೇಷ ಶಕ್ತಿ, ಸಾಮರ್ಥ್ಯಗಳನ್ನು ಪರಿಚಯಿಸಬೇಕು. ಇಲ್ಲಿ ನಮ್ಮ ಬಗ್ಗೆ ನಾವೇ ಬಡಾಯಿ ಕೊಚ್ಚಿಕೊಳ್ಳುವುದನ್ನು ಹಾಗೂ ಅನಗತ್ಯ ಹಿಂಜರಿಕೆಯನ್ನು ತೋರಬಾರದು.
Bio-dataದ ಕೊನೆಯಲ್ಲಿ ಸಹಿ ಇರಬಾರದೆಂಬುದು ಒಂದು ಮುಖ್ಯ ನಿಯಮ.
ಕೊನೆಯದಾಗಿ,MS wordನಲ್ಲಿ ತಯಾರಿಸಿದಂತ Bio-dataದ print out ತೆಗೆಯುವಾಗ ಕೆಲವು ನಿರ್ದಿಷ್ಟ ಅಂಶಗಳನ್ನು ನೆನಪಿಡಬೇಕು. ಸಾಮಾನ್ಯವಾಗಿ, sstyle:Times New Roman, Font Size : 12, Line Space : 1.5, ಹಾಗೂ A4 ಅಳತೆಯ ಹಾಳೆಯಲ್ಲಿ ಮೂಡಿಬರುವ Bio-data ಅಂದವಾಗಿಯೂ, ಚೊಕ್ಕವಾಗಿಯೂ ಇರುತ್ತದೆ.
Bio-dataದ ಒಂದು ಮಾದರಿ
ನಾವು ಉದ್ಯೋಗವೊಂದನ್ನು ಅರಸಿ ಯಶಸ್ವಿಯಾಗಿ ಪಡೆದುಕೊಳ್ಳುವುದು ಹಲವು ಹಂತಗಳಲ್ಲಿರುವ ಒಂದು ಪ್ರಕ್ರಿಯೆ. Cover letterನ ನಂತರ ಈ ಪ್ರಕ್ರಿಯೆಯ ಮುಖ್ಯ ಭಾಗ ಒಂದು ಪರಿಣಾಮಕಾರಿ Bio-dataವನ್ನು ರೂಪಿಸುವುದು. ಹಿಂದಿನ ಭಾಗದ ಸ್ಥೂಲ ಪರಿಚಯ ಹಿನ್ನೆಲೆಯಲ್ಲಿ, ಈ ಕೆಳಗಿನ Bio-dataದ ಮಾದರಿಯನ್ನು ಪರಿಶೀಲಿಸಿ ಮನದಟ್ಟು ಮಾಡಿಕೊಳ್ಳಿ. ಇಲ್ಲೊಂದು ಉದಾಹರಣೆ ನೀಡಲಾಗಿದೆ.
Bio-dataದ ಕೊನೆಯಲ್ಲಿ ಬರುವ Referencesಎಂದರೆ, ಯಾರಾದರೂ ಇಬ್ಬರು ಪ್ರಮುಖ ವ್ಯಕ್ತಿಗಳು, ಅಭ್ಯರ್ಥಿಯ ಪರಿಚಯವಿದೆ ಎಂದು ಹೇಳುವ ಅನುಮೋದನೆ. ಇದರಿಂದ, ಅಭ್ಯರ್ಥಿಯ credibility (ವಿಶ್ವಾಸಾರ್ಹತೆ) ಹೆಚ್ಚುತ್ತದೆ.
ಮಾಹಿತಿಗೆ: 98452 13417 
2014 ಆಗು–ಹೋಗು

ಸೀಮಾಂಧ್ರದ ರಾಜಧಾನಿಯಾಗಿ ವಿಜಯವಾಡ

ಆ. 1: ಈಸ್ಟ್‌ ಬೆಂಗಾಲ್‌ ಕ್ಲಬ್‌ ನೀಡುವ 2014ನೇ ಸಾಲಿನ ‘ಭಾರತ್‌ ಗೌರವ್‌’ ಪ್ರಶಸ್ತಿಯನ್ನು ಬಚೇಂದ್ರಿ ಪಾಲ್‌ ಅವರಿಗೆ ನೀಡಲಾಯಿತು. ಬಚೇಂದ್ರಿ ಪಾಲ್‌ ಮೌಂಟ್‌ ಎವರೆಸ್ಟ್‌ ಶಿಖರ ಹತ್ತಿದ ಭಾರತದ ಮೊದಲ ಮಹಿಳೆ.
ಆ. 2: 2014ನೇ ಸಾಲಿನ ರಾಜೀವ್ ಗಾಂಧಿ ಸದ್ಭಾವನ ಪ್ರಶಸ್ತಿಗೆ ಹಿರಿಯ ಸಾಮಾಜಿಕ ಸೇವಾಕರ್ತ ಮುಜಾಫರ್‌ ಆಲಿ ಆಯ್ಕೆಯಾದರು. ಆಲಿ ಅವರು ಕೋಮುವಾದದ ವಿರುದ್ಧ ಹೋರಾಟ ಮಾಡುತ್ತಿದ್ದಾರೆ.
ಆ. 3: ಗ್ಲಾಸ್ಗೊದಲ್ಲಿ ನಡೆದ ಕಾಮನ್‌ವೆಲ್ತ್‌ ಕ್ರೀಡಾಕೂಟಕ್ಕೆ ತೆರೆ ಬಿದ್ದಿತು. ಈ ಟೂರ್ನಿಯಲ್ಲಿ ಭಾರತ ಒಟ್ಟು 64 ಪದಕಗಳನ್ನು ಗೆಲ್ಲುವ ಮೂಲಕ ಐದನೇ ಸ್ಥಾನ ಪಡೆಯಿತು.
ಆ. 3: ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಪಿ.ಕಶ್ಯಪ್‌ ಪುರುಷರ ಸಿಂಗಲ್ಸ್‌ ಬ್ಯಾಡ್ಮಿಂಟನ್‌ ಪಂದ್ಯದಲ್ಲಿ ಚಿನ್ನದ ಪದಕ ಗೆದ್ದರು. ಕಾಮನ್‌ವೆಲ್ತ್‌ ಕ್ರೀಡಾಕೂಟಗಳಲ್ಲಿ ಬ್ಯಾಡ್ಮಿಂಟನ್‌ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಮೂರನೇ ಆಟಗಾರ ಎಂಬ ಹೆಗ್ಗಳಿಕೆ ಕಶ್ಯಪ್‌ ಅವರದ್ದು.
ಆ. 4: ಮಾಜಿ ವಿದೇಶಾಂಗ ಅಧಿಕಾರಿ ಅರವಿಂದ್‌ ಗುಪ್ತ ಅವರನ್ನು ಕೇಂದ್ರ ಸರ್ಕಾರ ರಾಷ್ಟ್ರೀಯ ಭದ್ರತಾ ಉಪ ಸಲಹೆಗಾರರನ್ನಾಗಿ ನೇಮಕ ಮಾಡಿತು. ಗುಪ್ತ ಈ ಹಿಂದೆ ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ ಮತ್ತು ಮಧ್ಯಪ್ರಾಚ್ಯ ದೇಶಗಳಲ್ಲಿ ರಾಯಭಾರಿಯಾಗಿ ಕಾರ್ಯನಿರ್ವಹಿಸಿದ್ದರು.
ಆ. 5: ಖ್ಯಾತ ಕಾರ್ಟೂನಿಸ್ಟ್‌ ‘ಪ್ರಾಣ್‌’ ನಿಧನರಾದರು. ಅವರು ರಚಿಸಿದ ಧಾರಾವಾಹಿ (ಕಾರ್ಟೂನ್‌) ‘ಚಾಚಾ ಚೌಧರಿ’ ಭಾರಿ ಜನಪ್ರಿಯತೆ ಪಡೆದಿತ್ತು.
ಆ. 6: ಹೂಡಿಕೆ ಮತ್ತು ವಾಣಿಜ್ಯ ವಿಷಯಗಳಿಗೆ ಸಂಬಂಧಿಸಿದಂತೆ ಸೆಕ್ಯೂರಿಟಿಸ್‌ ಲಾ ವಿಧೇಯಕವನ್ನು ಲೋಕಸಭೆಯಲ್ಲಿ ಧ್ವನಿ ಮತದ ಮೂಲಕ ಅಂಗೀಕರಿಸಲಾಯಿತು.
ಆ. 7; ಮಾಜಿ ಕ್ರಿಕೆಟಿಗ ಕಪಿಲ್‌ದೇವ್‌ ಅವರನ್ನು ಅರ್ಜುನ ಪ್ರಶಸ್ತಿಯ ಆಯ್ಕೆ ಸಮಿತಿಯ ಮುಖ್ಯಸ್ಥರನ್ನಾಗಿ ಮತ್ತು ಮಾಜಿ ಹಾಕಿ ಆಟಗಾರ ಅಜಿತ್‌ಪಾಲ್‌ ಸಿಂಗ್‌ ಅವರನ್ನು ‘ದ್ರೋಣಾಚಾರ್ಯ ಪ್ರಶಸ್ತಿಯ ಆಯ್ಕೆ ಸಮಿತಿಯ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಯಿತು.
ಆ. 8: ಕಾರ್ಖಾನೆಗಳು ಸಿಲಿಕಾನ್‌ ಬಳಸಿದ ನಂತರ ಅದರ ತ್ಯಾಜ್ಯವನ್ನು ಏನು ಮಾಡುತ್ತವೇ ಎಂಬುದನ್ನು ತಿಳಿಯಲು ಉತ್ತರಖಂಡ ಸರ್ಕಾರ ಹಿರಿಯ ವಿಜ್ಞಾನಿ ಎಸ್‌. ರಾಜಾ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿತು.
ಆ. 10: ಪೊಲ್ಯಾಂಡ್‌ನಲ್ಲಿ  ನಡೆದ ವಿಶ್ವಕಪ್‌ ಅರ್ಚರಿಯಲ್ಲಿ ಭಾರತದ ಮಹಿಳಾ ತಂಡ ಚಿನ್ನದ ಪದಕವನ್ನು ಗೆದ್ದಿತು. ದೀಪಿಕಾ ಕುಮಾರಿ ಈ ತಂಡದ ನಾಯಕಿಯಾಗಿದ್ದರು.
ಆ. 11: ಭಾರತದ ಮೊದಲ ಲೋಕಸಭೆಗೆ ಆಯ್ಕೆಯಾಗಿದ್ದ ಹಿರಿಯ ರಾಜಕಾರಣಿ ರೇಷ್ಮಾಲಾಲ್‌ ಜಂಗಡೆ ನಿಧನರಾದರು. ಮೂಲತಃ ಮಧ್ಯಪ್ರದೇಶ ರಾಜ್ಯದವರಾದ ಇವರು ಕಾಂಗ್ರೆಸ್‌ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು.
ಆ. 12: ರಾಜ್ಯದ ಜನಪ್ರಿಯ ಜಾನಪದ ಕಲಾವಿದೆ ಬುರ್ರಾ ಕಥಾ ಈರಮ್ಮ ನಿಧನರಾದರು. ಇವರು ಬಳ್ಳಾರಿ ಜಿಲ್ಲೆಯವರು.
ಆ.12: ಅತ್ಯುತ್ತಮ ಸಂಸದೀಯ ಪಟು ಪ್ರಶಸ್ತಿಗೆ ಬಿಜೆಪಿಯ ಹಿರಿಯ ನಾಯಕ ಅರುಣ್‌ ಜೇಟ್ಲಿ, ಕಾಂಗ್ರೆಸ್‌ನ ಕರಣ್‌ ಸಿಂಗ್‌ ಮತ್ತು ಸಂಯುಕ್ತ ಜನತಾದಳ ಪಕ್ಷದ ಶರದ್‌ ಯಾದವ್‌ ಅವರನ್ನು ಆಯ್ಕೆ ಮಾಡಲಾಯಿತು. ಈ ಪ್ರಶಸ್ತಿಯನ್ನು ರಾಷ್ಟ್ರಪತಿ ನೀಡುತ್ತಾರೆ.
ಆ. 13: ಭಾರತೀಯ ರಿಸರ್ವ್‌ ಬ್ಯಾಂಕ್‌ನ ಮಾಜಿ ಗೌರ್ನರ್‌ ಭೀಮಲ್‌ ಜಲನ್‌ ಅವರನ್ನು ‘ವೆಚ್ಚ ವ್ಯವಸ್ಥಾಪನ ಮಂಡಳಿ’ಯ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಯಿತು.
ಆ.13: ಲೋಕಸಭೆಯ ಡೆಪ್ಯೂಟಿ  ಸ್ಪೀಕರ್‌ ಆಗಿ ಎಂ. ತಂಬಿದೊರೈ ಆಯ್ಕೆಯಾಗಿದ್ದಾರೆ. ಇವರು ಎಐಎಡಿಎಂಕೆ ಪಕ್ಷದ ಸಂಸದರು.
ಆ.13: ಸೀಮಾಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ವಿಜಯವಾಡ ಆಂಧ್ರದ ರಾಜಧಾನಿಯಾಗಲಿದೆ ಎಂದು ಪ್ರಕಟಿಸಿದರು.
ಆ.14: ಭಾರತವು ಮೊದಲ ಭಾರಿಗೆ 2015ರ ಪ್ಯಾರಾ–ಗ್ಲೈಡಿಂಗ್‌ ವಿಶ್ವಕಪ್‌ನ ಆತಿಥ್ಯ ವಹಿಸಲಿದೆ. ಇದು ಹಿಮಾಚಲ ಪ್ರದೇಶದಲ್ಲಿ ನಡೆಯಲಿದೆ.
ಆ. 14: ಇರಾಕ್‌ ಪ್ರಧಾನಿ ನೂರಿ ಅಲ್‌–ಮಲಿಕಿ ಅವರು ರಾಜೀನಾಮೆ ನೀಡಿದರು.
ಆ. 15: ಕೇಂದ್ರ ಸರ್ಕಾರ 60 ವರ್ಷಕ್ಕೂ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಪಿಂಚಣಿ ನೀಡುವ ಭೀಮಾ ಯೋಜನೆಯನ್ನು ಅನುಷ್ಠಾನಗೊಳಿಸುವುದಾಗಿ ಪ್ರಕಟಿಸಿತು.
ಆ.16: ಕೇಂದ್ರ ಲೋಕಸೇವಾ ಆಯೋಗದ ಅಧ್ಯಕ್ಷರಾಗಿ ರಜನಿ ರಾಜ್ದಾನ್‌ ಅವರನ್ನು ನೇಮಕ ಮಾಡಲಾಯಿತು.
ಆ.17: ಚಿಂಚಿನಾಟಿ ಟೆನಿಸ್‌ ಓಪನ್‌ ಟೂರ್ನಿಯ ಪುರುಷರ ಸಿಂಗಲ್ಸ್‌ ಪಂದ್ಯದಲ್ಲಿ ರೋಜರ್‌ ಫೇಡರರ್‌ ಚಿಂಚಿನಾಟಿ ಟ್ರೋಫಿ ಗೆದ್ದರು. ಆ ಮೂಲಕ ಅವರು ಒಟ್ಟು 80 ಅಂತರರಾಷ್ಟ್ರೀಯ ಟ್ರೋಫಿಗಳನ್ನು ಗೆದ್ದಂತಾಗಿದೆ.
ಆ. 18: ಬ್ರೆಜಿಲ್‌ನ ಅಧ್ಯಕ್ಷೀಯ ಅಭ್ಯರ್ಥಿ ಎಡ್ವರ್ಡೊ ಕಾಂಪೊಸ್‌ ನಿಗೂಢವಾಗಿ ಸಾವನ್ನಪ್ಪಿರುವ ವಿಷಯವನ್ನು ಬ್ರೆಜಿಲ್‌ ಸರ್ಕಾರ ಖಚಿತಪಡಿಸಿತು. ಕಾಂಪೊಸ್‌ ಆಗಸ್ಟ್‌ 13ರಂದು ಮೃತಪಟ್ಟಿದ್ದರು.
ಆ. 19: ಮಾಜಿ ಕ್ರಿಕೆಟಿಗ ರವಿಶಾಸ್ತ್ರಿ ಅವರನ್ನು ಭಾರತೀಯ ಕ್ರಿಕೆಟ್‌ ತಂಡದ ನಿರ್ದೇಶಕರನ್ನಾಗಿ ನೇಮಕ ಮಾಡಲಾಯಿತು.
ಆ. 22; ಕರ್ನಾಟಕದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಯು.ಆರ್‌. ಅನಂತಮೂರ್ತಿ ನಿಧನರಾದರು. ಅವರಿಗೆ 82 ವರ್ಷ ವಯಸ್ಸಾಗಿತ್ತು. ಅವರ ಸಂಸ್ಕಾರ ಕಾದಂಬರಿ 15ಕ್ಕೂ ಹೆಚ್ಚು ಭಾರತೀಯ ಮತ್ತು ವಿದೇಶಿ ಭಾಷೆಗಳಿಗೆ ಅನುವಾದಗೊಂಡಿದೆ.
ಆ.24: ಗಾಂಧಿ ಚಿತ್ರವನ್ನು ನಿರ್ಮಾಣ ಮಾಡಿದ್ದ ರಿಚರ್ಡ್‌ ಅಟೆನ್‌ಬರ್ಗ್‌ ಅವರು ಲಂಡನ್‌ನಲ್ಲಿ ನಿಧನರಾದರು. ಈ ಚಿತ್ರ ಆಸ್ಕರ್‌ ಪ್ರಶಸ್ತಿಯನ್ನು ಪಡೆದಿತ್ತು.
ಆ. 25: ವಿಶ್ವದಲ್ಲಿಯೇ ಮೊದಲ ಬಳಕೆಯ ತಾಮ್ರ ಲೋಹವು ಇಸ್ರೇಲ್‌ ದೇಶದಲ್ಲಿ ಪತ್ತೆಯಾಗಿದೆ. ಇಲ್ಲಿಯೇ ಮಾನವನ ಮೊದಲ ನಾಗರಿಕತೆ ಆರಂಭವಾಗಿರಬಹುದು ಎಂದು ಇತಿಹಾಸ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಆ. 26: ಕರ್ನಾಟಕದ ರಾಜ್ಯಪಾಲರನ್ನಾಗಿ ವಜುಬಾಯಿ ವಾಲ ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿತು.
ಆ 28: ಕೇಂದ್ರ ಸರ್ಕಾರ ಡಾಟ್‌ ಕಾಮ್‌, ಡಾಟ್‌ ಇನ್‌ ಡೊಮೈನ್‌ಗಳ ಮಾದರಿಯಂತೆ ‘ಡಾಟ್‌ ಭಾರತ್‌’ ಡೊಮೈನ್‌ ಅನ್ನು ಲೋಕಾರ್ಪಣೆ ಮಾಡಿತು. ಇದು ದೇವನಾಗರಿ ಭಾಷೆಯಲ್ಲಿ ಸಹ ಲಭ್ಯವಿದೆ.


ಸ್ಪಷ್ಟ ಭಾಷೆ, ನಿಖರ ನಿಲುವು

ಸಂದರ್ಶನದಲ್ಲಿ ಕೇಳಬಹುದಾದ ನಮ್ಮ ಹಿಂದಿನ ವೃತ್ತಿಗೆ ಸಂಬಂಧಿಸಿದ ಕೆಲವು ಪ್ರಶ್ನೆಗಳು ಹಾಗೂ ಅವುಗಳಿಗೆ ಕೊಡಬಹುದಾದ ಸೂಕ್ತ ಉತ್ತರಗಳನ್ನು ಗಮನಿಸಿ:
1.Tell me briefly about your previous work experience.
ನಮ್ಮ ಹಿಂದಿನ ಕೆಲಸದ ಬಗ್ಗೆಯಾಗಲೀ ಅಥವಾ ಅದರ employerನ ಬಗ್ಗೆಯಾಗಲೀ ಮಾತನಾಡುವಾಗ, ಎಂದಿಗೂ ನಕಾರಾತ್ಮಕವಾದ ಅಭಿಪ್ರಾಯಗಳನ್ನು ಸೂಚಿಸಬಾರದು. ಒಂದು ಕೆಲಸ ಬಿಟ್ಟು ಮತ್ತೊಂದು ಕೆಲಸಕ್ಕೆ ಸೇರುವಾಗ, employerಗೆ, ನಾವು ಹಿಂದಿನ ಕೆಲಸವನ್ನು ಬಿಟ್ಟ ಕಾರಣಗಳ ಬಗ್ಗೆ ವಿಶೇಷ ಆಸಕ್ತಿ ಇರುತ್ತದೆ. ಏಕೆಂದರೆ ಈ ಒಂದು ವಿಷಯದಿಂದಲೇ ಸೂಕ್ಷ್ಮಮತಿಯಾದ employer ನಮ್ಮ ವೃತ್ತಿ ವ್ಯಕ್ತಿತ್ವದ ಬಗ್ಗೆ ಬಹುಮುಖ್ಯ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ. ಆದ್ದರಿಂದ, ನಮಗೆ ನಮ್ಮ ಪ್ರತಿಭೆಯನ್ನು ತೋರಲು ಹಾಗೂ ಬೆಳೆಸಿಕೊಳ್ಳಲು ಅಲ್ಲಿ ಸಿಕ್ಕ ಅವಕಾಶಗಳ ಬಗ್ಗೆ ಹಾಗೂ ಅದರಿಂದ ಆದ ನಮ್ಮ ಸ್ವಂತ ಹಾಗೂ ಸಂಸ್ಥೆಯ ಬೆಳವಣಿಗೆಯ ಬಗ್ಗೆ ಮಾತನಾಡುವುದು ಸೂಕ್ತ.
Though I enjoyed my previous assignment, currently I am looking for an organization which would provide me with greater learning opportunities. In my previous assignment as a process associate for nearly 2 years, I learnt the basics of medical insurance documentation. Now I am looking for a more challenging assignment with enhanced learning opportunities.
2. What has been the most challenging aspect of your previous work?
Answer:
Working successfully with teams, meeting sharp deadlines and also
creating and sustaining working relationships between colleagues of diverse  temperaments and worldviews.
ಈ ಮೇಲಿನ ಉತ್ತರದಲ್ಲಿ ಖಚಿತವಾಗಿ ನಾವು ಏನು ಸಾಧಿಸಿದ್ದೇವೆ ಮತ್ತು ನಮ್ಮ ಮುಂದಿನ ವೃತ್ತಿಪರ ಆಶಯಗಳು (professional goals) ಏನೆಂಬುದು ಸ್ಪಷ್ಟವಾಗಿ ಸೂಚಿತವಾಗಿದೆ. ಇದರಿಂದ, ಎಲ್ಲಾ ವೃತ್ತಿಸಂದರ್ಭಗಳಲ್ಲೂ ಅತ್ಯಂತ ಉಪಯುಕ್ತವಾದ ಅಂತರ್‌ವ್ಯಕ್ತಿ ಕೌಶಲ (interpersonal skill) ನಮಗಿದೆ ಎಂಬುದು ಸಾಬೀತಾಗುತ್ತದೆ.
3. Have you ever faced a problem with your supervisor?
ಈ ಪ್ರಶ್ನೆಗೆ ನಾವು ನೇರವಾದ ಉತ್ತರವನ್ನು ಕೊಡಲು ಸಾಧ್ಯವಿಲ್ಲ. ಯಾವುದಾದರೊಂದು ಸನ್ನಿವೇಶವನ್ನು ವಿವರಿಸಿ, ಆ ಸಂದರ್ಭದಲ್ಲಿ ಹೇಗೆ ನಮ್ಮ ಮತ್ತು supervisorನ ನಡುವೆ ಉದ್ಭವಿಸಿದ ಸಂವಹನ ಸಮಸ್ಯೆಗಳನ್ನು ಜಾಣತನದಿಂದ ನಿವಾರಿಸಿದ ರೀತಿಯ ಬಗ್ಗೆ ಹೇಳಬಹುದು.
ಸಂದರ್ಶನದಲ್ಲಿ, ನಾವು ಹಿಂದಿನ ವೃತ್ತಿ ಅನುಭವದ ಬಗ್ಗೆ ಮಾತನಾಡುವಾಗ ಆದಷ್ಟೂ ನಿರ್ದಿಷ್ಟವಾದ ಮಾಹಿತಿ ನೀಡಬೇಕು. ನಾವು ಯಶಸ್ವಿಯಾಗಿ ತೊಡಗಿಸಿಕೊಂಡ ಹಾಗೂ ಗುರಿಮುಟ್ಟಿಸಿದ projectಗಳ ಬಗ್ಗೆ ಖಚಿತವಾದ ವಿವರಗಳನ್ನು ನೀಡಬೇಕು ಹಾಗೂ ಅವಕಾಶವಿರುವ ಕಡೆ ನಮ್ಮ ಯಾವ ಗುಣಗಳು ಯಶಸ್ಸಿಗೆ ಕಾರಣವಾಗಿವೆ ಎಂಬುದನ್ನು ಜಂಬದ ಲೇಪವಿಲ್ಲದಂತೆ ಸೂಕ್ಷ್ಮವಾಗಿ ವಿವರಿಸಬೇಕು.
ಇತರ ಕೆಲವು ಪ್ರಮುಖ ಸಂದರ್ಶನ ಪ್ರಶ್ನೆಗಳು
ಸಂದರ್ಶನದಲ್ಲಿ ಕೇಳಬಹುದಾದ ಇನ್ನೂ ಕೆಲವು ಮುಖ್ಯ ಪ್ರಶ್ನೆಗಳು ಹಾಗೂ ಅವುಗಳಿಗೆ ಕೊಡಬಹುದಾದ ಸೂಕ್ತ ಉತ್ತರಗಳನ್ನು ಗಮನಿಸಿ:
1. What do you find interesting about this job?
Ans: I sense that this job would provide me a platform to move to the next level in
        terms of actualizing my potential abilities and I also feel certain that this is a bigger challenge compared to the one that I have been exposed to before.
ಈ ರೀತಿಯ ಉತ್ತರ, ನಮ್ಮಲ್ಲಿರುವ ಆತ್ಮವಿಶ್ವಾಸ ಮತ್ತು ಕಲಿಕೆಯ ಹಂಬಲವನ್ನು ವ್ಯಕ್ತಪಡಿಸುತ್ತದೆ.
2. Why should the organization hire you?
ಈ ಪ್ರಶ್ನೆಗೆ ಉತ್ತರಿಸುವಾಗ, ನಮ್ಮ ಸಾಮರ್ಥ್ಯದ ಬಗ್ಗೆ ನಮಗಿರುವ ನಂಬಿಕೆಯನ್ನು ವಿನಯದಿಂದ ವ್ಯಕ್ತಪಡಿಸಬೇಕು. ಈ ಸಂದರ್ಭದಲ್ಲಿ ನಮ್ಮ ಬಗ್ಗೆ ಅತಿ ಎನಿಸುವಂತಹ ವಿಶ್ವಾಸವನ್ನು (over confidence) ತೋರ್ಪಡಿಸಬಾರದು.
Ans: Because I think my current skills set matches the needs of this job which I think are among other things, ability to work with teams, promote interpersonal effectiveness and meet deadlines successfully. I am looking forward to and confident of making a contribution in this direction.
3. Where do you see yourself in the next 10 years?
Ans: In the rapidly changing world today. 10 years is really a long time to think about.
But I can say confidently that in long run I would be equipping myself with the skills necessary to move up to a leadership position in the company.
ಈ ರೀತಿಯ ಉತ್ತರವನ್ನು ಕೊಡುವಾಗ ನಮ್ಮ ಪ್ರತಿಕ್ರಿಯೆ ವಿನಯಪೂರ್ವಕವಾಗಿಯೂ, ವಾಸ್ತವದ ಸ್ಪರ್ಶ ಇರುವಂಥದ್ದೂ ಆಗಿರಬೇಕು.
4. What made you choose this field of work?
ನಮ್ಮ ಕೆಲಸದ ಆಯ್ಕೆಯ ನಿರ್ಧಾರದ ಬಗ್ಗೆ ಮಾತನಾಡುವಾಗ ನಮ್ಮ ಉತ್ತರ ದೃಢವಾಗಿರಬೇಕು.
It has always been my passion to work in this field. It gives me ample chances to utilize my competence to the fullest which results in a better growth personally and professionally.
ಈ ಮೇಲಿನ ಉತ್ತರದ ಮಾದರಿಗಳನ್ನು ಗಮನಿಸಿದಾಗ, ಅಲ್ಲಿ ಕೆಲವು language functionಗಳು ಅಡಕವಾಗಿರುವುದು ಕಂಡು ಬರುತ್ತವೆ. ಇವುಗಳಲ್ಲಿ ಕೆಲವೆಂದರೆ eexplaining, summarizing, communicating statistical information, narratingg ಮುಂತಾದವುಗಳು. ಈ language function ಗಳನ್ನು ಕರಗತ ಮಾಡಿಕೊಂಡರೆ ಅವು ಹತ್ತಾರು ವಿಧದ ಸಂದರ್ಶನಗಳಲ್ಲಿ ಸಂದರ್ಭಕ್ಕೆ ತಕ್ಕಂತೆ ನಮ್ಮ ನೆರವಿಗೆ ಬರುತ್ತವೆ.
ಮಾಹಿತಿಗೆ: 98452 13417 

ಸತ್ಯಾರ್ಥಿಗೆ ನೊಬೆಲ್‌, ಆರ್ಕುಟ್‌ ಸ್ಥಗಿತ

* ಅ.1: ಭಾರತದ ಮಹಿಳಾ ಬಾಕ್ಸರ್‌ ಮೇರಿ ಕೋಮ್‌ ಏಷ್ಯಾನ್‌ ಗೇಮ್ಸ್‌ನಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡರು. ಮೇರಿ ಕೋಮ್‌ ಏಷ್ಯಾನ್‌ ಗೇಮ್ಸ್‌ನಲ್ಲಿ ಪಡೆದ ಮೊದಲ ಚಿನ್ನದ ಪದಕ ಇದಾಗಿದೆ.
* ಅ. 2: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಗಾಂಧಿ ಜಯಂತಿ ದಿನ ದೇಶದಾದ್ಯಂತ ‘ಸ್ವಚ್ಛ ಭಾರತ’ ಅಭಿಯಾನಕ್ಕೆ ಚಾಲನೆ ನೀಡಿದರು. ದೆಹಲಿಯ ಕೊಳೆಗೇರಿ ಪ್ರದೇಶದಲ್ಲಿ ಕಸ ಗುಡಿಸಿ ಅಭಿಯಾನಕ್ಕೆ ಚಾಲನೆ ನೀಡಿದರು.
* ಅ. 3: ಬಿಹಾರದ ರಾಜಧಾನಿ ಪಟ್ನಾದ ಗಾಂಧಿ ಮೈದಾನದಲ್ಲಿ ದಸರಾ ಪ್ರಯುಕ್ತ ಏರ್ಪಡಿಸುವ ದೇವತೆಗಳ ಉತ್ಸವ ಸಂದರ್ಭದಲ್ಲಿ ಕಾಲ್ತುಳಿತದಿಂದ 32 ಜನರು ಮೃತಪಟ್ಟು 15 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
* ಅ. 4 : ಗೂಗಲ್‌ನ ಸಾಮಾಜಿಕ ಜಾಲತಾಣವಾಗಿದ್ದ ‘ಆರ್ಕುಟ್‌’ಅನ್ನು ಸ್ಥಗಿತಗೊಳಿಸುವುದಾಗಿ ಗೂಗಲ್‌ ಕಂಪೆನಿ ಘೋಷಿಸಿತು. ಫೇಸ್‌ಬುಕ್‌ ಮತ್ತು ಟ್ವಿಟ್ಟರ್‌ ಜನಪ್ರಿಯವಾದ ಹಿನ್ನೆಲೆಯಲ್ಲಿ ‘ಆರ್ಕುಟ್‌’ ಬಳಸುವವರ ಸಂಖ್ಯೆ ಕಡಿಮೆಯಾದ್ದರಿಂದ ಸ್ಥಗಿತಗೊಳಿಸಲಾಯಿತು ಎಂದು ಕಂಪೆನಿ ತಿಳಿಸಿತು.
* ಅ. 5: ಮಹೇಂದ್ರ ಸಿಂಗ್‌ ದೋನಿ ನೇತೃತ್ವದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವು 2014 ರ ಚಾಂಪಿಯನ್‌ ಲೀಗ್‌ ಕ್ರಿಕೆಟ್‌ ಟ್ರೋಪಿಯನ್ನು ಗೆದ್ದುಕೊಂಡಿತು. ಬೆಂಗಳೂರಿನಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಕೆಕೆಆರ್‌ ತಂಡವನ್ನು ಮಣಿಸಿತು.
* ಅ.5: ರಾಜಸ್ತಾನದ ಬಿಕನೇರ್‌ ಸಮೀಪದಲ್ಲಿ ‘ಆಲಿವ್‌’ ಮರದ ಎಣ್ಣೆ ತಯಾರಕ ಘಟಕವನ್ನು ರಾಜಸ್ತಾನ ಸರ್ಕಾರ ಆರಂಭಿಸಿತು. ಆ ಮೂಲಕ ಭಾರತದಲ್ಲೇ ಆಲಿವ್‌ ಮರದ ಎಣ್ಣೆ ಘಟಕ ಆರಂಭಿಸಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೂ ಪಾತ್ರವಾಯಿತು.
* ಅ. 6: ಸೈಕಲಾಜಿ ಅಥವಾ ಔಷಧಿ ವಿಭಾಗದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಮೂವರು ವಿಜ್ಞಾನಿಗಳಿಗೆ 2014 ನೇ ಸಾಲಿನ ನೊಬೆಲ್‌ ಪ್ರಶಸ್ತಿಯನ್ನು ಘೋಷಿಸಲಾಯಿತು. ಜಾನ್ ಓ ಕೀಫೆ, ಬ್ರಿಟ್‌ ಮೋಸರ್‌ ಮತ್ತು ಎಡ್ವರ್ಡ್‌ ಐ ಈ ಪ್ರಶಸ್ತಿ ಪಡೆದಿದ್ದಾರೆ.
* ಅ.6: ಭಾರತದ ಯಶಸ್ವಿ ಮಂಗಳಯಾನ ಯೋಜನೆ ಕುರಿತಂತೆ ಅಮೆರಿಕದ ‘ನ್ಯೂಯಾರ್ಕ್‌ ಟೈಮ್ಸ್‌’ ಪತ್ರಿಕೆ ಆಕ್ಷೇಪಾರ್ಹ ವ್ಯಂಗ್ಯ ಚಿತ್ರ ಪ್ರಕಟಿಸಿದ್ದಕ್ಕಾಗಿ ಪತ್ರಿಕೆ ಭಾರತದ ಕ್ಷಮೆಯಾಚಿಸಿತು.
* ಅ.9: ರಾಷ್ಟ್ರೀಯ ಸಂಗೀತ ನಾಟಕ ಅಕಾಡೆಮಿ ಅಧ್ಯಕ್ಷ ಸ್ಥಾನಕ್ಕೆ ಲೀಲಾ ಸ್ಯಾಮ್ಸನ್‌ ರಾಜೀನಾಮೆ ನೀಡಿದರು. ಅವರ ರಾಜೀನಾಮೆಯನ್ನು ಕೇಂದ್ರ ಸಂಸ್ಕೃತಿ ಸಚಿವಾಲಯ ಅಂಗೀಕರಿಸಿತು.
* ಅ.9: ಫ್ರಾನ್ಸ್‌ನ ಹಿರಿಯ ಲೇಖಕ ಹಾಗೂ ಜನಪ್ರಿಯ ಕಾದಂಬರಿಕಾರರಾದ ಪ್ಯಾಟ್ರಿಕ್‌ ಮೊಡಿಯಾನೊ 2014 ನೇ ಸಾಲಿನ ಸಾಹಿತ್ಯ ನೊಬೆಲ್‌ ಪ್ರಶಸ್ತಿಯನ್ನು ಪಡೆದರು. ಅವರ ಒಟ್ಟು ಸಾಹಿತ್ಯ ಸೇವೆಗೆ ಈ ಪ್ರಶಸ್ತಿ ಸಂದಿದೆ.
* ಅ,10: 2014 ನೇ ಸಾಲಿನ ನೊಬೆಲ್‌ ಶಾಂತಿ ಪ್ರಶಸ್ತಿಯನ್ನು ಪ್ರಕಟಿಸಲಾಯಿತು. ಭಾರತದ ಕೈಲಾಶ್‌ ಸತ್ಯಾರ್ಥಿ ಮತ್ತು ಪಾಕಿಸ್ತಾನದ ಅತಿ ಕಿರಿಯ ಸಮಾಜ ಸೇವಕಿ ಮಲಾಲಗೆ ಜಂಟಿಯಾಗಿ ಈ ಪ್ರಶಸ್ತಿ ನೀಡಲಾಯಿತು.
* ಅ 11: ಅಮೆರಿಕದ ವೈದ್ಯಕೀಯ ವಿಜ್ಞಾನಿಗಳ ತಂಡವು ಎಚ್‌ಐವಿ ವೈರಾಣುವನ್ನು ನೋಡಬಹದಾದ ಅತಿ ಸೂಕ್ಷ್ಮ ಸಾಧನವನ್ನು ಅಭಿವೃದ್ಧಿಪಡಿಸಿರುವುದಾಗಿ ಪ್ರಕಟಿಸಿದೆ.
* ಅ. 13: ಅರ್ಥಶಾಸ್ತ್ರ ವಿಭಾಗಕ್ಕೆ ನೀಡುವ 2014 ಸಾಲಿನ ನೊಬೆಲ್‌ ಪ್ರಶಸ್ತಿ ಫ್ರಾನ್ಸ್ ದೇಶದ ಆರ್ಥಿಕ ತಜ್ಞ ಜಿನ್‌ ಟಿರೋಲ್‌ ಅವರಿಗೆ ಸಂದಿದೆ.
* ಅ. 14 : ಬಾಲಿವುಡ್‌ನ ಖ್ಯಾತ ಚಿತ್ರ ಸಾಹಿತಿ ’ಸಮೀರ್‌’ ಅವರಿಗೆ 2013ನೇ ಸಾಲಿನ ರಾಷ್ಟ್ರೀಯ ಕಿಶೋರ್‌ ಕುಮಾರ್‌ ಪ್ರಶಸ್ತಿ ಲಭಿಸಿತು.
* ಅ.14 : ಯಮನ್‌ ದೇಶದ ಪ್ರಧಾನಿಯಾಗಿ ಖಲೇದ ಬ್ಹಾ ಅವರನ್ನು ನೇಮಕ ಮಾಡಲಾಯಿತು.
* ಅ.15: ಆಸ್ಟ್ರೇಲಿಯಾದ ಲೇಖಕ ರಿಚರ್ಡ್‌ ಪ್ಲಾನಗನ್‌ ಅವರಿಗೆ 2014 ನೇ ಸಾಲಿನ ಮ್ಯಾನ್‌ ಆಫ್‌ ದಿ ಬೂಕರ್‌ ಪ್ರಶಸ್ತಿ ಲಭಿಸಿದೆ. ಅವರ ಯುದ್ಧಕಾಲಿನ ಕಾದಂಬರಿ ‘ ದಿ ನ್ಯಾರೊ ರೋಡ್‌ ಟು ದಿ ಡೀಪ್‌ ನಾರ್ತ್‌’ ಕೃತಿಗೆ ಈ ಪುರಸ್ಕಾರ ಸಂದಿದೆ.
* ಅ. 15: ತೆಲುಗಿನ ಖ್ಯಾತ ಬರಹಗಾರ್ತಿ ತುರಗ ಜಾನಕಿ ರಾಣಿ ನಿಧನರಾದರು. ಇವರು ಆಂಧ್ರಪ್ರದೇಶದ ಬಾನುಲಿಯಲ್ಲಿ ಸುದ್ದಿ ನಿರೂಪಕಿಯಾಗಿ ಭಾರೀ ಜನಪ್ರಿಯತೆ ಪಡೆದಿದ್ದರು.
* ಅ. 17: ಕರ್ನಾಟಕ ರಾಜ್ಯದ 12 ನಗರಗಳ ಮರು ನಾಮಕರಣಕ್ಕೆ ಕೇಂದ್ರ ಗೃಹ ಸಚಿವಾಲಯ ಅನುಮೋದನೆ ನೀಡಿತು. ನಗರಗಳ ಹೆಸರು ಬದಲಾವಣೆಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರಕ್ಕೆ ವಿಶೇಷ ಮನವಿ ಮಾಡಿದ್ದರು.
* ಅ. 18: ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕಾಗಿ ವಿಶೇಷ ಆರೋಗ್ಯ ಯೋಜನೆಯನ್ನು ಪ್ರಕಟಿಸಿತು. ಅದನ್ನು ಜಮ್ಮು ಕಾಶ್ಮೀರ ಆರೋಗ್ಯ ಗ್ರಾಮ ಯೋಜನೆ ಎಂದು ಕರೆಯಲಾಗುವುದು. ಇದನ್ನು ಕೇಂದ್ರ ಆರೋಗ್ಯ ಸಚಿವರು ಮತ್ತು ಮುಖ್ಯಮಂತ್ರಿ ಓಮರ್‌ ಅಬ್ದುಲ್ಲಾ ಲೋಕಾರ್ಪಣೆ ಮಾಡಿದರು.
* ಅ. 22: ತಿಹರ್‌ ಜೈಲಿನಲ್ಲಿ ಮಹಿಳಾ ಕೈದಿಗಳಿಗಾಗಿ ಇ–ಗ್ರಂಥಾಲಯವನ್ನು ಆರಂಭಿಸಲಾಯಿತು.
* ಅ. 27: ಹರಿಯಾಣ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಮನೋಹರ್‌ ಲಾಲ್‌ ಖಟ್ಟರ್‌ ಅವರು ಪ್ರಮಾಣ ವಚನ ಸ್ವೀಕರಿಸಿದರು. ಹರಿಯಾಣದಲ್ಲಿ ಮೊದಲ ಸಲ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ.
* ಅ. 29: ಪ್ರಸಾರ ಭಾರತೀಯ ಮುಖ್ಯಸ್ಥರಾಗಿ ಸೂರ್ಯ ಪ್ರಕಾಶ್‌ ಅಧಿಕಾರ ಸ್ವೀಕರಿಸಿದರು. ಇವರ ಅಧಿಕಾರ ಅವಧಿ ಮೂರು ವರ್ಷಗಳವರೆಗೆ ಇರಲಿದೆ.
* ಅ. 30: ಕೇಂದ್ರ ಸರ್ಕಾರ ವಿದೇಶದಲ್ಲಿ ಕಪ್ಪು ಹಣ ಇಟ್ಟಿರುವ 615 ಜನರ ಮಾಹಿತಿಯನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿತು.
* ಅ. 31: ದೇವೇಂದ್ರ ಫಡ್ನವೀಸ್‌ ಅವರು ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಶಿವಸೇನಾ ಪಕ್ಷಗಳ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದಿದೆ.

ಓದಲು ಕುಳಿತಾಗ.

ಹದಿಹರೆಯದ ಮಕ್ಕಳು ಓದಲು ಕುಳಿತಾಗ ಇತರರೂ ಟೀವಿ ನೋಡುವುದನ್ನು ಕಡಿಮೆ ಮಾಡಲಿ. ಟೀವಿಯ ಧ್ವನಿ ಆದಷ್ಟು ಸಣ್ಣದಾಗಿರಲಿ.

* ಬಹಳಷ್ಟು ಹೊತ್ತು ಓದಲು ಕೂತಾಗ ಹಸಿವಾಗುವುದು ಸಹಜ. ತಾಜಾ ಹಣ್ಣುಗಳು ಯಾವಾಗಲೂ ಅವರ ಕೈಗೆ ಸಿಗುವಂತಿರಲಿ. ಸೌತೆಕಾಯಿ, ಕ್ಯಾರೆಟ್‌ ಸಲಾಡ್‌ ಸಹ ನೀಡಬಹುದು. ಕರಿದ ತಿಂಡಿಗಳಿಂದ ದೂರವಿದ್ದರೆ ಸಾಕು.
* ಹುರಿದ ಬದಾಮಿ, ಒಣದ್ರಾಕ್ಷಿ, ಕಲ್ಲುಸಕ್ಕರೆಯ ಮಿಶ್ರಣದ ಡಬ್ಬವೊಂದನ್ನು ಅವರ ಅಭ್ಯಾಸದ ಟೇಬಲ್‌ ಮೇಲಿರಿಸಬಹುದು. ನಿದ್ದೆ ತಡೆಯಲು, ಆ್ಯಸಿಡಿಟಿ ತಡೆಯಲು ಕಲ್ಲುಸಕ್ಕರೆ ಹಾಗೂ ಒಣದ್ರಾಕ್ಷಿ ಸಹಾಯಕವಾಗಿರುತ್ತವೆ.
* ಓದಿನ ನಡುವೆ ಬಿಡುವು ಬೇಕೆನಿಸಿದಾಗ ಸಂಗೀತ ಕೇಳಲು ಪ್ರೋತ್ಸಾಹಿಸಿ
* ಒಂದೆರಡು ಪ್ಲೇಸ್ಟೇಷನ್‌ ಅಥವಾ ಮೊಬೈಲ್‌ಗಳಲ್ಲಿ ಒಂದೆರಡೇ ಗೇಮ್‌ ಆಡುವುದಾಗಿ ಮಕ್ಕಳು ಕೇಳುವುದು ಸಹಜ. ಆದರೆ ಅದರಲ್ಲಿಯೇ ಅವರು ಕಳೆದುಹೋಗುವ ಸಾಧ್ಯತೆಗಳಿರುತ್ತವೆ. ನಿರ್ದಿಷ್ಟ ಸಮಯದ ನಂತರ ಹೋಗಿ ಎಚ್ಚರಿಸಲು ಮರೆಯದಿರಿ. ಓದಿಗಿಂತ ಮುಂಚೆ ಒಂದಷ್ಟು ಹೊತ್ತು ಆಟವಾಡಲು ಬಿಡುವುದು ಒಳ್ಳೆಯ ಅಭ್ಯಾಸ.
* ಖಾಲಿ ಹೊಟ್ಟೆಯಲ್ಲಿ ಮಕ್ಕಳು ಓದುವುದಾಗಲೀ, ಮಲಗುವುದಾಗಲೀ ಮಾಡಿದರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆದಷ್ಟು ಮಕ್ಕಳಿಗೆ ಕಡಿಮೆ ಮಸಾಲೆ ಇರುವ ಆಹಾರವನ್ನು ಸೇವಿಸಲು ನೀಡಿರಿ.

 

ನೀರು ಕುಡಿಯುವ ಒಣದ್ರಾಕ್ಷಿ

ಸಾಮಗ್ರಿಗಳು: ತುಂಬು (ತೊಟ್ಟು) ತೆಗೆಯದ 2-3 ಒಣದ್ರಾಕ್ಷಿಗಳು (Raisins, Dry Grapes),  ನೀರು, ಲೋಟ.
ವಿಧಾನ: ಒಂದು ಲೋಟದಲ್ಲಿ ಸ್ವಲ್ಪ ನೀರು ತೆಗೆದುಕೊಂಡು, ಅದರೊಳಗೆ 2-3 ತುಂಬು ತೆಗೆಯದ ಒಣ ದ್ರಾಕ್ಷಿಗಳನ್ನು ಹಾಕಿರಿ. 8-10 ಗಂಟೆಗಳ ನಂತರ ದ್ರಾಕ್ಷಿಗಳನ್ನು ಪರೀಕ್ಷಿಸಿ.
ಪ್ರಶ್ನೆ: ಒಣದ್ರಾಕ್ಷಿಗಳಲ್ಲಾದ ಬದಲಾವಣೆಗಳೇನು? ಏಕೆ?
ಉತ್ತರ: ಒಣದ್ರಾಕ್ಷಿಗಳಲ್ಲಿ ನೀರು ತುಂಬಿಕೊಂಡು ಉಬ್ಬುತ್ತವೆ. ಒಣದ್ರಾಕ್ಷಿಯ ಹೊರವಲಯದಲ್ಲಿ ಪಾರಕ ಹಾಗೂ ಅರೆಪಾರಕ ಪರೆ (Permiable and Semipermeable membrane)ಗಳು ಹಾಗೂ ಅದರ ಒಳಾವರಣದಲ್ಲಿ ಜೀವಕೋಶಗಳು ಇವೆ. ಜೀವಕೋಶಗಳೊಳಗೆ ಸಕ್ಕರೆಯ ಅಂಶವುಳ್ಳ ಸಾರೀಕೃತ ದ್ರಾವಣವಿದೆ.
ಒಳಪರಾಸರಣ (Endosmosis) ಕ್ರಿಯೆಯಿಂದ ಲೋಟದಲ್ಲಿಯ ನೀರು ಒಣ ದ್ರಾಕ್ಷಿಯನ್ನು ಸೇರುವುದರಿಂದ ಅವು ಉಬ್ಬುತ್ತವೆ. ಭೂಮಿಯಿಂದ ನೀರು ಬೇರುಗಳ ಮುಖಾಂತರ ಸಸ್ಯದೊಳಗೆ ನುಗ್ಗುವುದು ಪರಾಸರಣ (Osmosis) ದಿಂದಲೇ. ಸಸ್ಯದೊಳಗಿನ ಜೀವಕೋಶಗಳಲ್ಲಿ ಪರಾಸರಣದಿಂದ ನೀರು ಒಂದು ಕೋಶದಿಂದ ಮತ್ತೊಂದಕ್ಕೆ ಹರಿಯುತ್ತದೆ.

 ಸಂದರ್ಶನದಲ್ಲಿ ಉತ್ತರಿಸುವ ಬಗೆ

ಸಂದರ್ಶನಕ್ಕೆ ಕರೆ ಬಂದಾಗ ಸಂತೋಷವೂ ಆತಂಕವೂ ಒಟ್ಟಿಗೇ ಮನಸ್ಸಿನಲ್ಲಿ ಮೂಡುತ್ತದೆ. ಸಂದರ್ಶನದಲ್ಲಿ ಯಶಸ್ವಿಯಾಗಲು ಆತ್ಮವಿಶ್ವಾಸ ಮತ್ತು ಭಾಷಾಕೌಶಲ ಎರಡೂ ಮೇಳೈಸಿದ ವರ್ತನೆಯನ್ನು ನಾವು ಸಿದ್ಧಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ, ಸಂದರ್ಶನದಲ್ಲಿ ನಾವು ಎದುರಿಸಬಹುದಾದ ಪ್ರಶ್ನೆಗಳನ್ನು, ಅವುಗಳಿಗೆ ನೀಡಬೇಕಾದ ಸಮರ್ಪಕ ಉತ್ತರಗಳನ್ನು ಒಮ್ಮೆ ಮನಸ್ಸಿನಲ್ಲಿಯೇ ಪೂರ್ವಸಿದ್ಧತೆ ಮಾಡಿಕೊಂಡಿದ್ದರೆ, ಆ ಪ್ರಯತ್ನ, ಯಶಸ್ಸಿಗೆ ಪೂರಕವಾಗಿರುತ್ತದೆ.
ಸಾಮಾನ್ಯವಾಗಿ ವೃತ್ತಿಸಂದರ್ಶನದಲ್ಲಿ (job interview) ಮೂರು ಬಗೆಯ ಪ್ರಶ್ನೆಗಳು ಕಂಡುಬರುತ್ತವೆ.
1. ವೈಯಕ್ತಿಕ ಗುಣವಿಶೇಷಗಳು (personal traits)
2. ವೃತ್ತಿ ಸಂಬಂಧಿ ಅನುಭವ (work related experience)
3. ಸಂಸ್ಥೆಯ ವಿವರಗಳು ಮತ್ತು ಉದ್ಯೋಗ ವ್ಯಾಪ್ತಿ (company history and job profile)
ಸಂದರ್ಶನದಲ್ಲಿ ಕೇಳಬಹುದಾದ ಕೆಲವು ಸಾಮಾನ್ಯ ಉತ್ತರಗಳನ್ನು ಇಲ್ಲಿ ನೋಡೋಣ:
ನಮ್ಮ ಬಗ್ಗೆ ಒಂದು ಕಿರುಪರಿಚಯವನ್ನು ನಿರೀಕ್ಷಿಸುವ ಪ್ರಶ್ನೆ ಇದು...
1. Tell me briefly about yourself.
ಇಲ್ಲಿ ಮೊದಲನೆಯ ವಾಕ್ಯವನ್ನು I am Ashok  ಎಂದು ಪ್ರಾರಂಭಿಸಬೇಕೇ ಹೊರತು Myself Ashok...  ಎಂದಲ್ಲ. ನಂತರ ನಮ್ಮ ವಿದ್ಯಾರ್ಹತೆ ಬಗ್ಗೆ ಹೇಳಿ, ಭವಿಷ್ಯದಲ್ಲಿ ಹೆಚ್ಚಿನ ಅರ್ಹತೆಗಳನ್ನು ಗಳಿಸುವಂತಹ ಯೋಜನೆಯಿದ್ದಲ್ಲಿ, ಅದನ್ನೂ ಹೇಳಬಹುದು. ಈ ರೀತಿಯ ಉತ್ತರದಿಂದ, ಜ್ಞಾನವನ್ನು ಹೆಚ್ಚಿಸಿಕೊಳ್ಳಲು ನಮಗಿರುವ ಆಸಕ್ತಿಯನ್ನು ವ್ಯಕ್ತಪಡಿಸಬಹುದು. ಇದರಿಂದ ಸಂದರ್ಶಕರಲ್ಲಿ positive impression ಮೂಡುವ ಸಾಧ್ಯತೆ ಹೆಚ್ಚುತ್ತದೆ. ಈಗ ಈ ಉತ್ತರವನ್ನು ಗಮನಿಸಿ:
I am Ashok. I have a post graduation in Biology. Currently I am pursuing a doctorate in Evolutionary Biology. I have always been interested in the natural world and am excited by the joy of learning more and more about it.
2. What do you think is your greatest weakness?
ನಮ್ಮ weakness (ಕೊರತೆ) ಬಗ್ಗೆ ಹೇಳುವಾಗ, ನಾವು ಅದನ್ನು ಸಕಾರಾತ್ಮಕವಾಗಿ ಹೇಳಬೇಕೇ ಹೊರತು ನಕಾರಾತ್ಮಕವಾಗಿ ಅಲ್ಲ.
ಉದಾ:  I have the habit of procrastination. I tend to postpone things. But now I am working on it and my time management skills are getting better. ಈ ಉತ್ತರದಿಂದ ನಮಗೆ ನಮ್ಮ ಕೊರತೆಯ ಅರಿವಿರುವುದರ ಜೊತೆಗೆ ಅದನ್ನು ನಿವಾರಿಸುವ ಪ್ರಾಮಾಣಿಕ ಪ್ರಯತ್ನವೂ ಅಡಗಿರುವ ಅಂಶ ವ್ಯಕ್ತವಾಗುತ್ತದೆ.
3. How do you handle stress?
ಉತ್ತರ: I often work well under pressure. But when things get to be too much, I find myself consciously relaxing, breathing deeply and slowly and sometimes go for long walks.
ಈ ಉತ್ತರದಲ್ಲಿಯೂ ಕೂಡ ನಮ್ಮ ಸಮಸ್ಯೆಯ ಅರಿವು ಹಾಗೂ ಅದನ್ನು ನಿವಾರಿಸಿ ಕೊಳ್ಳುವ ಛಾತಿಯೂ ಪ್ರಕಟಗೊಂಡಿದೆ ಎಂಬುದನ್ನು ಗಮನಿಸಿ.
ಮತ್ತಷ್ಟು ಸಂದರ್ಶನ ಪ್ರಶ್ನೆಗಳು: ವೈಯಕ್ತಿಕ ಗುಣವಿಶೇಷಗಳಿಗೆ ಸಂಬಂಧಿಸಿದಂತೆ, ಸಂದರ್ಶನದಲ್ಲಿ ಕೇಳಬಹುದಾದ ಕೆಲವು ಪ್ರಶ್ನೆಗಳು ಹಾಗೂ ಅವುಗಳಿಗೆ ಕೊಡಬಹುದಾದ ಸೂಕ್ತ ಉತ್ತರಗಳನ್ನು ಗಮನಿಸಿ:
1. What is your career goal?
Ans: I am looking for an opportunity at the senior management level, where I can put my technical and interpersonal abilities to best use towards organizational objective and personal fulfilment.
ಈ ಉತ್ತರದಲ್ಲಿ, ಸ್ಪಷ್ಟತೆ (clarity), ನಿರ್ದಿಷ್ಟತೆ (focus) ಹಾಗೂ ಮಹತ್ವಾಕಾಂಕ್ಷೆ (ambition) ಎಲ್ಲವೂ ಮಿಳಿತವಾಗಿವೆ.
2. Would you prefer taking your work home?
ಇಂತಹ ಪ್ರಶ್ನೆ ನಮ್ಮನ್ನು ಗೊಂದಲಕ್ಕೀಡುಮಾಡುತ್ತದೆ. ಈ ಪ್ರಶ್ನೆಗೆ ನಾವು ಹೌದು ಎಂದು ಉತ್ತರ ಕೊಟ್ಟರೆ, ನಮಗೆ ಕೊಟ್ಟ ಕೆಲಸವನ್ನು ಸಮಯಕ್ಕೆ ಮುಂಚೆ ಮುಗಿಸುವ ಸಾಮರ್ಥ್ಯವಿಲ್ಲವೆಂದಾಗುತ್ತದೆ. ಇಲ್ಲ ಎಂದು ಉತ್ತರಿಸಿದರೆ, ನಮಗೆ ಸಂದರ್ಭಾನುಸಾರ ಹೆಚ್ಚು ಹೊಣೆಗಾರಿಕೆಯನ್ನು ನಿಭಾಯಿಸುವ ಇಷ್ಟವಿಲ್ಲವೆಂದಾಗುತ್ತದೆ. ಹಾಗಾಗಿ, ಇಂತಹ ಸಂದರ್ಭಗಳಲ್ಲಿ ಚತುರತೆಯಿಂದ ಉತ್ತರಿಸಬೇಕು.
ಉದಾ: Usually, I prefer not to take work home because it could sometime affect work-life balance. But under exceptional circumstances I would gladly do so.
3. What is your opinion about corporate-social responsibility?
Ans: I think, it is a very good idea. When properly practised, it can lead to gradual development of infrastructure that benefits everybody.
4. What steps would you take to slove a problem?
ಇಲ್ಲಿ ನಮ್ಮ ಉತ್ತರದಿಂದ, ತರ್ಕಬದ್ಧವಾಗಿ ತೀರ್ಮಾನ ತೆಗೆದುಕೊಳ್ಳುವ ನಮ್ಮ ಜಾಣ್ಮೆಯ ಪರಿಚಯವನ್ನು ಸಂದರ್ಶಕರಿಗೆ ಮಾಡಿಕೊಡಬಹುದು.
I would grasp the situation and decide on, what needs to be done and consider the options and the resources available. Finally, choose the best course of action under the circumstances.
ಮೇಲಿನ ಪ್ರಶ್ನೆಗಳ ಸ್ವರೂಪವನ್ನು ಸ್ಪಷ್ಟವಾಗಿ ಗಮನಿಸಿದಾಗ, ಸಂದರ್ಶನದಲ್ಲಿ oopen ended questions ಮತ್ತು closed questionsಎಂಬ ಎರಡು ವಿಧದ ಪ್ರಶ್ನೆಗಳು ನಮಗೆದುರಾಗುವುದನ್ನು ಕಾಣಬಹುದು.
Wh What is your date of birth? ಎನ್ನುವಂತಹ ಪ್ರಶ್ನೆಗಳನ್ನು closed questionss ಎನ್ನುತ್ತೇವೆ. ಇಂತಹ ಪ್ರಶ್ನೆಗಳಿಗೆ ಸರಿಯಾದ ಉತ್ತರ ಒಂದೇ ಆಗಿರುತ್ತದೆ. ಆದರೆ ಮೇಲೆ ಕಂಡು ಬರುವ ನಾಲ್ಕು ಪ್ರಶ್ನೆಗಳು open-ended  ಆಗಿವೆ. ಅಂದರೆ, ಇವುಗಳಿಗೆ ಹಲವು ರೀತಿಯಲ್ಲಿ, ಹಲವು ಆಯಾಮಗಳಲ್ಲಿ ಉತ್ತರಿಸಬಹುದು.
ಮೇಲೆ ಹೇಳಿರುವ ಮಾತುಗಳು ಒಂದು ಸ್ಥೂಲ ಪರಿಚಯ ಅಷ್ಟೆ. ಸಂದರ್ಭಾನುಸಾರವಾಗಿ ಸಂದರ್ಶನದಲ್ಲಿ ನಾವು ನಮ್ಮ ಸ್ಫೂರ್ತಿ ಮತ್ತು ಪರಿಣತಿಗಳ ಮಿತಿಯಲ್ಲಿ ಸತ್ಯನಿಷ್ಠವಾದ ಉತ್ತರಗಳನ್ನು ಕೊಟ್ಟಾಗ ನಮ್ಮ ಯಶಸ್ಸಿನ ಸಾಧ್ಯತೆ ಅಗಾಧವಾಗಿ ಹೆಚ್ಚುತ್ತದೆ.

ಕೆಲ್ಸಾ ಬೇಕಾ? ಮಿಸ್ ಕಾಲ್ ಕೊಡಿ!

ಕೆಲಸ ಹುಡುಕಿ ಸುಸ್ತಾಗಿದೆಯೇ? ಹಾಗಿದ್ರೆ, ಅಲೆಯುವುದನ್ನು ಈ ಕೂಡಲೇ ನಿಲ್ಲಿಸಿ ನಮಗೊಂದು ಮಿಸ್‌ ಕಾಲ್‌ ಕೊಡಿ, ನಿಮಗೆ ಕೆಲಸವನ್ನು ನಾವು ಕೊಡಿಸುತ್ತೇವೆ’ ಎನ್ನುತ್ತಿದೆ ಬಾಬಾಜಾಬ್‌.ಕಾಮ್‌. 2007ರಲ್ಲಿ ಆರಂಭಗೊಂಡ ಈ ಸಂಸ್ಥೆ ಈವರೆಗೆ 25 ಲಕ್ಷಕ್ಕೂ ಅಧಿಕ ಜನರಿಗೆ ಕೆಲಸ ಕೊಡಿಸಿದೆ. ಮಧ್ಯವರ್ತಿಗಳ ಹಾವಳಿ ಇಲ್ಲದೇ ಉಚಿತವಾಗಿ ಕೆಲಸ ಕೊಡಿಸುವುದು ಈ ಸಂಸ್ಥೆಯ ಉದ್ದೇಶ.

ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ, ಐಟಿಐ ಹೀಗೆ ಯಾವುದೇ ವಿಷಯದಲ್ಲಿ ಓದಿಕೊಂಡ ಅಭ್ಯರ್ಥಿಗಳು ಇಲ್ಲಿ ಕೆಲಸ ಗಿಟ್ಟಿಸಿಕೊಳ್ಳಬಹುದು. ಕೆಲಸದ ಅಗತ್ಯವಿರುವ ಅಭ್ಯರ್ಥಿಗಳು 888 000 4444 ಹಾಟ್‌ಲೈನ್‌ಗೆ ಮಿಸ್‌ಕಾಲ್‌ ಕೊಟ್ಟರೆ ಅವರಿಗೆ ಮೂರರಿಂದ ಐದು ದಿನದೊಳಗೆ ಕೆಲಸ ದೊರಕಿಸಿಕೊಡುತ್ತದೆ. 18ರಿಂದ 60 ವರ್ಷ ವಯಸ್ಸಿನವರೆಲ್ಲರೂ ಈ ಸೇವೆಯನ್ನು ಪಡೆದುಕೊಳ್ಳಬಹುದು.
ಕೆಲಸ ಗಿಟ್ಟಿಸಿಕೊಳ್ಳುವುದು ಹೇಗೆ?
ಕೆಲಸದ ಅವಶ್ಯಕತೆ ಇರುವ ಅಭ್ಯರ್ಥಿಗಳು ಮೊದಲಿಗೆ ಬಾಬಾಜಾಬ್‌.ಕಾಮ್‌ನ ಹಾಟ್‌ಲೈನ್‌ಗೆ ಮಿಸ್‌ಕಾಲ್‌ ಕೊಡಬೇಕು. ಮಿಸ್‌ ಕಾಲ್‌ ಕೊಟ್ಟವರಿಗೆ ಆ ಕ್ಷಣವೇ ಅವರ ಕಡೆಯಿಂದ ಕರೆ ಬರುತ್ತದೆ. ಕರೆ ಮಾಡಿದವರು ನಿಮ್ಮ ವಿದ್ಯಾರ್ಹತೆ, ಊರು, ವಯಸ್ಸು, ವಿಳಾಸ, ಯಾವ ಬಗೆಯ ಕೆಲಸದ ಹುಡುಕಾಟದಲ್ಲಿದ್ದೀರಾ, ಸಂಬಳ ಎಷ್ಟು ನಿರೀಕ್ಷೆ ಮಾಡುತ್ತಿದ್ದೀರ ಎಂಬ ವಿಷಯದ ಬಗ್ಗೆ ಮಾಹಿತಿ ಪಡೆದುಕೊಂಡು ನೋಂದಣಿ ಮಾಡಿಕೊಳ್ಳುತ್ತಾರೆ.
ಆನಂತರ ಬಾಬಾಜಾಬ್‌.ಕಾಮ್‌ನವರು ನೀವು ನೀಡಿದ ಮಾಹಿತಿಯನ್ನು ಅನುಸರಿಸಿ ನಿಮ್ಮದೊಂದು ಬಯೊಡೇಟಾ ಸಿದ್ಧಪಡಿಸಿ ಅವುಗಳನ್ನು ಕಂಪೆನಿಗಳಿಗೆ ಕಳುಹಿಸಿಕೊಡುತ್ತಾರೆ. ಈ ಪ್ರಕ್ರಿಯೆ ಮುಗಿದ ಎರಡು ಮೂರು ದಿನಗಳಲ್ಲಿ ನಿಮಗೆ ಕಂಪೆನಿಯವರಿಂದ ಕರೆ ಬರುತ್ತದೆ. ಸಂದರ್ಶನ ಎದುರಿಸಿ ಯಶಸ್ವಿಯಾದರೆ ಅಲ್ಲಿ ನಿಮಗೆ ಉದ್ಯೋಗ ಗ್ಯಾರಂಟಿ. ಮಧ್ಯವರ್ತಿಗಳಿಗೆ ಹಣ ನೀಡದೇ ನೀವು ನೇರವಾಗಿ ಕಂಪೆನಿಗಳಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಬಹುದು.
ನಿಮ್ಮ ಏರಿಯಾದಲ್ಲೇ ಉದ್ಯೋಗ
ಫ್ಲಿಫ್‌ಕಾರ್ಟ್‌, ಮಿಂಟ್ರಾ, ಒಲಾ, ಟ್ಯಾಕ್ಸಿ ಫಾರ್‌ ಶ್ಯೂರ್‌, ಡಾಮಿನೋಸ್‌ ಪಿಜ್ಜಾ, ಬಿಗ್‌ಬಜಾರ್‌ ಹೀಗೆ 80 ಸಾವಿರಕ್ಕೂ ಅಧಿಕ ಕಂಪೆನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿರುವ ಬಾಬಾಜಾಬ್‌.ಕಾಮ್‌ ಆ ಕಂಪೆನಿಗಳಿಗೆ ಅಗತ್ಯವಿರುವ ಕೆಲಸಗಾರರನ್ನು ಒದಗಿಸುತ್ತಿದೆ.
‘ನಮ್ಮಲ್ಲಿ ನೋಂದಣಿ ಮಾಡಿಕೊಂಡ ಅಭ್ಯರ್ಥಿಗಳು ಯಾವ ಸ್ಥಳದಲ್ಲಿ ಕೆಲಸ ಮಾಡಲು ಇಚ್ಛಿಸುತ್ತಾರೆ ಎಂಬುದನ್ನು ಅರಿತು ಅದರಂತೆ ಅವರಿಗೆ ಉದ್ಯೋಗ ದೊರಕಿಸಿಕೊಡುವ ಪ್ರಯತ್ನ ಮಾಡುತ್ತೇವೆ. ಉದಾಹರಣೆಗೆ, ಅಭ್ಯರ್ಥಿ ಬೆಂಗಳೂರಿನವರಾಗಿದ್ದರೆ, ಅವರ ವಿದ್ಯಾರ್ಹತೆಗೆ ತಕ್ಕಂತೆ ಅವರು ವಾಸವಿರುವ 8 ಕಿಲೋ ಮೀಟರ್‌ ವ್ಯಾಪ್ತಿಯೊಳಗೆ ಇರುವ ಕಂಪೆನಿಗಳಲ್ಲಿ ಉದ್ಯೋಗ ದೊರಕಿಸಿಕೊಡುತ್ತೇವೆ. ವಿದ್ಯಾರ್ಹತೆ ಇಲ್ಲದವರಿಗೂ ಕೆಲಸಗಳು ಸಾಕಷ್ಟಿವೆ. ಅಂಥವರೂ ನಮಗೆ ಮಿಸ್‌ಕಾಲ್‌ ಕೊಟ್ಟರೆ ನಾವು ಕೆಲಸ ಕೊಡಿಸುತ್ತೇವೆ’ ಎನ್ನುತ್ತಾರೆ ಬಾಬಾಜಾಬ್‌. ಕಾಮ್‌ನ ಮಾರಾಟ ವಿಭಾಗದ ಮುಖ್ಯಸ್ಥ ಅಂಜನ್‌ ಕುಮಾರ್‌.
ಮಹಿಳಾ ಅಭ್ಯರ್ಥಿಗಳಿಗೆ ಡಿಮ್ಯಾಂಡ್‌
ಉದ್ಯೋಗ ಮಾಡಲು ಬಯಸುವ ಹೆಣ್ಣು ಮಕ್ಕಳಿಗೆ ಇಂದು ಹಲವು ಕ್ಷೇತ್ರಗಳಲ್ಲಿ ಬೇಡಿಕೆ ಇದೆ. ವಿದ್ಯಾರ್ಹತೆ ಇಲ್ಲದವರು ಸಹ ಹೌಸ್‌ ಕೀಪಿಂಗ್‌ ಕೆಲಸ ಮಾಡಿ ಎಂಟ್ಹತ್ತು ಸಾವಿರ ದುಡಿಮೆ ಮಾಡಬಹುದು. ‘ಮಹಿಳಾ ಅಭ್ಯರ್ಥಿಗಳಿಗೆ ಕಂಪೆನಿ ಕಡೆಗಳಿಂದ ತುಂಬ ಡಿಮ್ಯಾಂಡ್‌ ಇದೆ. ಅದರಲ್ಲೂ ಮಹಿಳಾ ಕ್ಯಾಬ್‌ ಡ್ರೈವರ್‌ಗಳು ಬೇಕೆಂದು ಕೇಳುವ ಐಟಿ ಕಂಪೆನಿಗಳ ಸಂಖ್ಯೆ ಹೆಚ್ಚಿವೆ.
ನಮ್ಮ ಕಡೆಯಿಂದ ಉದ್ಯೋಗ ಪಡೆದ ಮಹಿಳಾ ಡ್ರೈವರ್‌ಗಳು ಈಗ ತಿಂಗಳಿಗೆ ಏನಿಲ್ಲವೆಂದರೂ ₨15ರಿಂದ 20 ಸಾವಿರದಷ್ಟು ಹಣ ಸಂಪಾದನೆ ಮಾಡುತ್ತಾರೆ. ಹೆಚ್ಚಿನ ವಿದ್ಯಾಭ್ಯಾಸ ಮಾಡಿದವರು ಡೊಮೆಸ್ಟಿಕ್‌ ಕಾಲ್‌ಸೆಂಟರ್‌ನಲ್ಲೂ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ’ ಎಂಬ ಮಾಹಿತಿ ನೀಡುತ್ತಾರೆ ಅಂಜನ್‌.
ಹೊಸದಾಗಿ ಎಂಜಿನಿಯರಿಂಗ್‌ ಪದವಿ ಪಡೆದ ಅಭ್ಯರ್ಥಿಗಳಿಗೂ ನೀವು ಕೆಲಸ ದೊರಕಿಸಿಕೊಡುತ್ತೀರಾ ಎಂಬ ಪ್ರಶ್ನೆಗೆ ಅಂಜನ್‌ ಉತ್ತರಿಸಿದ್ದು ಹೀಗೆ: ‘ವರ್ಷಕ್ಕೆ 80 ಸಾವಿರ ಎಂಜಿನಿಯರಿಂಗ್‌ ಪದವೀಧರರು ತಯಾರಾಗುತ್ತಿದ್ದಾರೆ. ಅವರೆಲ್ಲರಿಗೂ ಒಳ್ಳೆಯ ಕಂಪೆನಿಗಳಲ್ಲಿ ದೊಡ್ಡ ಮೊತ್ತದ ಸಂಬಳ ದೊರಕುವುದು ತುಸು ಕಷ್ಟವೇ ಸರಿ. ಓದಿಗೆ ತಕ್ಕ ಕೆಲಸವೇ ಬೇಕು ಎಂದು ಕುಳಿತರೆ ಅವರಿಗೆ ಕೆಲಸದ ಅನುಭವವೇ ಆಗುವುದಿಲ್ಲ.
ಹಾಗಾಗಿ, ಒಳ್ಳೆ ಕೆಲಸ ಸಿಗುವವರೆಗೆ ಬೇರೆ ಕ್ಷೇತ್ರಗಳಲ್ಲಿ ಕೆಲಸ ಮಾಡಿ ಒಳ್ಳೆ ಕೌಶಲ ಪಡೆಯುವತ್ತ ಗಮನ ಹರಿಸಬೇಕು. ಆನಂತರವಷ್ಟೇ ಅವರ ಕೌಶಲಕ್ಕೆ ತಕ್ಕ ಕೆಲಸ ಕೊಡಿಸುವುದು ಸಾಧ್ಯ’. ಅಂದಹಾಗೆ, ಬಾಬಾಜಾಬ್‌.ಕಾಮ್‌ನಲ್ಲಿ ನೋಂದಣಿ ಮಾಡಿಸಿಕೊಂಡವರಿಗೆ ಹೆಚ್ಚಾಗಿ ಬಿಪಿಒ, ಸೇಲ್ಸ್‌ ಅಂಡ್‌ ಮಾರ್ಕೆಟಿಂಗ್‌, ಡೆಲಿವರಿ ಬಾಯ್ಸ್‌, ಡ್ರೈವರ್‌, ರೀಟೇಲ್‌ ಸೆಕ್ಟರ್‌ನಲ್ಲಿ ಉದ್ಯೋಗವಕಾಶ ದೊರಕಿಸಿಕೊಡಲಾಗುತ್ತದೆ.
ಕಡಿಮೆ ಓದಿದವರಿಗೆ ಬಾಬಾಜಾಬ್.ಕಾಮ್‌ ಒಳ್ಳೆ ಸಂಬಳದ ಕೆಲಸವನ್ನೇನೋ ದೊರಕಿಸಿಕೊಡುತ್ತಿದೆ. ಆದರೆ, ಹೆಚ್ಚು ಓದಿದವರಿಗೆ ಇಲ್ಲಿ ಸೂಕ್ತ ಉದ್ಯೋಗ ಸಿಗುತ್ತದೆ ಎಂದು ಹೇಳಲಾಗುವುದಿಲ್ಲ. ಕೌಶಲ ಪಡೆದುಕೊಂಡ ಅಭ್ಯರ್ಥಿಗಳಿಗೆ ಮಾತ್ರ ಒಳ್ಳೆ ಕೆಲಸ ಕೊಡಿಸುವ ಭರವಸೆಯನ್ನಂತೂ ಅದು ಭಿತ್ತುತ್ತಿದೆ.
ಕಂಪೆನಿಗಳು ಮತ್ತು ಉದ್ಯೋಗಾಕಾಂಕ್ಷಿಗಳ ನಡುವಿನ ಅಂತರವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸುತ್ತಿರುವ ಬಾಬಾಜಾಬ್‌.ಕಾಮ್‌ ಮುಂದಿನ ದಿನಗಳಲ್ಲಿ ಅಭ್ಯರ್ಥಿಗಳ ಓದಿಗೆ ತಕ್ಕಂತಹ ಉತ್ತಮ ಉದ್ಯೋಗವಕಾಶವನ್ನು ದೊರಕಿಸಿಕೊಡುವ ಕನಸು ಹೊಸೆಯುತ್ತಿದೆ.
ನಯಾಪೈಸೆ ಖರ್ಚಿಲ್ಲ
ಮೈಕ್ರೋಸಾಫ್ಟ್‌ ಕಂಪೆನಿ ಉದ್ಯೋಗಿಯಾಗಿದ್ದ ಅಮೆರಿಕದ ಸಿಯಾನ್‌ ಬ್ಲಾಗ್‌ಸ್ವೆಟ್‌ ಅವರಿಗೆ ಒಮ್ಮೆ ಮನೆಗೆಲಸದವರು ಸಿಗದೆ ತುಂಬ ತೊಂದರೆ ಅನುಭವಿಸಿದರು. ಮನೆ ಕೆಲಸದವರನ್ನು ಹುಡುಕಲು ಅವರು ದಲ್ಲಾಳಿಗೆ ಸಾಕಷ್ಟು ಹಣ ನೀಡಬೇಕಾಯ್ತು. ಆಗ ಅವರಿಗೆ ಮಧ್ಯವರ್ತಿಗಳ ಹಾವಳಿಯಿಲ್ಲದೇ ಕೆಲಸಗಾರರು ಸಿಗುವಂತೆ ಮಾಡಬೇಕು ಎಂಬ ಯೋಚನೆ ಬಂದಾಗ ಹುಟ್ಟಿಕೊಂಡಿದ್ದೇ ಬಾಬಾಜಾಬ್‌.ಕಾಮ್‌. ಬಾಬ್‌ಜಾಬ್‌ ಮುಖಾಂತರ ಅಭ್ಯರ್ಥಿಗಳು ನಯಾಪೈಸೆ ಖರ್ಚು ಮಾಡದೇ ಉದ್ಯೋಗ ದೊರಕಿಸಿಕೊಳ್ಳಬಹುದು. ಮಾಹಿತಿಗೆ: www.babajob.com
 

 

*ಸೆ.1: ಜಿಂಬಾಬ್ವೆ ರಾಜಧಾನಿ ಹರಾರೆಯಲ್ಲಿ ನಡೆದ ಆಸ್ಟ್ರೇಲಿಯಾ ಮತ್ತು ಜಿಂಬಾಬ್ವೆ ನಡುವಿನ ಏಕದಿನ ಕ್ರಿಕೆಟ್‌ ಪಂದ್ಯದಲ್ಲಿ ಜಿಂಬಾಬ್ವೆ 31 ವರ್ಷಗಳ ಬಳಿಕ ಆಸ್ಟ್ರೇಲಿಯಾ ತಂಡವನ್ನು ಮಣಿಸುವ ಮೂಲಕ ನೂತನ ದಾಖಲೆ ಬರೆಯಿತು.
*ಸೆ.2: ಭಾರತದ ಮಾಜಿ ಅಟಾರ್ನಿ ಜನರಲ್‌ ಜಿ. ಇ. ವಹನ್ವತಿ ನಿಧನರಾದರು. ಅವರು ಸುಪ್ರಿಂ ಕೋರ್ಟ್‌ನಲ್ಲಿ ನ್ಯಾಯಾಧೀಶರಾಗಿದ್ದರು.
*ಸೆ.3: ಸಾರ್ವಜನಿಕ ಸ್ಥಳ ಹಾಗೂ ಧಾರ್ಮಿಕ ಕೇಂದ್ರಗಳಲ್ಲಿ ಪ್ರಾಣಿ ಬಲಿಯನ್ನು ನಿಷೇಧಿಸುವಂತೆ ಹಿಮಾಚಲ ಪ್ರದೇಶ ಹೈಕೋರ್ಟ್‌ ಸರ್ಕಾರಕ್ಕೆ ಮಹತ್ವದ ನಿರ್ದೇಶನ ನೀಡಿತು.
*ಸೆ.3: ಸುಪ್ರಿಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಪಿ. ಸದಾಶಿವಂ ಅವರನ್ನು ಕೇಂದ್ರ ಸರ್ಕಾರ ಕೇರಳ ರಾಜ್ಯದ ರಾಜ್ಯಪಾಲರನ್ನಾಗಿ ನೇಮಕ ಮಾಡಿತು.
*ಸೆ.3: ಸುಪ್ರಿಂ ಕೋರ್ಟ್‌ನ 42ನೇ ಮುಖ್ಯ ನ್ಯಾಯಮೂರ್ತಿಯನ್ನಾಗಿ ಕನ್ನಡಿಗ ಎಚ್‌.ಎಲ್‌ ದತ್ತು ಅವರನ್ನು ನೇಮಕ ಮಾಡಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಆದೇಶ ಹೊರಡಿಸಿದರು.
*ಸೆ. 4: ನ್ಯಾಯಮೂರ್ತಿ ಧರ್ಮಾಧಿಕಾರಿ ನೇತೃತ್ವದ ಸಮಿತಿ ಮಹಾರಾಷ್ಟ್ರದಲ್ಲಿ ಎಲ್ಲಾ ರೀತಿಯ ಡ್ಯಾನ್ಸ್‌ ಬಾರ್‌ಗಳನ್ನು ನಿಷೇಧಿಸುವಂತೆ ಬಾಂಬೆ ಹೈಕೋರ್ಟ್‌ಗೆ ವರದಿ ಸಲ್ಲಿಸಿತು.
*ಸೆ.4: ಅಮೆರಿಕದ ಖ್ಯಾತ ಹಾಸ್ಯಗಾರ ಹಾಗೂ ಭಾಷಣಕಾರ ಜಾನ್‌ ರಿವರ್‌ ನಿಧನರಾದರು. ಅವರು ವಿಶ್ವದಾದ್ಯಂತ ಹಲವಾರು ಹಾಸ್ಯ ಕಾರ್ಯಕ್ರಮಗಳನ್ನು ನೀಡುವ ಮೂಲಕ ಜನಪ್ರಿಯರಾಗಿದ್ದರು.
*ಸೆ.5: ಬೌದ್ಧ ಗುರು ದಲೈಲಾಮ ಅವರಿಗೆ ದಕ್ಷಿಣ ಆಫ್ರಿಕಾ ಸರ್ಕಾರ ವೀಸಾ ನೀಡಲು ನಿರಾಕರಿಸಿತು. ದಲೈಲಾಮ ಅವರನ್ನು ನೊಬೆಲ್‌ ಪ್ರಶಸ್ತಿ ಪ್ರದಾನ ಸಮಿತಿಯು ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಆಹ್ವಾನಿಸಿತ್ತು.
*ಸೆ.5: ರಾಷ್ಟ್ರೀಯ ಸಣ್ಣ ಕೈಗಾರಿಕ ನಿಗಮದ (ಎನ್‌ಎಸ್‌ಐಸಿ) ವ್ಯವಸ್ಥಾಪಕ ನಿರ್ದೇಶಕರಾಗಿ ರವೀಂದ್ರನಾಥ್‌ ಅಧಿಕಾರ ಸ್ವೀಕರಿಸಿದರು. ಅವರು ಈ ಹಿಂದೆ ರಾಷ್ಟ್ರೀಯ ಕೈಗಾರಿಕ ಹಣಕಾಸು ನಿಗಮದಲ್ಲಿ ಉನ್ನತ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.
*ಸೆ.5: ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಅಡ್ವಾನ್ಸ್‌ ಸ್ಟಡಿ (ಐಐಎಎಸ್‌)ಯ ಮುಖ್ಯಸ್ಥರಾಗಿ ಚಂದ್ರಕಲಾ ಪಾಡಿಯ ಅವರು ನೇಮಕಗೊಂಡರು. ಪಾಡಿಯಾ ಅವರು ಈ ಸಂಸ್ಥೆಗೆ ನೇಮಕಗೊಂಡ ಮೊದಲ ಮಹಿಳಾ ಅಧ್ಯಕ್ಷರಾಗಿದ್ದಾರೆ.
*ಸೆ.6: ಆಸ್ಟ್ರೇಲಿಯಾದ ಪ್ರಧಾನಿ ಟೋನಿ ಅಬ್ಬಾಟ್‌ ಅವರು 11ನೇ ಶತಮಾನದ ಭಾರತೀಯ ವಿಗ್ರಹಗಳನ್ನು ಭಾರತ ಸರ್ಕಾರಕ್ಕೆ ಒಪ್ಪಿಸುವುದಾಗಿ ಪ್ರಕಟಿಸಿದರು. ಈ ವಿಗ್ರಹಗಳನ್ನು ಸುಮಾರು ಹತ್ತು ಶತಮಾನಗಳ ಹಿಂದೆ ಕಳವು ಮಾಡಿ ಅವುಗಳನ್ನು ಆಸ್ಟ್ರೇಲಿಯಾದಲ್ಲಿ ಇಡಲಾಗಿತ್ತು.
*ಸೆ.7: ಜವಾಹರ ಲಾಲ್‌ ನೆಹರೂ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಪ್ರಿಯದರ್ಶಿನಿ ಮುಖರ್ಜಿ ಅವರಿಗೆ ಚೀನಾದ ಪ್ರತಿಷ್ಠಿತ ‘ಚೀನಾ ಬುಕ್‌ ಅವಾರ್ಡ್‌’ ಪ್ರಶಸ್ತಿ ಸಂದಿದೆ.
*ಸೆ.8: ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರು ಬಹರೇನ್‌ ದೇಶಕ್ಕೆ ತೆರಳಿದರು. ಬಹರೇನ್‌ ದೇಶಕ್ಕೆ ಭೇಟಿ ನೀಡಿದ ಮೊದಲ ಮಹಿಳಾ ವಿದೇಶಾಂಗ ಸಚಿವೆ ಎಂಬ ಹೆಗ್ಗಳಿಕೆಗೆ ಸುಷ್ಮಾ ಸ್ವರಾಜ್‌ ಪಾತ್ರರಾಗಿದ್ದಾರೆ.
*ಸೆ.9: ಭಾರತದ ವೃತ್ತಿಪರ ಸ್ನೂಕರ್‌ ಆಟಗಾರ ಪಂಕಜ್‌ ಅಡ್ವಾಣಿ ನಿವೃತ್ತಿ ಘೋಷಿಸಿದರು. ಪಂಕಜ್‌ ಸ್ನೂಕರ್‌ ವಿಶ್ವ ಕಿರೀಟ ಸೇರಿದಂತೆ ಹಲವಾರು ಅಂತರರಾಷ್ಟ್ರೀಯ ಟ್ರೋಫಿಗಳನ್ನು ಜಯಿಸಿದ್ದಾರೆ.
*ಸೆ.10: ಭಾರತದ ಹಿರಿಯ ಐಎಎಸ್‌ ಅಧಿಕಾರಿ ಸುಭಾಶ್‌ ಚಂದ್ರ ಗಾರ್ಗ್‌ ಅವರನ್ನು ವಿಶ್ವಬ್ಯಾಂಕ್‌ನ ಎಕ್ಸಿಕ್ಯೂಟಿವ್‌ ನಿರ್ದೇಶಕರನ್ನಾಗಿ ನೇಮಕ ಮಾಡಲಾಯಿತು.
*ಸೆ.11: ಸ್ವಾತಂತ್ರ್ಯ ಹೋರಾಟಗಾರ ಮತ್ತು ಹಿರಿಯ ಪತ್ರಕರ್ತ ಜಿತೇಂದ್ರ ಪಾಲ್‌ ನಿಧನರಾದರು. ಅವರು ಸ್ವಾತಂತ್ರ್ಯ ಪೂರ್ವದ ಹಲವು ಪತ್ರಿಕೆಗಳಲ್ಲಿ ವರದಿಗಾರರಾಗಿ ಕೆಲಸ ಮಾಡಿದ್ದರು.
*ಸೆ.12: ಬಾಲಿವುಡ್‌ನ ಹಿರಿಯ ನಟ ನಾಸಿರುದ್ದೀನ್‌ ಶಾ ಅವರ ಆತ್ಮಕತೆ ‘ಅಂಡ್‌ ದೆನ್‌ ಒನ್‌ ಡೇ: ಎ ಮೆಮೊರ್‌’(And then One Day: A Memoir) ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.
*ಸೆ.13: ಐಎಸ್‌ಐಎಸ್‌ ಉಗ್ರರು ಬ್ರಿಟಿಷ್‌ ಪ್ರಜೆ ಡೇವಿಡ್‌ ಹೇನ್ಸ್‌ ಅವರ ತಲೆ ಕತ್ತರಿಸಿದ ವಿಡಿಯೊ ತುಣುಕನ್ನು ‘ಜಿಹಾದಿ’ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದರು. ಡೇವಿಡ್‌ ಹೇನ್ಸ್‌ ಅವರನ್ನು ಸಿರಿಯಾ ದೇಶದಿಂದ ಅಪಹರಿಸಲಾಗಿತ್ತು.
*ಸೆ.14: ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ದೆಹಲಿ ಪೊಲೀಸರು ‘ಇ–ಪೊಲೀಸ್‌ ಠಾಣೆಯನ್ನು ಆರಂಭಿಸಿದರು. ಈ ಠಾಣೆಯಲ್ಲಿ ವಾಹನ ಕಳೆದುಕೊಂಡವರು ದೂರು ಸಲ್ಲಿಸಬಹುದು.
*ಸೆ.15: ದೂರದರ್ಶನದಲ್ಲಿ ಸುದ್ದಿ ವಾಚನ ಮಾಡುವ ಮೂಲಕ ದ್ವಿಲಿಂಗಿ ಪದ್ಮಿನಿ ಪ್ರಕಾಶ್‌ ನೂತನ ದಾಖಲೆ ಬರೆದರು.
*ಸೆ.17: ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಎರಡು ದಿನಗಳ ಸೌಹಾರ್ದ ಭೇಟಿಗಾಗಿ ವಿಯೆಟ್ನಾಂ ದೇಶಕ್ಕೆ ಪ್ರಯಾಣ ಬೆಳೆಸಿದರು. ವಿಯೆಟ್ನಾಂ ಸೋಶಿಯಲ್‌ ರಿಪಬ್ಲಿಕ್‌ ದೇಶವಾಗಿವೆ.
*ಸೆ.18: ಲಲಿತಾ ಕುಮಾರ ಮಗಳಂ ಅವರನ್ನು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು.
*ಸೆ.19: ಪ್ರಾಚೀನ ನಳಂದ ವಿಶ್ವವಿದ್ಯಾಲಯವನ್ನು 800 ವರ್ಷಗಳ ಬಳಿಕ ಪುನರಾರಂಭಿಸಲಾಯಿತು.
*ಸೆ.23: ಹಿಂದಿ ಸಾಹಿತಿ ಗೋವಿಂದ್‌ ಮಿಶ್ರಾ 2013ನೇ ಸಾಲಿನ ಸರಸ್ವತಿ ಸಮ್ಮಾನ್‌ ಪ್ರಶಸ್ತಿಯನ್ನು ಸ್ವೀಕರಿಸಿದರು. 2008ರಲ್ಲಿ ಪ್ರಕಟವಾದ ‘ದೂಲ್‌ ಪದೂನ್‌ ಪರ್‌’  ಕಾದಂಬರಿಗೆ ಈ ಪುರಸ್ಕಾರ ಸಂದಿದೆ.
*ಸೆ.24: ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದ ತುಮಕೂರು ಸಮೀಪ ದೇಶದ ಮೊದಲ ಫುಡ್‌ಪಾರ್ಕ್‌ ಘಟಕವನ್ನು ಲೋಕಾರ್ಪಣೆ ಮಾಡಿದರು.
*ಸೆ.25: ಸಚಿನ್‌ ತೆಂಡೂಲ್ಕರ್‌ ಮತ್ತು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಸ್ಟಿವಾ ಅವರು 201*ನೇ ಸಾಲಿನ ಬ್ರಾಡ್‌ಮನ್‌ ಪುರಸ್ಕಾರಕ್ಕೆ ಆಯ್ಕೆಯಾಗಿದ್ದರು.
*ಸೆ. 29: ತಮಿಳುನಾಡಿನ ಮುಖ್ಯಮಂತ್ರಿಯಾಗಿ ಒ ಪನ್ನಿರ್‌ ಸೆಲ್ವಂ ಪ್ರಮಾಣವಚನ ಸ್ವೀಕರಿಸಿದರು.
*ಸೆ.30: ಟರ್ಕಿ ಸರ್ಕಾರ ಶಾಲಾ ಮಕ್ಕಳು ಟ್ಯಾಟು ಹಾಕುವುದರ ಮೇಲೆ ನಿಷೇಧ ಹಾಕಿತು. ಇದನ್ನು ವಿರೋಧಿಸಿ ಸರ್ಕಾರದ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ನೂರಕ್ಕೂ ಹೆಚ್ಚು ಮಕ್ಕಳು ಪೊಲೀಸರ ಗುಂಡಿಗೆ ಬಲಿಯಾದರು.

 


 


 

No comments:

Post a Comment